ಹುಬ್ಬಳ್ಳಿ: ರಾಜ್ಯದಲ್ಲಿ ಶೀಘ್ರದಲ್ಲೇ ಜಿನೋಮ್ ಸ್ವೀಕ್ವೆನ್ಸ್ ಲ್ಯಾಬ್ಗಳನ್ನು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಲ್ಲಿನ ತಮ್ಮ ನಿವಾಸದ ಬಳಿ ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಏಕೈಕ ಜಿನೋಮ ಸೀಕ್ವೆನ್ಸ್ ಲ್ಯಾಬ್ ಇದೆ. ಹೀಗಾಗಿ ಕೋವಿಡ್ ಪರೀಕ್ಷಾ ವರದಿಗಳು ಶೀಘ್ರವಾಗಿ ಸಿಗುತ್ತಿಲ್ಲ ಎಂದು ಪತ್ರಕರ್ತರು ಪ್ರಶ್ನೆ ಮಾಡಿದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಿ, ಪ್ರತಿಯೊಂದು ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಿಸಲು ಲ್ಯಾಬ್ಗಳಿವೆ. ಆದರೆ, ಜಿನೋಮ್ ಸೀಕ್ವೆನ್ಸ್ ಪರಿಣಿತವಾಗಿರುವಂತಹ ವ್ಯವಸ್ಥೆ ಬೇಕಾಗಿದೆ. ನಾವು ಎಲ್ಲವನ್ನೂ ಜಿನೋಮ್ ಪರೀಕ್ಷೆ ಮಾಡದಿದ್ದರೂ ಸಹ, ಈಗ ಒಮೈಕ್ರಾನ್ ಹೊಸ ತಳಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ಸಂಶಯ ಬಂದಿದೆಯೋ ಅಲ್ಲಲ್ಲಿ ಜಿನೋಮ್ ಸೀಕ್ವೆನ್ಸ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ದೃಢಪಡಿಸಿಕೊಳ್ಳಲು ಎನ್ಸಿಬಿಎಸ್ ಗೆ ಕಳುಹಿಸಲಾಗುತ್ತಿದೆ. ಅತೀ ಶೀಘ್ರದಲ್ಲೇ ಪರೀಕ್ಷಾ ವರದಿಗಳು ಬರುತ್ತಿವೆ. ಇದರಿಂದ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಜಿನೋಮ್ ಸೀಕ್ವೆನ್ಸ್ ಲ್ಯಾಬ್ಗಳ ಸಂಖ್ಯೆ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ. ಅದಕ್ಕೆ ಬೇಕಾಗಿರುವುಂತ ಪರಿಣಿತರ ವ್ಯವಸ್ಥೆಯಾಗಬೇಕು. ಅಗತ್ಯವಿರುವ ಲ್ಯಾಬ್ ಉಪಕರಣಗಳ ಬಗ್ಗೆ ಕ್ರಮಕೈಗೊಂಡಿದ್ದೇವೆ. ಈ ಬಗ್ಗೆ ಆರೋಗ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ. ಶೀಘ್ರದಲ್ಲೇ ರಾಜ್ಯದಲ್ಲಿ ಜಿನೋಮ್ ಸೀಕ್ವೆನ್ಸ್ ಲ್ಯಾಬ್ಗಳನ್ನು ಹೆಚ್ಚಳ ಮಾಡುವುದರ ಬಗ್ಗೆ ತಿಳಿಸಿದರು.