ಮಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಅವೈಜ್ಞಾನಿಕ ನಿರ್ಧಾರಗಳನ್ನು ಕೈಗೊಳ್ಳದಂತೆ ಹಾಗೂ ಮರು ಮೌಲ್ಯಮಾಪನದ ಹೆಸರಿನಲ್ಲಿ ನಡೆಯುತ್ತಿರುವ ಹಗರಣದ ತನಿಖೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ರಿಗೆ ಪತ್ರವನ್ನು ಕಳುಹಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವಿದ್ಯಾರ್ಥಿ ಸಮೂಹವು ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಮುಖೇನ ಮನವಿಯನ್ನು ಸಲ್ಲಿಸಲಾಗಿದೆ.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಪರೀಕ್ಷೆ ನಡೆಸದಂತೆ ತಡೆ ಕೋರಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಪರೀಕ್ಷೆ ನಡೆಸುವಂತೆ ಆದೇಶಿಸಿದೆ. ವಿಶ್ವವಿದ್ಯಾಲಯದ ಅವೈಜ್ಞಾನಿಕ ನಿರ್ಧಾರಗಳಿಂದ ವಿದ್ಯಾರ್ಥಿಗಳು ಕೋರ್ಟ್ ಮೆಟ್ಟಿಲೇರುವಂತಾಗಿದ್ದು, ವಿಶ್ವವಿದ್ಯಾಲಯ ಮಾಡಬೇಕಾಗಿದ್ದ ಕೆಲಸಗಳನ್ನು ಕೋರ್ಟ್ ಮಧ್ಯ ಪ್ರವೇಶಿಸಿ ಮಾಡಿಸುತ್ತಿರುವುದು ಬಹಳ ದುರಂತವೆಂದು ಆರೋಪಿಸಿದ್ದಾರೆ.
ಯುಜಿಸಿ ನಿರ್ದೇಶನದ ಅನುಸಾರ ಕೋವಿಡ್ ಸಂರ್ದಭದಲ್ಲಿ ತರಗತಿಗಳು ಸರಿಯಾಗಿ ನಡೆಯದ ಕಾರಣ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್ಗಳಿಗೆ ಬಡ್ತಿ ನೀಡಬೇಕಿತ್ತು. ಆದರೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷೆಗಳು ಮುಗಿದಿದ್ದರೂ ಉಳಿದ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಇತ್ತ ಪರೀಕ್ಷೆಯನ್ನೂ ನಡೆಸದೆ, ಅತ್ತ ಬಡ್ತಿಯನ್ನು ನೀಡದೇ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳನ್ನು ಅತಂತ್ರ ಸ್ಥಿತಿಯಲ್ಲಿ ಇಟ್ಟಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ 2-3 ಬಾರಿ ಪರೀಕ್ಷೆಗಳ ವೇಳಾ ಪಟ್ಟಿ ಪ್ರಕಟಿಸಿ ಮುಂದೂಡಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಉಂಟಾಗಿದೆ. ಅಲ್ಲದೆ ಎಲ್ಲಾ ಸೆಮಿಸ್ಟರ್ನ ಪ್ರವೇಶ ಪ್ರಕ್ರಿಯೆಗಳು ಮುಗಿದಿದ್ದರೂ ಮೊದಲ ಸೆಮಿಸ್ಟರ್ನ ವಿದ್ಯಾರ್ಥಿಗಳಿಗೆ ಮಾತ್ರ ಈಗ ತರಗತಿಗಳು ನಡೆಯುತ್ತಿದೆ, ಉಳಿದ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಸುತ್ತಿಲ್ಲ. ಕಾನೂನು ವಿಶ್ವವಿದ್ಯಾಯಲದ ಆಡಳಿತ ವೈಫಲ್ಯವೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲಾ ಸಮಸ್ಯೆಗಳ ನಡುವೆ ಪರೀಕ್ಷೆ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ದೋಚುತ್ತಿರುವುದು ಖಂಡನೀಯ. 2019-2020ರಲ್ಲಿ ಪರೀಕ್ಷಾ ಶುಲ್ಕ ಪಡೆದುಕೊಂಡಿದ್ದು ನಂತರ ನ್ಯಾಯಾಲಯದ ತೀರ್ಮಾನದಂತೆ ಮುಂಬಡ್ತಿ ಮಾಡಿರುತ್ತದೆ. ಆದರೆ ಪರೀಕ್ಷಾ ಶುಲ್ಕ ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಿರುವುದಿಲ್ಲ. ಪ್ರಸ್ತುತ ಅಧಿಕಾರದಲ್ಲಿರುವ ಉಪಕುಲಪತಿ ಪಶ್ಚಿಮ ಬಂಗಾಳದಲ್ಲಿ ಹಗರಣ ನಡೆಸಿದ ಆರೋಪ ಹೊಂದಿದ್ದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುತ್ತಾರೆ. ನಂತರ ಪಟ್ನಾದ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಯಾಗಿ ಅಧಿಕಾರ ಸ್ವೀಕರಿಸುವುದನ್ನು ಅಲ್ಲಿಯ ವಿದ್ಯಾರ್ಥಿ ಸಮುದಾಯ ವಿರೋಧಿಸಿರುತ್ತದೆ ಮತ್ತು ಪ್ರತಿಭಟಿಸಿರುತ್ತದೆ.
ಈ ಎಲ್ಲಾ ವಿಷಯಗಳನ್ನು ಪರಿಗಣನೆ ತೆಗೆದುಕೊಂಡು ಪ್ರತ್ಯೇಕ ಸಮಿತಿ ರಚಿಸಿ ತನಿಖೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವಿದ್ಯಾರ್ಥಿ ಸಮೂಹ ಒತ್ತಾಯಿಸಿದೆ.
ವಿಶ್ವವಿದ್ಯಾಲಯದ ಅವೈಜ್ಞಾನಿಕ ನೀತಿ ಕೈಬಿಡಬೇಕು, ಫಲಿತಾಂಶಗಳ ಲೋಪ ಪದೇ ಪದೇ ಮರು ಮೌಲ್ಯಮಾಪನ ಮಾಡಿಸಿಕೊಂಡರೂ ಅದೇ ಅಂಕಗಳನ್ನು ನೀಡುವುದು, ಕಾಟಾಚಾರದ ಮೌಲ್ಯಮಾಪನ ಮಾಡುವ ಪದ್ದತಿ ಕೈ ಬಿಟ್ಟು ವಿದ್ಯಾರ್ಥಿಗಳ ಹಿತ ಕಾಪಾಡಬೇಕು, ಪರೀಕ್ಷಾ ಶುಲ್ಕ ಮರುಪಾವತಿ ಮಾಡಬೇಕು ಮತ್ತು ಪರೀಕ್ಷಾ ಮರು ಮೌಲ್ಯ ಮಾಪನ ಹೆಸರಿನಲ್ಲಿ ನಡೆಯುವ ಹಗರಣವನ್ನು ಪ್ರತ್ಯೇಕ ಸಮಿತಿ ರಚಿಸಿ ತನಿಖೆ ನಡೆಸಬೇಕು, ವಿದ್ಯಾರ್ಥಿ ಪರವಾದ, ಪ್ರಮಾಣಿಕ ನ್ಯಾಯಶಾಸ್ತಜ್ಞರನ್ನು ವಿಶ್ವವಿದ್ಯಾಲಯದ ಉಪಕುಲಪತಿಯನ್ನಾಗಿ ನೇಮಕ ಮಾಡಬೇಕು, ವಿದ್ಯಾರ್ಥಿಗಳನ್ನು ದೋಚುವ ನೀತಿಯನ್ನು ಕೈ ಬಿಟ್ಟು ವಿದ್ಯಾರ್ಥಿಗಳ ಪರವಾದ ಮತ್ತು ಶೈಕ್ಷಣಿಕ ವಾತಾವರಣದ ನೀತಿಯನ್ನು ಅನುಸರಿಸಲು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವಿದ್ಯಾರ್ಥಿ ಸಮೂಹ ಆಗ್ರಹಿಸಿದೆ.
ನಿಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವಿದ್ಯಾರ್ಥಿ ಸಮೂಹದ ಮುಖಂಡರಾದ ವಿನಿತ್ ದೇವಾಡಿಗ, ವಿನುಶ ರಮಣ ಬಿ, ಮನೋಜ್ ವಾಮಂಜೂರು ಹಾಗೂ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಸ್ಎಫ್ಐ ಜಿಲ್ಲಾ ಮುಖಂಡರಾದ ಮಾಧುರಿ ಬೋಳಾರ್, ಕೀರ್ತಿ ಕುತ್ತಾರ್ ಬೆಂಬಲ ನೀಡಿ ಉಪಸ್ಥಿತರಿದ್ದರು.