ಬೆಂಗಳೂರು: ಡಾ. ಶಿವರಾಮ್ ಕಾರಂತ್ ಬಡಾವಣೆಯಲ್ಲಿರುವ 300 ಕಟ್ಟಡಗಳನ್ನು ಸಕ್ರಮಗೊಳಿಸಬೇಕು ಮತ್ತು ಅವುಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲೇಔಟ್ನೊಂದಿಗೆ ಸಂಯೋಜಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದರಿಂದಾಗಿ 300 ಮನೆ ಮಾಲೀಕರಿಗೆ ಎದುರಾಗಿದ್ದ ಆತಂಕ ನಿವಾರಣೆಯಾಗಿದೆ. ನ್ಯಾಯಾಲಯದ ಈ ಆದೇಶದಿಂದ ಸಕ್ರಮಗೊಳ್ಳುತ್ತಿರುವ ಮೊದಲ ಹಂತವಾಗಿದ್ದು, ಸಕ್ರಮ ಬಯಸುತ್ತಿರುವ 1,418 ಅರ್ಜಿದಾರರಲ್ಲೂ ವಿಶ್ವಾಸ ಮೂಡಿದೆ.
ಸುಪ್ರೀಂ ಕೋರ್ಟ್ ನೇಮಿಸಿರುವ ನ್ಯಾಯಮೂರ್ತಿ ಎ. ವಿ. ಚಂದ್ರಶೇಖರ್ ನೇತೃತ್ವದ ಸಮಿತಿಯು ಇತ್ತೀಚಿಗೆ ಎರಡು ವರದಿಗಳನ್ನು ಸಲ್ಲಿಸಿದ ನಂತರದಲ್ಲಿ ಅಂದರೆ, ನವೆಂಬರ್ 25ರಂದು ಸುಪ್ರೀಂಕೋರ್ಟಿನಿಂದ ಈ ಆದೇಶ ಬಂದಿದೆ. ಬಿಡಿಎ, ಕರ್ನಾಟಕ ಸರ್ಕಾರ ಮತ್ತಿತರರ ನಡುವಿನ ಕೇಸ್ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರು ತೀರ್ಪು ನೀಡಿದ್ದಾರೆ.
ನವೆಂಬರ್ 10 ಮತ್ತು ನವೆಂಬರ್ 23ರಂದು ಎ.ವಿ. ಚಂದ್ರಶೇಖರ್ ಸಮಿತಿ ನೀಡಿದ್ದ ಮೂರು ಮತ್ತು ನಾಲ್ಕನೇ ವರದಿ ಶಿಫಾರಸ್ಸಿನ ಆಧಾರದ ಮೇಲೆ ಈ ಆದೇಶ ನೀಡಿರುವುದಾಗಿ ಕೋರ್ಟ್ ಹೇಳಿದೆ. ನವೆಂಬರ್ 26, 2014 ಮತ್ತು ಆಗಸ್ಟ್ 3, 2018 ರ ನಡುವೆ ಲೇಔಟ್ನಲ್ಲಿ ಆಗಿರುವ ನಿರ್ಮಾಣಗಳ ಕಾನೂನುಬದ್ಧತೆ ಉದ್ದೇಶದಿಂದ ನ್ಯಾಯಾಲಯವು ಸಮಿತಿಯನ್ನು ನೇಮಿಸಿತ್ತು.