ಬೆಳಗಾವಿ: ಕಲಬುರಗಿಯಲ್ಲಿ ಸಹಾಯಕ ಎಂಜಿನಿಯರ್(ಎಇ) ಪರೀಕ್ಷೆ ಇಂದು ಹಾಜರಾಗಬೇಕಾದ ಅಭ್ಯರ್ಥಿಗಳು ರೈಲು ತಡವಾಗಿದ್ದರಿಂದ ಪರೀಕ್ಷೆ ಬರೆಯಲು ಭಾಗವಹಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಮಾಡಿಕೊಡುವುದಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ಭರವಸೆ ನೀಡಿದರು.
ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಮಾಧುಸ್ವಾಮಿ ರೈಲು ವಿಳಂಬದಿಂದಾಗಿ ಇಂದು ಬೆಳಗ್ಗೆ ನಡೆಯಬೇಕಿದ್ದ ಪರೀಕ್ಷೆಗೆ ಗೈರು ಹಾಜರಾದ ಅಭ್ಯರ್ಥಿಗಳಿಗೆ ಮತ್ತೊಂದು ಪರೀಕ್ಷೆಗೆ ಅವಕಾಶ ನೀಡುವಂತೆ ಸರ್ಕಾರ ಮುಖ್ಯ ಕಾರ್ಯದರ್ಶಿ, ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಇದನ್ನು ಓದಿ: KPSC ಪರೀಕ್ಷೆ : ರೈಲು ವಿಳಂಬ – ಅಭ್ಯರ್ಥಿಗಳ ಪರದಾಟ
ಆದರೆ, ಮಧ್ಯಾಹ್ನದ ಪರೀಕ್ಷೆ ಬರೆಯಬೇಕು ಎಂದು ಹೇಳಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ.ರಂಗನಾಥ್, ಅಜಯ್ ಧರ್ಮಸಿಂಗ್ ಮತ್ತಿತರರು ಮಧ್ಯಾಹ್ನದ ಪರೀಕ್ಷೆಗೂ ಅಭ್ಯರ್ಥಿಗಳು ಹಾಜರಾಗಲು ಸಾಧ್ಯವಿಲ್ಲ ಎಂದಾಗ, ಆ ಪರೀಕ್ಷೆಯನ್ನೂ ಸಹ ಮತ್ತೊಮ್ಮೆ ನಡೆಸಲು ನಿರ್ದೇಶನ ನೀಡುವುದಾಗಿ ಸಚಿವರು ಹೇಳಿದರು.
ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಶಿವಲಿಂಗೇಗೌಡ, ಹಾಸನ, ದಕ್ಷಿಣ ಕರ್ನಾಟಕದ ಅಭ್ಯರ್ಥಿಗಳನ್ನು ಕಲಬುರಗಿಯಲ್ಲಿ ಪರೀಕ್ಷೆ ಬರೆಯಲು ಹೊಸ ಮಾದರಿ ಮಾಡಿದ್ದಾರೆ. ಆದರೆ, ಪರೀಕ್ಷೆ ಬರೆಯಲು ಬರುತ್ತಿದ್ದ ಅಭ್ಯರ್ಥಿಗಳು ಪ್ರಯಾಣಿಸುತ್ತಿದ್ದ ರೈಲು ನಾಲ್ಕೈದು ಗಂಟೆ ತಡವಾಗಿದ್ದು, ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಸದನದ ಗಮನ ಸೆಳೆದು ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.