ಕಾಶ್ಮೀರದಲ್ಲಿ 370ನೇ ವಿಧಿ ರದ್ದು: ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ – ಯೂಸುಫ್ ತರಿಗಾಮಿ

ಶ್ರೀನಗರ: 370ನೇ ವಿಧಿಯನ್ನು ನಿರಂತರವಾಗಿ ಸವೆಸಿದ್ದು ಮತ್ತು ಪ್ರಜಾಪ್ರಭುತ್ವದ ನಿರಾಕರಣೆಯು ಜಮ್ಮು ಕಾಶ್ಮೀರದಲ್ಲಿ ಜನರನ್ನು ಮುಖ್ಯವಾಹಿನಿಯಿಂದ ದೂರವಿಟ್ಟಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನಾಯಕ ಮಹಮ್ಮದ್‌ ಯೂಸುಫ್‌ ತರಿಗಾಮಿ ಹೇಳಿದ್ದಾರೆ.

370ನೇ ವಿಧಿ ದಶಕಗಳಿಂದ ಜಾರಿಯಲ್ಲಿದ್ದರೂ ಜಮ್ಮು ಕಾಶ್ಮೀರದಲ್ಲಿ ಶಾಂತಿ ಇಲ್ಲ ಎಂಬ ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಮಾಜಿ ಶಾಸಕರೂ ಆಗಿರುವ ತರಿಗಾಮಿ ಪ್ರತಿಕ್ರಿಯಿಸಿದ್ದಾರೆ.

“370ನೇ ವಿಧಿ ನಿರಂತರವಾಗಿ ಸವೆಸಿದ್ದು ಮತ್ತು ಪ್ರಜಾಪ್ರಭುತ್ವದ ನಿರಾಕರಣೆಯು ಜನರನ್ನು ಬೃಹತ್ ಪ್ರಮಾಣದಲ್ಲಿ ಮುಖ್ಯವಾಹಿನಿಂದ ದೂರವಿಟ್ಟಿದೆ. ಇದರಿಂದಾಗಿ ಶಾಂತಿ ಮತ್ತು ಸಾಮರಸ್ಯವನ್ನು ಕದಡಲು ಫಲವತ್ತಾದ ನೆಲ ಸೃಷ್ಟಿಯಾಯಿತು. ದುರದೃಷ್ಟವಶಾತ್, ಆ ಪ್ರವೃತ್ತಿಯು ಉಲ್ಬಣಗೊಳ್ಳುತ್ತಿದೆ. 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಂಡಿದೆ” ಎಂದು ತರಿಗಾಮಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.

370ನೇ ವಿಧಿಯ ರದ್ದತಿಯಿಂದಾಗಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಶಾಂತಿ, ಉತ್ತಮ ವ್ಯಾಪಾರ ಹೂಡಿಕೆ ಮತ್ತು ಹೆಚ್ಚಿನ ಪ್ರವಾಸಿಗರ ಆಗಮನಕ್ಕೆ ನಾಂದಿ ಹಾಡಿದೆ ಎಂದು ಅಮಿತ್‌‌ ಶಾ ಪ್ರತಿಪಾದಿಸಿದ್ದರು.

ಸಂವಿಧಾನದ ತಾತ್ಕಾಲಿಕ ನಿಬಂಧನೆಯಾದ ಆರ್ಟಿಕಲ್ 370, ಹಿಂದಿನ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು. ಜೊತೆಗೆ ಆರ್ಟಿಕಲ್ 35-ಎ ಅನ್ವಯ ಭಾರತದ ಉಳಿದ ಭಾಗಗಳ ಜನರು ಜಮ್ಮು ಕಾಶ್ಮೀರದ ಆಸ್ತಿಗಳನ್ನು ಖರೀದಿಸುವುದನ್ನು ನಿಷೇಧಿಸಿತ್ತು.

ಈ ಎರಡೂ ನಿಬಂಧನೆಗಳನ್ನು ಆಗಸ್ಟ್ 5, 2019 ರಂದು ರದ್ದುಗೊಳಿಸಲಾಯಿತು ಮತ್ತು ರಾಜ್ಯವನ್ನು ಜಮ್ಮು ಕಾಶ್ಮೀರ ಮತ್ತು ಲಡಾಖ್‌ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *