ಬೆಂಗಳೂರು: ದೇಶದ ರೈತ ಚಳುವಳಿ ಇತಿಹಾಸ ನಿರ್ಮಿಸಿದೆ. ಭಾರತ ಸರ್ಕಾರ ರೈತರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡು ಪತ್ರವನ್ನು ನೀಡಿದ ನಂತರ ಸಂಯುಕ್ತ ಕಿಸಾನ್ ಮೋರ್ಚಾ ರೈತ ಹೋರಾಟ ಯಶಸ್ವಿಯಾಗಿದೆ ಎಂದು ಘೋಷಿಸಿದೆ. ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯು ಈ ಅಭೂತ ಪೂರ್ವ ಹೋರಾಟದಲ್ಲಿ ಪಾಲ್ಗೊಂಡ ಎಲ್ಲ ರೈತರು, ಕೃಷಿಕೂಲಿಕಾರರು, ಕಾರ್ಮಿಕರು ಮತ್ತು ಎಲ್ಲ ನಾಗರಿಕರನ್ನು ಅಭಿನಂದನೆ ಸಲ್ಲಿಸಿದೆ.
ಉತ್ತರ ಪ್ರದೇಶ ರಾಜ್ಯದ ಖೇರಿ ಜಿಲ್ಲೆ ಲಖಿಂಪುರದಲ್ಲಿ ರೈತರೂ ಸೇರಿದಂತೆ ಹೋರಾಟದಲ್ಲಿ ಪಾಲ್ಗೊಂಡು ಮಡಿದ 715 ಮಂದಿ ರೈತ ಹೋರಾಟಗಾರರಿಗೆ ಕೃಷಿ ಕೂಲಿಕಾರರ ಸಂಘವು ಕ್ರಾಂತಿಕಾರಿ ವಂದನೆಗಳನ್ನು ಸಲ್ಲಿಸಿದೆ. ಅಖಿಲ ಭಾರತ ಕೃಷಿಕೂಲಿಕಾರರ ಸಂಘವು ರೈತ ಹೋರಾಟದ ಈ ಚಾರಿತ್ರಿಕ ಗೆಲುವನ್ನು ಸ್ಥಳೀಯ ಘಟಕದಿಂದ ರಾಜ್ಯ ಘಟಕದ ವರೆಗೂ ಎಲ್ಲಾ ಹಂತಗಳಲ್ಲಿ ಡಿಸೆಂಬರ್ 11 ರಂದು ವಿಜಯೋತ್ಸವವಾಗಿ ಆಚರಿಸಬೇಕೆಂದು ಕರೆ ನೀಡಿದೆ.
ಅಖಿಲ ಭಾರತ ಕೃಷಿಕೂಲಿಕಾರರ ಸಂಘವು ಈ ಐತಿಹಾಸಿಕ ಹೋರಾಟದ ಭಾಗವಾಗಿತ್ತು. ಈ ಗೆಲುವು ಜನರ ಗೆಲುವು ಆಗಿದ್ದು ಈ ಗೆಲುವನ್ನು ಜನರ ನಡುವೆಯೇ ಆಚರಿಸಬೇಕು. ಆ ಮೂಲಕ ಕೃಷಿಕೂಲಿಕಾರರ ಹಾಗೂ ಗ್ರಾಮೀಣ ಬಡವರ ಮುಂದಿನ ಹೋರಾಟವನ್ನು ಈ ಹೋರಾಟದ ಸ್ಪೂರ್ತಿಯೊಂದಿಗೆ ಮುಂದುವರೆಸಲು ಸಾಧ್ಯವಾಗಬೇಕು ಎಂದು ಅಖಿಲ ಭಾರತ ಅಧ್ಯಕ್ಷ ಎ. ವಿಜಯರಾಘವನ್, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಬಿ. ವೆಂಕಟ್, ರಾಜ್ಯ ಅಧ್ಯಕ್ಷ ನಿತ್ಯಾನಂದಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.