ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವು ಜಾರಿಗೊಳಿಸಿರುವ ʻಬೇಟಿ ಬಚಾವೊ ಬೇಟಿ ಪಡಾವೊʼ ಯೋಜನೆಯಡಿ 2016 ರಿಂದ 2019ರ ಅವಧಿಯಲ್ಲಿ ವೆಚ್ಚವಾದ 446.72 ಕೋಟಿ ರೂಪಾಯಿಗಳ ಮೊತ್ತದಲ್ಲಿ ಶೇಕಡ 78.91ರಷ್ಟು ಮೊತ್ತ ಮಾಧ್ಯಮ ಪ್ರಚಾರಕ್ಕೆ ಖರ್ಚಾಗಿದೆ ಎನ್ನುವ ಅಂಕಿ-ಅಂಶವನ್ನು ಸಂಸದೀಯ ಸಮಿತಿಯ ವರದಿಯಿಂದ ತಿಳಿದುಬಂದಿದೆ.
“ಬೇಟಿ ಬಚಾವೊ ಬೇಟಿ ಪಡಾವೊ” ಅಭಿಯಾನದ ಬಗ್ಗೆ ಪ್ರಚಾರ ಕೈಗೊಳ್ಳಲು ಮಾಧ್ಯಮ ಪ್ರಚಾರ ಅಗತ್ಯ ಎಂಬುದು ತಿಳಿದಿದ್ದರೂ ಅವುಗಳೊಂದಿಗೆ, ಯೋಜನೆಯ ಉದ್ದೇಶಗಳ ಈಡೇರಿಕೆಗೆ ಹಣ ಖರ್ಚು ಮಾಡುವಲ್ಲಿ ಸಮತೋಲನ ಸಾಧಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ. ಬಿಜೆಪಿ ಸಂಸದೆ ಹೀನಾ ವಿಜಯಕುಮಾರ್ ಗಾವಿಟ್ ನೇತೃತ್ವದ ಮಹಿಳಾ ಸಬಲೀಕರಣ ಸಮಿತಿಯ ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.
ಹಿಂದುಳಿದ ಪ್ರದೇಶಗಳಲ್ಲಿ ಲಿಂಗಾನುಪಾತ ಹೆಚ್ಚಳ ಮತ್ತು ಹೆಣ್ಣುಮಕ್ಕಳ ಶಿಕ್ಷಣವನ್ನು ಖಾತರಿಪಡಿಸುವುದು ಯೋಜನೆಯ ಮುಖ್ಯ ಉದ್ದೇಶ. ಈ ಹಿನ್ನೆಲೆಯಲ್ಲಿ ಸರ್ಕಾರ ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯಡಿ ಜಾಹೀರಾತಿಗೆ ಮಾಡುವ ವೆಚ್ಚವನ್ನು ಪುನರ್ ಪರಿಶೀಲಿಸಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ವಲಯವಾರು ಹಸ್ತಕ್ಷೇಪಕ್ಕೆ ಯೋಜಿತ ವೆಚ್ಚ ಹಂಚಿಕೆ ಮಾಡಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.
ಕೋವಿಡ್ ಕಾರಣದಿಂದ ಹಣಕಾಸು ಮುಗ್ಗಟ್ಟು ಇದ್ದ 2020-21ನ್ನು ಹೊರತುಪಡಿಸಿ ಯೋಜನೆ 2014-15ರಲ್ಲಿ ಆರಂಭವಾದಾಗಿನಿಂದ 2019-20ರವರೆಗೆ ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಗೆ ಒಟ್ಟು 848 ಕೋಟಿ ಬಿಡುಗಡೆಯಾಗಿದ್ದು, ಈ ಪೈಕಿ ರಾಜ್ಯಗಳಿಗೆ 622.48 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ರಾಜ್ಯಗಳು ಯೋಜನೆಯ ಒಟ್ಟು ಶೇಕಡ 25.13ರಷ್ಟು ಮೊತ್ತವನ್ನು ಮಾತ್ರ ಯೋಜನೆಯ ಮೂಲ ಉದ್ದೇಶಗಳಿಗೆ ವೆಚ್ಚ ಮಾಡಿವೆ ಎಂದು ತಿಳಿದು ಬಂದಿದೆ.