ಮೈಸೂರು: ಕನ್ನಡ ರಂಗಭೂಮಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ಮೈಸೂರಿನ ರಂಗಾಯಣ, ಕರ್ನಾಟಕದ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆ ನೂರಾರು ರಂಗಕರ್ಮಿಗಳನ್ನು ಸಾವಿರಾರು ರಂಗಾಸಕ್ತರನ್ನು ಸೃಷ್ಠಿಸಿದ ಪ್ರತಿಷ್ಠಿತ ಸಂಸ್ಥೆಯಾಗಿದೆ. ಎಲ್ಲರನ್ನೂ ಒಳಗೊಳ್ಳುವಂತಾಗಬೇಕಾದ ರಂಗಾಯಣ ಪಂಥೀಯ ವಿಭಾಗಗಳಾಗಿ ವರ್ಗೀಕರಣಗೊಳ್ಳುತ್ತಿರುವುದನ್ನು ಸಮಾನ ಮನಸ್ಕ ಚಿಂತಕ ಸಾಹಿತಿ ಕಲಾವಿದರ ಮತ್ತು ಹೋರಾಟಗಾರರ ಬಳಗ ಖಂಡಿಸಿದೆ.
ರಂಗಾಯಣ ಉಳಿಸಿ ಹೋರಾಟ ಸಮಿತಿ ರಚಿಸಿರುವ ಬಳಗವು 2021ರ ಡಿಸೆಂಬರ್ 20ರಂದು ರಂಗಾಯಣ, ಮೈಸೂರು ಮುಂಭಾಗ ಪ್ರತಿಭಟನೆಗೆ ಕರೆ ನೀಡಿದೆ.
ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿ ಕನ್ನಡದ ರಂಗಭೂಮಿ, ಕಲೆ ಮತ್ತು ಸಾಂಸ್ಕೃತಿಕ ಉನ್ನತಿಗೆ ತನ್ನದೇ ಆದ ಕೊಡುಗೆ ಸಲ್ಲಿಸುತ್ತಿರುವ ರಂಗಾಯಣದ ಇತಿಹಾಸದಲ್ಲಿ ಯಾವುದೇ ರೀತಿಯ ಪಂಥೀಯ ಭಾವನೆಗಳು ಈವರೆಗೂ ಬೇರೂರಿಲ್ಲ. ಎಡಪಂಥೀಯ, ನಡು ಪಂಥೀಯ ಎಂಬ ಭೇದವಿಲ್ಲದೆ ಎಲ್ಲಾ ಸಿದ್ಧಾಂತ, ವಿಚಾರ ಧಾರೆಗಳನ್ನು ರಂಗಾಯಣ ತನ್ನ ಭೂಮಿಕೆಯನ್ನು ಒದಗಿಸಿದೆ. ಹೊಸ ಹೊಸ ಪ್ರಯೋಗಗಳ, ಸಾಧನೆಗಳ ವೇದಿಕೆ ಎಂದು ಗೌರವಿಸಿದರು. ʻಬಹುರೂಪಿʼ ಉತ್ಸವೌೂ ಸಹ ಇಡೀ ಕರ್ನಾಟಕದ ಜನತೆ ಕುತೂಹಲದಿಂದ, ಆಸಕ್ತಿಯಿಂದ, ನೋಡುತ್ತಾ ಭಾಗವಹಿಸುತ್ತಾ ಬಂದಿದ್ದಾರೆ. ಇದು ಒಬ್ಬರ ಸಾಧನೆಯಲ್ಲ, ಸಾಮೂಹಿಕ ಪ್ರಯತ್ನದ ಫಲ.
ಇದನ್ನು ಓದಿ: ಬಹುರೂಪಿ ನಾಟಕೋತ್ಸವಕ್ಕೆ ಸೂಲಿಬೆಲೆ, ಮಾಳವಿಕಾಗೆ ಆಹ್ವಾನ ವಿರೋಧಿಸಿ ‘ಪರ್ವ’ ಕಿರಿಯ ಕಲಾವಿದರಿಂದ ರಂಗಾಯಣಕ್ಕೆ ಪತ್ರ
ಆದರೆ, ಹಾಲಿ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಂಗಭೂಮಿಯೊಡನೆ ಯಾವುದೇ ರೀತಿಯ ಸಂಬಂಧವಿಲ್ಲದ ಚಿತ್ರನಟಿ ಮತ್ತು ಬಿಜೆಪಿ ಪಕ್ಷದ ಮಾಳವಿಕ ಅವಿನಾಶ್ ಹಾಗೂ ಸಂಘಪರಿವಾರದ ಪರಿಚಾರಕ ಮತ್ತು ಬಲಪಂಥೀಯ ವ್ಯಕ್ತಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಆಯ್ಕೆ ಮಾಡಿರುವುದು ರಂಗಾಸಕ್ತರಲ್ಲಿ ಅಸಮಾಧಾನಕ್ಕೆ, ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬಳಗವು ಹೇಳಿದೆ.
ನಾಟಕಗಳು ಕೇವಲ ರಂಜನೆಗಾಗಿ ಇರುವ ಸಾಧನಗಳಲ್ಲ, ಯಾವುದೇ ನಾಡಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಸಮಾಜದ ಚಿಂತನೆಯನ್ನು ಬೆಳೆಸುತ್ತಾ, ವೈಚಾರಿಕ ಎಚ್ಚರವನ್ನು ಜಾಗೃತಗೊಳಿಸುವ ಜೀವನಾಡಿಯಾಗಿದೆ.
ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ನಡವಳಿಕೆಗಳು ಸಮಂಜಸವಾದುದ್ದಲ್ಲ. ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಅವರು ತಮ್ಮ ಘನತೆ ಹಾಗೂ ಸ್ಥಾನದ ಗೌರವಕ್ಕೆ ಕುಂದುಂಟು ಮಾಡುತ್ತಿದ್ದಾರೆ.
ಇದನ್ನು ಓದಿ: ಕಲೆಯನ್ನೂ ಆವರಿಸಿದ ಸಾಂಸ್ಕೃತಿಕ ಮಾಲಿನ್ಯ
ಹಾಗಾಗಿ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾದ ರಂಗಾಯಣವು ಕನ್ನಡಿಗರ, ಕನ್ನಡದ ಸೃಜನಶೀಲ ಕಲಾವಿದರ ಸ್ವತ್ತಾಗಿದ್ದು ಈ ಸಂಸ್ಥೆಯನ್ನು ದಾರಿತಪ್ಪಿಸುವಂತಹ ನೀತಿ ಅನುಸರಿಸುತ್ತಿರುವ ಅಡ್ಡಂಡ ಕಾರ್ಯಪ್ಪ ಅವರನ್ನು ಕೂಡಲೇ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸರ್ಕಾರ ಮತ್ತು ರಂಗಸಮಾಜವನ್ನು ಒತ್ತಾಯಿಸಿ ಪ್ರತಿಭಟನೆ ಮುಂದಾಗುತ್ತಿದ್ದೇವೆ ಎಣದು ತಿಳಿಸಿದ್ದಾರೆ.
ಸಮಾನ ಮನಸ್ಕ ಚಿಂತಕ ಸಾಹಿತಿ ಕಲಾವಿದರ ಮತ್ತು ಹೋರಾಟಗಾರರ ಬಳಗದಲ್ಲಿ ಮೈಸೂರಿನ ರಂಗಾಸಕ್ತರು, ರಂಗಕರ್ಮಿಗಳು, ಹವ್ಯಾಸಿ ರಂಗಭೂಮಿ ಕಲಾವಿದರು, ಸಾಹಿತಿ ಚಿಂತಕರು, ಕಲಾವಿದರು, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಕಾವಲು ಪಡೆ, ಕನ್ನಡ ಪರ ಸಂಘಟನೆಗಳು, ಎಡಪಂಥೀಯ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ, ದೇವರಾಜು ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ, ಜನಮನ ಸಾಂಸ್ಕೃತಿಕ ಸಂಘಟನೆ, ನೆಲೆ ಹಿನ್ನೆಲೆ, ದಲಿತ ವಿದ್ಯಾರ್ಥಿ ಒಕ್ಕೂಟ ಮೈಸೂರು ವಿವಿ., ಕರ್ನಾಟಕ ರಾಜ್ಯ ಸಂಶೋಧಕರ ಸಂಘ, ಭಾರತೀಯ ಪರಿವರ್ತನ ಸಂಘ, ಜೈಭೀಮ್ ಕೋರೇಗಾಂವ್ ವಿಜಯೋತ್ಸವ ಸಮಿತಿ ಮತ್ತು ವಿಚಾರವಂತ ನಾಗರಿಕರು ಇದ್ದಾರೆ.
ರಂಗಾಯಣ ಉಳಿಸೋಣ