ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ನೇತೃತ್ವದಲ್ಲಿ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಬೆಳಗಾವಿ ಗ್ರಾಮೀಣ ಜಿಲ್ಲೆ ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಕೇಳಿಬಂದಿರುವ ಶೇ.40ರಷ್ಟು ಕಮಿಷನ್ ಭ್ರಷ್ಟಾಚಾರ ಆರೋಪದ ಬಗ್ಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಆಟೋ, ಟ್ರ್ಯಾಕ್ಟರ್ ಮತ್ತು ಎತ್ತಿನ ಬಂಡಿಗಳಲ್ಲಿ ಆಗಮಿಸಿದ ಕಾಂಗ್ರೆಸ್ ನಾಯಕರು, ಕಾರ್ಯಕತರು ಸುವರ್ಣ ಸೌಧದೊಳಗೆ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಬಂದೋಬಸ್ತ್ ಕೈಗೊಂಡಿದ್ದ ಪೊಲೀಸರು ಗೇಟ್ ಬಳಿಯೇ ತಡೆಹಿಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಬ್ಯಾರಿಕೇಡ್ ದಾಟಿ ಒಳನುಗ್ಗಲು ಪ್ರಯತ್ನಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ರಮೇಶ್ ಕುಮಾರ್, ಆರ್.ವಿ. ದೇಶಪಾಂಡೆ, ಪ್ರಿಯಾಂಕ್ ಖರ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ವಿಧಾನ ಮಂಡಲದ ಉಭಯ ಸದನಗಳ ಕಾಂಗ್ರೆಸ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
13 ಕಿ.ಮೀ. ಸಂಚಾರ:
ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಸಮಾವೇಶಗೊಂಡ ಕಾಂಗ್ರೆಸ್ ಪಕ್ಷದ ಶಾಸಕರು, ಕಾರ್ಯಕರ್ತರು ರಾಣಿ ಚೆನ್ನಮ್ಮ ವೃತ್ತದಿಂದ ಸುವರ್ಣ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ನಗರದಲ್ಲಿ ಸರಿಸುಮಾರು 13 ಕಿ.ಮೀ. ಅಷ್ಟು ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ, ಸುವರ್ಣ ವಿಧಾನಸೌಧ ತಲುಪಿತು.
ಸುವರ್ಣಸೌಧದ ಮುತ್ತಿಗೆಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು, ತಮ್ಮನ್ನು ಒಳಬಿಡುವಂತೆ ಆಗ್ರಹಿಸಿದರು. ಆದರೆ, ಪೊಲೀಸರು ಗೇಟ್ ಬಳಿಯೇ ಬ್ಯಾರಿಕೆಡ್ಗಳನ್ನು ಹಾಕಿ ಪ್ರತಿಭಟನಾಕಾರರನ್ನು ತಡೆದರು. ರಾಜ್ಯ ಬಿಜೆಪಿ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮರ್, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.