ಮುಂಬಯಿ : ರೈತರಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಖಾತ್ರಿಪಡಿಸುವ ಕಾನೂನನ್ನು ಕೇಂದ್ರ ಸರ್ಕಾರವು ಜಾರಿಗೆ ತರಬೇಕು, ಇಲ್ಲವಾದಲ್ಲಿ ನಾಲ್ಕು ಲಕ್ಷ ಟ್ರಾಕ್ಟರ್ಗಳ ಮೂಲಕ ಮತ್ತೊಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಗಣರಾಜ್ಯೋತ್ಸವ ದಿನದಂದು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದರು.
ಮುಂಬಯಿನ ಆಜಾದ್ ಮೈದಾನದಲ್ಲಿ ನಡೆದ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಎಂಎಸ್ ಪಿಯನ್ನು ಬೆಂಬಲಿಸುತ್ತಿದ್ದರು ಹಾಗೂ ರಾಷ್ಟ್ರವ್ಯಾಪಿ ಜಾರಿಗೆ ಸಹಮತ ವ್ಯಕ್ತಪಡಿಸುತ್ತಿದ್ದರು. ಮೋದಿ ಸರ್ಕಾರ ಎಂಎಸ್ಪಿ ವಿಷಯವಾಗಿ ಚರ್ಚೆ ನಡೆಸಲು ಸಿದ್ಧವಿಲ್ಲ. ನಾವು ಎಂಎಸ್ಪಿ ಜಾರಿಗಾಗಿ ನಮ್ಮ ಚಳುವಳಿ ಮುಂದುವರೆಯಲಿದೆ ಎಂದು ಕರೆ ನೀಡಿದರು.
ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕೆ ಕಿಸಾನ್ ಮಹಾಪಂಚಾಯತ್ ಕರೆ ನೀಡಿತ್ತು ಹಾಗೂ ಎಂಎಸ್ ಪಿ ಖಾತ್ರಿಪಡಿಸುವ ಕಾನೂನುಗಳ ಜಾರಿ, ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯುವುದು, ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡಲು ಒತ್ತಾಯಿಸಿತ್ತು.