ದರೋಡೆ ಪ್ರಕರಣ : ಪೊಲೀಸರೇ ಆರೋಪಿಗಳು

ಕೋಲಾರ: ಪೊಲೀಸರ ಸೋಗಿನಲ್ಲಿ ವ್ಯಕ್ತಿಯನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲೇ ಪೊಲೀಸರೇ ಸಿಕ್ಕಿ ಬಿದ್ದಿದ್ದಾರೆ.

ಸಶಸ್ತ್ರ ಮೀಸಲು ಪಡೆಯ ಇಬ್ಬರು ಡಿಎಆರ್ ಪೇದೆಗಳು, ಒಬ್ಬ ಸಾರಿಗೆ ಬಸ್ ನೌಕರ, ಅರಣ್ಯ ಇಲಾಖೆ ಗಾರ್ಡ್, ಬೆಸ್ಕಾಂ ನೌಕರ ಸೇರಿ ಆರು ಜನರನ್ನು ವಶಕ್ಕೆ ಪಡೆಯಲಾಗಿದೆ. ಕೋಲಾರ ಡಿಎಆರ್ ಪೇದೆಗಳಾದ ವೇಣುಗೋಪಾಲ್ ಹಾಗೂ ಬಸವರಾಜ್ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ವೇಣು ಗೋಪಾಲ್ ಜಿಲ್ಲಾ ಸತ್ತ್ರ ನ್ಯಾಯಾಧೀಶರ ಗನ್ ಮ್ಯಾನ್ ಆಗಿದ್ದು, ಸಾರಿಗೆ ಸಂಸ್ಥೆ ನೌಕರ ಉದಯ್, ಅರಣ್ಯ ಇಲಾಖೆ ಗಾರ್ಡ್ ನವೀನ್ ಹಾಗೂ ಮಾರ್ಕೊಂಡ, ಹರ್ಷದ್ ಎಂಬುವವರನ್ನು ಬಂಧಿಸಲಾಗಿದೆ.

ಪ್ರಕರಣದ ಹಿನ್ನಲೆ : ಪೊಲೀಸ್ ಪೇದೆಗಳಾದ ವೇಣುಗೋಪಾಲ್‌ ಬಸವರಾಜು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರ ಉದಯ್‌, ಬೆಸ್ಕಾಂ ನೌಕರರಾದ ಮಾರ್ಕೋಂಡ ಮತ್ತು ಹರ್ಷದ್‌, ಅರಣ್ಯ ಇಲಾಖೆ ಗಾರ್ಡ್‌ ನವೀನ್‌ ಎಂಬುವರ ಜತೆ ಸೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಕಟ್ಟಿಗೇನಹಳ್ಳಿಯ ಶಬ್ಬೀರ್‌ ಬೇಗ್‌ ಎಂಬುವರನ್ನು ಚಿಕ್ಕಕುಂತೂರು ಗೇಟ್‌ ಬಳಿ ನ.27ರಂದು ಅಡ್ಡಗಟ್ಟಿ ದರೋಡೆ ಮಾಡಿದ್ದರು.

ಬಂಗಾರಪೇಟೆಯಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದ ಶಬ್ಬೀರ್ ಅವರು ಕಾರಿನಲ್ಲಿ ಕಟ್ಟಿಗೇನಹಳ್ಳಿಗೆ ವಾಪಸ್‌ ಹೋಗುತ್ತಿದ್ದಾಗ ಆರೋಪಿಗಳು ಈ ದುಷ್ಕೃತ್ಯ ಎಸಗಿದ್ದರು. ಆರೋಪಿಗಳು ಪೊಲೀಸರ ಸೋಗಿನಲ್ಲಿ ಸಮವಸ್ತ್ರ ಧರಿಸಿ 2 ಕಾರುಗಳಲ್ಲಿ ಶಬ್ಬೀರ್‌ರ ವಾಹನವನ್ನು ಹಿಂಬಾಲಿಸಿ ಬಂದು ಕಟ್ಟಿಗೇನಹಳ್ಳಿ ಗೇಟ್‌ ಬಳಿ ಅಡ್ಡಗಟ್ಟಿದ್ದರು. ನಂತರ ತಾವು ಆಂಧ್ರಪ್ರದೇಶದ ಪೊಲೀಸರೆಂದು ಪರಿಚಯಿಸಿಕೊಂಡು, ಕಾರಿನಲ್ಲಿ ರಕ್ತಚಂದನ ಮರ ಸಾಗಿಸುತ್ತಿದ್ದೀಯಾ ಎಂದು ಬೆದರಿಸಿ ವಿಚಾರಣೆಗೆ ಕರೆದೊಯ್ಯುವ ನೆಪದಲ್ಲಿ ಶಬ್ಬೀರ್‌ರನ್ನು ಎಳೆದೊಯ್ದಿದ್ದರು.

ಶಬ್ಬೀರ್‌ರನ್ನು ರಾತ್ರಿಯಿಡೀ ವಿವಿಧೆಡೆ ಸುತ್ತಾಡಿಸಿದ್ದ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್‌ ಮತ್ತು ₹  1,700 ಹಣ ದೋಚಿದ್ದರು.

ಪಿಸ್ತೂಲ್‌ನಿಂದ ಬೆದರಿಕೆ: ಪ್ರಕರಣದ ಪ್ರಮುಖ ಆರೋಪಿ ವೇಣುಗೋಪಾಲ್‌ ತಮ್ಮ ಸರ್ವಿಸ್‌ ಪಿಸ್ತೂಲ್‌ ತೋರಿಸಿ ಶಬ್ಬೀರ್‌ಗೆ ಬೆದರಿಕೆ ಹಾಕಿದ್ದರು. ಅಲ್ಲದೇ, ಶಬ್ಬೀರ್‌ರ ಸಹೋದರ ಶೇಖ್‌ಉಲ್ಲಾ ಅವರಿಗೆ ಕರೆ ಮಾಡಿ ತಮ್ಮ ಅಣ್ಣನನ್ನು ರಕ್ತಚಂದನ ಮರ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿಸಿರುವುದಾಗಿ ಹೇಳಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದರು ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿಗಳು ಶಬ್ಬೀರ್‌ರನ್ನು ಕೋಲಾರ ಹೊರವಲಯದ ಟಮಕ ಬಳಿ ಕಾರಿನಿಂದ ಕೆಳಗೆ ತಳ್ಳಿ ವಾಹನಸಮೇತ ಪರಾರಿಯಾಗಿದ್ದರು. ಬಳಿಕ ಶಬ್ಬೀರ್‌ ಗಲ್‌ಪೇಟೆ ಠಾಣೆಗೆ ದೂರು ನೀಡಿದರು. ಅವರು ನೀಡಿದ ಸುಳಿವು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಅಕ್ರಮವಾಗಿ ಗೃಹ ಬಂಧನದಲ್ಲಿಟ್ಟ, ಹಲ್ಲೆ, ದರೋಡೆ, ಅಪರಾಧ ಸಂಚು ಆರೋಪ, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *