ಬೆಂಗಳೂರು: ಕರ್ನಾಟಕ ಸರ್ಕಾರವು ಡಿಸೆಂಬರ್ 2ರಂದು ಕೊರೊನಾ ಸೋಂಕಿತ ಮೃತ ವ್ಯಕ್ತಿಯ ಕುಟುಂಬದವರಿಗೆ ಪರಿಹಾರ ವಿತರಣೆಯ ಬಗ್ಗೆ ಹೊಸ ಆದೇಶವನ್ನು ಹೊರಡಿಸಿದೆ. ಇದು ತಿದ್ದುಪಡಿ ಆದೇಶವಾಗಿದ್ದು, ಈ ಹಿಂದೆ, ಅಂದರೆ ಸೆಪ್ಟೆಂಬರ್ 28ರಂದು ಹೊರಡಿಸಿದ್ದ ಆದೇಶ ಮತ್ತು ಅಕ್ಟೋಬರ್ 1ರಂದು ರಾಜ್ಯ ಸರ್ಕಾರವು ತಿದ್ದುಪಡಿ ಮಾಡಿದ ನಂತರದಲ್ಲಿ ಮತ್ತೊಂದು ಹೊಸ ತಿದ್ದುಪಡಿ ಆದೇಶವಾಗಿದೆ.
ಹಿಂದಿನ ಆದೇಶದಲ್ಲಿ ತಿಳಿಸಿರುವುದೇನೆಂದರೆ, ಬಡತನ ರೇಖೆಗಿಂತ ಕೆಳಗಿರುವ “ದುಡಿಯುವ ವ್ಯಕ್ತಿ” ಕೊರೊನಾ ಸೋಂಕಿನಿಂದ ಮೃತಪಟ್ಟಲ್ಲಿ ಆ ಕುಟುಂಬಕ್ಕೆ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಲಾಗಿತ್ತು. ಅಂದರೆ, ಮೃತ ವ್ಯಕ್ತಿ “ದುಡಿಯುವ ಸದಸ್ಯನಾಗಿರಬೇಕು” ಎಂಬ ನಿಯಮ ಇತ್ತು.
ಆದರೆ, ಈಗಿನ ಹೊಸ ಆದೇಶದಲ್ಲಿ “ದುಡಿಯುವ ಸದಸ್ಯನಾಗಿರಬೇಕು” ಎಂಬುದು ಅಧಿಸೂಚನೆಯಲ್ಲಿ ಎಲ್ಲೆಲ್ಲಿ ಬಳಕೆ ಆಗಿದೆಯೋ ಅಲ್ಲೆಲ್ಲ “ದುಡಿಯುವ” ಎಂಬ ಪದವನ್ನು ಬಿಟ್ಟು ಓದಿಕೊಳ್ಳಬೇಕು ಎಂದು ತಿದ್ದುಪಡಿಯಲ್ಲಿ ತಿಳಿಸಲಾಗಿದೆ. ಹೀಗೆ ಮಾಡುವುದರಿಂದ ಬಿಪಿಎಲ್ ಕುಟುಂಬದ ಸದಸ್ಯರು ಯಾರೇ ಕೊವಿಡ್- 19ನಿಂದ ಮೃತಪಟ್ಟರೂ ಕರ್ನಾಟಕ ಸರ್ಕಾರದಿಂದ 1 ಲಕ್ಷ ರೂಪಾಯಿ ಪರಿಹಾರ ದೊರೆಯುತ್ತದೆ.
ತಿದ್ದುಪಡಿಯಲ್ಲಿ ಮತ್ತಷ್ಟು ಅಂಶಗಳನ್ನು ಮಾಡಲಾಗಿದ್ದು, ಯಾವುದೇ ವಯಸ್ಸಿನ ನಿಬಂಧನೆ ಇಲ್ಲದೆ ಕೊವಿಡ್- 19 ವೈರಾಣು ಸೋಂಕಿನಿಂದ ಸದಸ್ಯರನ್ನು ಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಕುಟುಂಬದ ಅರ್ಹ ಕಾನೂನುಬದ್ಧ ವಾರಸುದಾರರಿಗೆ ರಾಜ್ಯ ಸರ್ಕಾರರದಿಂದ ರೂ. 1 ಲಕ್ಷ ಪರಿಹಾರದ ಆರ್ಥಿಕ ನೆರವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನು ಹೊರತುಪಡಿಸಿದಂತೆ ದಿನಾಂಕ 28.09.2021ರಂದು ಹೊರಡಿಸಿದ ಆದೇಶ, ಮಾರ್ಗಸೂಚಿಗಳು ಮತ್ತು ಆ ನಂತರ ಅಕ್ಟೋಬರ್ 1ರಂದು ತಂದ ತಿದ್ದುಪಡಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಲಾಗಿದೆ.