ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ಸಾಧ್ಯತೆ – ಕಾಂಗ್ರೆಸ್ ವಿರೋಧ

ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ ಜಾರಿಗೊಳಿಸಬಾರದೆಂದು ಕ್ರೈಸ್ತ ಸಮುದಾಯ ಸೇರಿದಂತೆ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯ ಸರ್ಕಾರ ಹಾಗೂ ಸಂಘ ಪರಿವಾರದ ಸಂಘಟನೆಗಳು ಕಾಯ್ದೆ ಜಾರಿಗೆ ಒತ್ತಡ ಹೇರುತ್ತಿವೆ. ಡಿಸೆಂಬರ್‌ 13ರಿಂದ ಆರಂಭಗೊಳ್ಳುತ್ತಿರುವ ಬೆಳಗಾವಿ ಅಧಿವೇಶನದಲ್ಲಿ ʻಮತಾಂತರ ನಿಷೇಧ ತಿದ್ದುಪಡಿ ಮಸೂದೆ’ ಮಂಡನೆಗೆ ರಾಜ್ಯ ಸರಕಾರ ಸಿದ್ಧತೆ ನಡೆಸಿಕೊಂಡಿದೆ.

ಕಂದಾಯ ಸಚಿವ ಆರ್.ಅಶೋಕ್, ‘ರಾಜ್ಯದಲ್ಲಿ ಬಲವಂತದ ಮತಾಂತರ ನಿಷೇಧಕ್ಕೆ ಕಾಯ್ದೆ ಅವಶ್ಯಕತೆ ಇದೆ. ಮತಾಂತರ ವಿರುದ್ಧ ಹಲವು ಮಠಾಧಿಪತಿಗಳು ಧ್ವನಿ ಎತ್ತುತ್ತಿದ್ದು ಬಡಜನರಿಗೆ ಆಸೆ- ಆಮಿಷಮೊಡ್ಡಲಾಗುತ್ತಿದೆ. ಅಲ್ಲದೆ, ಬಲವಂತದ ಮತಾಂತರಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ’ ಎಂದು ಪ್ರತಿಪಾದಿಸಿದ್ದಾರೆ.

ಈ ಬೆಳವಣಿಗೆಗಳ ನಡುವೆ ರಾಜ್ಯ ಸರಕಾರವು ‘ಮತಾಂತರ ನಿಷೇಧ ತಿದ್ದುಪಡಿ ಮಸೂದೆಯ ಕರಡನ್ನು ಈಗಾಗಲೇ ಸಿದ್ಧಪಡಿಸಿದ್ದು,  ಕೆಲವು ತಿದ್ದುಪಡಿಗಳನ್ನು ಮಾಡಿದ್ದು, ಅದನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿವೆ ಎಂದು ತಿಳಿದುಬಂದಿದೆ.

ಈಗಾಗಲೇ ಬಲವಂತದ ಮತಾಂತರ ನಿಷೇಧಕ್ಕೆ ಕಾಯ್ದೆ ಜಾರಿಯಲ್ಲಿದೆ. ಇದೀಗ ಸರಕಾರ ಜಾರಿಗೆ ತರಲು ಮುಂದಾಗಿರುವ ಕಾನೂನಿನಲ್ಲಿ ಕೆಲ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದ್ದು, ಮತಾಂತರ ಮಾಡವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಂಶವು ವಿಧೇಯಕದಲ್ಲಿದೆ. ಸರಕಾರ ಮಂಡಿಸಲಿರುವ ಈ ಮತಾಂತರ ನಿಷೇಧ ವಿಧೇಯಕದಲ್ಲಿ ಬಲವಂತದ ಮತಾಂತರವನ್ನು ಅಸಿಂಧು ಎಂದು ಘೋಷಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಒಂದು ವೇಳೆ ವ್ಯಕ್ತಿ ಸ್ವ ಇಚ್ಛೆಯಿಂದ ಮತಾಂತರವಾದರೆ ಅದು ಸಿಂಧುವಾಗಲು ಮ್ಯಾಜಿಸ್ಟ್ರೇಟ್‌ಗೆ ಮುಂದೆಯೇ ಮತಾಂತರ ಉದ್ದೇಶ ತಿಳಿಸಬೇಕು. ಹಾಗೆಯೇ ಮ್ಯಾಜಿಸ್ಟ್ರೇಟ್ ಅವರು ಮತಾಂತರ ವಾಸ್ತವ ಉದ್ದೇಶವನ್ನು ಅರಿಯಲು ಪೊಲೀಸ್ ತನಿಖೆ ನಡೆಸಲು ಅವಕಾಶ ನೀಡುವ ಅಂಶವೂ ವಿಧೇಯಕದಲ್ಲಿದೆ. ಬಲವಂತದ ಮತಾಂತರ ಆಗಿಲ್ಲವೆಂಬ ಅಂಶವನ್ನು ಸಾಬೀತುಪಡಿಸಬೇಕು. ಒಂದು ವೇಳೆ ಬಲವಂತದ ಮತಾಂತರ ಮಾಡಿದವರಿಗೆ 1 ರಿಂದ 5 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸುವ ಅಂಶವೂ ಈ ವಿಧೇಯಕದಲ್ಲಿ ಅಡಕವಾಗಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ ವಿರೋಧ

ಈ ಮಧ್ಯೆ ರಾಜ್ಯ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಮತಾಂತರ ನಿಷೇಧಕ್ಕೆ ಸಂಬಂಧಿಸಿದ ಹೊಸ ಕಾಯ್ದೆ ಅಗತ್ಯವಿಲ್ಲ. ಒಂದು ವೇಳೆ ಸರಕಾರ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಮಂಡನೆಗೆ ಮುಂದಾದರೆ ಕಾಂಗ್ರೆಸ್ ಅದನ್ನು ವಿರೋಧಿಸಿ ಉಭಯ ಸದನಗಳಲ್ಲಿ ಹೋರಾಟ ರೂಪಿಸಲಿದೆ’ ಎಂದು ಪ್ರತಿಪಕ್ಷ ಕಾಂಗ್ರೆಸ್ ಪ್ರಕಟಿಸಿದೆ.

ರಾಜ್ಯದಲ್ಲಿ ಮತಾಂತರ ತಡೆಯಲು ಹೊಸ ಕಾಯ್ದೆಯ ಅಗತ್ಯವಿಲ್ಲ, ಒತ್ತಾಯಪೂರ್ವಕ ಮತಾಂತರ ತಡೆಯಲು ಈಗಾಗಲೇ ಕಾಯ್ದೆ ಇದೆ. ರಾಜಕೀಯ ಪ್ರೇರಿತವಾಗಿ ಹೊಸದಾಗಿ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಮಂಡನೆ ಮಾಡಿದರೆ ಕಾಂಗ್ರೆಸ್ ಪಕ್ಷ ಅದನ್ನು ಸಂಪೂರ್ಣ ವಿರೋಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕ್ರಿಶ್ಚಿಯನ್ ನಿಯೋಗದಿಂದ ಸಿಎಂ ಭೇಟಿ

ಕ್ರಿಶ್ಚಿಯನ್ ಧರ್ಮದ ನಿಯೋಗವೊಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕಾಯಿದೆ ಜಾರಿಗೊಳಿಸಬಾರದೆಂದು ಮನವಿ ಸಲ್ಲಿಸಿದೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ನಿವಾಸದಲ್ಲಿ ಶುಕ್ರವಾ ಭೇಟಿ ನಡೆದಿದ್ದು, ರೂನಾಲ್ಡ್ ಕೊಲಾಸೊ ನೇತೃತ್ವದ ನಿಯೋಗದಲ್ಲಿ ಮಾಜಿ ಪರಿಷತ್ ಸದಸ್ಯ ಐವಾನ್ ಡಿಸೋಜ , ಕಾಂಗ್ರೆಸ್ ನಾಯಕ ರಾಧಾಕೃಷ್ಣ, ಬಿ.ಎಲ್.‌ ಶಂಕರ್ ಮೊದಲಾದವರಿದ್ದರು.

ಕರ್ನಾಟಕದಲ್ಲಿನ ಕ್ರೈಸ್ತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದರು. ಇತ್ತೀಚೆಗೆ ಚರ್ಚ್ ಮೇಲೆ ಆಗುತ್ತಿರುವ ದಾಳಿ ಪ್ರಕರಣಗಳ ಬಗ್ಗೆ ಕ್ರಮ ವಹಿಸುವಂತೆಯೂ ಮನವಿ‌‌ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *