ಕೊಪ್ಪಳ: ರಾಜ್ಯದಲ್ಲಿ ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಣೆಗಾಗಿ ಕಲ್ಯಾಣ ಕರ್ನಾಟಕ ಭಾಗ ಹಾಗೂ ಬಿಜಾಪುರ ಜಿಲ್ಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಅಪೌಷ್ಠಿಕತೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಮಕ್ಕಳಿಗೆ ಅಪೌಷ್ಠಿಕತೆ ನಿವಾರಣೆಗಾಗಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದಲ್ಲಿ 3 ದಿನಗಳ ಕಾಲ ಮೊಟ್ಟೆ ಮತ್ತು ಬಾಳೇಹಣ್ಣು ವಿತರಣೆ ಮಾಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದೆಂದು ಎಸ್ಎಫ್ಐ ಆಗ್ರಹಿಸಿದೆ.
ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಸಂಘಟನೆಯು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ವಾರದಲ್ಲಿ 3 ದಿನಗಳ ಕಾಲ ಮೊಟ್ಟೆ ಮತ್ತು ಬಾಳೇಹಣ್ಣು ವಿತರಣೆ ಮಾಡುವ ಬಗ್ಗೆ ಕೆಲವು ಮಠದ ಸ್ವಾಮೀಜಿಗಳು ಜಾತಿ ಮತ್ತು ಧಾರ್ಮೀಕತೆ, ನಂಬಿಕೆಯ ಹೆಸರಿನಲ್ಲಿ ಸರ್ಕಾರದ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುತ್ತಿರುವುದು ಸರಿಯಲ್ಲ. ಮೊಟ್ಟೆಯನ್ನು ತಿನ್ನುವುದು ಹಾಗೂ ತಿನ್ನದಿರುವುದನ್ನು ಮಕ್ಕಳ ಆಯ್ಕೆಯಾಗಿರುತ್ತದೆ ಎಂದು ತಿಳಿಸಿದೆ.
ಇದನ್ನು ಓದಿ: ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆ ಬಗ್ಗೆ ಸ್ವಾಮೀಜಿಗಳ ವಿರೋಧಕ್ಕೆ ಸರ್ಕಾರ ಮಣಿಯದಿರಲಿ: ವಿದ್ಯಾರ್ಥಿಗಳ ಆಗ್ರಹ
ಮೊಟ್ಟೆ ಮತ್ತು ಬಾಳೇಹಣ್ಣು ವಿತರಣೆ ನಂತರ ಇದೇ ತಿಂಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಶೇ.10 ರಿಂದ 12ರಷ್ಟು ಏರಿಕೆ ಕಂಡುಬಂದಿದೆ. 80ರಷ್ಟು ಮಕ್ಕಳು ಮೊಟ್ಟೆ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಅಪೌಷ್ಠಿಕತೆ ನಿವಾರಣೆಗೆ ಮೊಟ್ಟೆ ಸಹಾಯವಾಗಲಿದೆ. ಮೊಟ್ಟೆ- ಬಾಳೇಹಣ್ಣು ವಿತರಣೆಯಿಂದ ಯಾವುದೇ ವಿದ್ಯಾರ್ಥಿಗಳಿಗೆ ಬೇಧಭಾವವುಂಟಾಗುವುದಿಲ್ಲ.
ಇದನ್ನು ಓದಿ: ಮೊಟ್ಟೆ ಯೋಜನೆ ವಿರೋಧಿಸುವ ಸ್ವಾಮೀಜಿಗಳನ್ನು ಬಂಧಿಸಿ – ವಿ.ಪಿ ನಿರಂಜನಾರಾಧ್ಯ
ಸರ್ಕಾರಿ ಶಾಲೆಗಳಲ್ಲಿ ವಿವಿಧ ಜಾತಿ-ಧರ್ಮದ ತುಳಿತಕ್ಕೆ ಒಳಗಾದ ಸಮುದಾಯದ, ಬಡವರ, ಹಿಂದುಳಿದ ವರ್ಗ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ರಾಜ್ಯದ ಎಲ್ಲಾ ಶಾಲೆಗಳಿಗೂ ಅಪೌಷ್ಠಿಕತೆ ನಿವಾರಣೆಗಾಗಿ ಮೊಟ್ಟೆ ಮತ್ತು ಬಾಳೇಹಣ್ಣನ್ನು ವಿತರಣೆ ಮಾಡಲು ಸರ್ಕಾರ ಮುಂದಾಗಬೇಕೆಂದು ಎಸ್ಎಫ್ಐ ಸಂಘಟನೆ ಪ್ರತಿಭಟನೆ ಒತ್ತಾಐ ಮಾಡಿದೆ.
ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ವಿದ್ಯಾರ್ಥಿ ಮುಖಂಡರಾದ ನಾಗರಾಜ ಉತ್ತನೂರು, ರಾಜಭಕ್ಷಿ, ಅಮರೇಶ ಪೂಜಾರ, ಭೀಮೇಶ, ಶಂಕರ ಇತರರು ಇದ್ದರು.