ರೈತರು ಕಲಿಸಿದ ಪಾಠಗಳನ್ನು ಸರ್ಕಾರ ಕಲಿತರೆ ಭಾರತಕ್ಕೆ ಒಳ್ಳೆಯದು : ಬೃಂದಾ ಕಾರಟ್

ಬೃಂದಾ ಕಾರಟ್

ಸರ್ವಾಧಿಕಾರಕ್ಕೆ ನೆಲೆಯಿಲ್ಲ ಮತ್ತು ಸರ್ವಾಧಿಕಾರವನ್ನು ಸೋಲಿಸಬಹುದು ಎಂದು ಭಾರತದ ಶ್ರಮಜೀವಿ  ವರ್ಗಗಳು, ರೈತರು ಮತ್ತು ಕಾರ್ಮಿಕರು ನಿರೂಪಿಸಿದ್ದಾರೆ. ಸದ್ಯಕ್ಕೆ ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳುವ ಮೂಲಕ, ಈ ಸಮಸ್ಯೆಯನ್ನು ಪಕ್ಕಕ್ಕೆ ತಳ್ಳಬಹುದು ಮತ್ತು ತಮ್ಮದೇ ಆದ ವಿಭಜಕ ಕಾರ್ಯಸೂಚಿಯನ್ನು ತೂರಿಸಲು ಉತ್ತಮ ಅವಕಾಶವನ್ನು ಪಡೆಯಬಹುದು ಎಂದು ಬಿಜೆಪಿ ಭಾವಿಸುತ್ತಿದೆ. ಆದರೆ  ಸರಕಾರ ರೈತರು ಕಲಿಸಿದ  ಮೂರು ಪಾಠಗಳನ್ನು ಕಲಿತರೆ ಭಾರತಕ್ಕೆ ಒಳ್ಳೆಯದು.

ತಮ್ಮ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುತ್ತದೆ ಎಂಬ ಪ್ರಧಾನ ಮಂತ್ರಿಯವರ ಪ್ರಕಟಣೆಯು ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದ ರೈತರ ವರ್ಷಪೂರ್ತಿ ನಡೆದ ಮತ್ತು ಅಷ್ಟೇ ಐತಿಹಾಸಿಕ, ಐಕ್ಯ ಹೋರಾಟಕ್ಕೆ ದೊರೆತ ಐತಿಹಾಸಿಕ ವಿಜಯವಾಗಿದೆ.

ಆದರೆ ಸೋಲಿನಲ್ಲಿ ಮೋದಿ ಘನತೆ ತೋರಲಿಲ್ಲ.

ಹೋರಾಟದಲ್ಲಿ ಹುತಾತ್ಮರಾದ 700 ರೈತರ ಬಗ್ಗೆ ಒಂದು ವಿಷಾದದ ಮಾತನಾಡಲಿಲ್ಲ. ರೈತರ ಮೇಲಿನ ಎಲ್ಲ ಸುಳ್ಳು ಪ್ರಕರಣಗಳನ್ನು ಹಿಂಪಡೆಯುವ ಭರವಸೆ ನೀಡಲಿಲ್ಲ. ಈ ಒಂದು ವರ್ಷದ ಅವಧಿಯಲ್ಲಿ ರೈತರ ವಿರುದ್ಧ ನಿಷ್ಠುರ ಮಾತುಗಳನ್ನಾಡಿದ್ದಕ್ಕೆ ಕ್ಷಮೆಯಾಚಿಸಲಿಲ್ಲ.  ಅವರ ಪಕ್ಷದ ನಾಯಕರು ರೈತರನ್ನು ಭಯೋತ್ಪಾದಕರು, ದೇಶದ್ರೋಹಿಗಳು, ಗೂಂಡಾಗಳು, ಅಡ್ಡಿಪಡಿಸುವವರು, ಸುಳ್ಳುಗಾರರು ಮತ್ತು ಮೋಸಗಾರರು ಎಂದು ನಿಂದಿಸಿದ್ದರು. ಇವರಲ್ಲಿ ಇನ್ನೂ ಕೇಂದ್ರ ಸಂಪುಟದಲ್ಲಿರುವ ಒಬ್ಬರು ಲಖೀಂಪುರ ಖೇರಿಯಲ್ಲಿ ನಡೆದ ಭೀಕರ ಘಟನೆಗಳಲ್ಲಿ ಶಾಮೀಲಾಗಿರುವವರು.  ಮೋದಿ-ಜಿ ಕಿವಿಗಡಚಿಕ್ಕುವ ಮೌನವಹಿಸಿಕೊಂಡೇ ಇದ್ದರು.

ಕೆಲವು ‘ ರೈತರ ಮನವೊಲಿಸುವಲ್ಲಿ ವಿಫಲರಾಗಿದ್ದಕ್ಕೆ ವಿಷಾದಿಸುತ್ತೇನೆ ಎಂದು ಕಾನೂನನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಪ್ರಧಾನಿಯವರು ಒಂದು ಸ್ವಯಂ ಗೋಲು ಹೊಡೆದುಕೊಂಡರು. ಇಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ: ಕಾನೂನುಗಳು ಉತ್ತಮವಾಗಿದ್ದರೆ, ರೈತರಲ್ಲಿ ‘ಕೆಲವರು’ ಮಾತ್ರ ಅದನ್ನು ವಿರೋಧಿಸಿದರೆ, ಕಾನೂನುಗಳನ್ನು ಏಕೆ ಹಿಂತೆಗೆದುಕೊಳ್ಳಬೇಕು? ಇದಕ್ಕೆ ಕಾರಣವನ್ನು ಅರಿತುಕೊಳ್ಳಲು ರಾಜಕೀಯ ವಿಜ್ಞಾನಿಗಳ ಅಗತ್ಯವಿಲ್ಲ – ಮುಂಬರುವ ಚುನಾವಣೆಗಳಲ್ಲಿ, ವಿಶೇಷವಾಗಿ ಹೋರಾಟದ ಕೇಂದ್ರಬಿಂದುಗಳಾಗಿರುವ ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ, ರೈತರ  ನಿರಂತರ  ಹೋರಾಟದಿಂದಾಗಿ ಆಗಬಹುದಾದ ದೊಡ್ಡ ರಾಜಕೀಯ ಪರಿಣಾಮ ಈ ನಿರ್ಧಾರದ ಹಿಂದಿದೆ.

“ಛೆ! ಬಹುಶಃ ನನ್ನ ತಪಸ್ಸಿನಲ್ಲೇ ಏನೋ ಕೊರತೆ ಇದ್ದಿರಬಹುದು!” (ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ)

ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿಯೂ ಪ್ರಧಾನಿಯವರ ಸಮರ್ಥನೆಯಲ್ಲಿದ್ದ ಒಂದು ಸಂದೇಶವು ರೈತರಿಗೆ ಜೋರಾಗಿ ಮತ್ತು ಸ್ಪಷ್ಟವಾಗಿ ಕೇಳಿಸಿತು –  ಅದೆಂದರೆ, ಅವಕಾಶವನ್ನು ನೀಡಿದರೆ,  ಅದರಲ್ಲೂ  ರಾಜ್ಯ ಚುನಾವಣೆಯಲ್ಲಿ ಗೆದ್ದರೆ ಸರ್ಕಾರವು ಮತ್ತೆ ಈ ಕಾನೂನುಗಳನ್ನು ತರುತ್ತದೆ ಎಂಬುದು. ಉತ್ತರಪ್ರದೇಶದಲ್ಲಿ ಅಧಿಕಾರ ಪಡೆಯುವಲ್ಲಿ ಬಿಜೆಪಿ ವಿರುದ್ಧ  ಪ್ರಮುಖ ಸ್ಪರ್ಧಿಯಾಗಿರುವ ಸಮಾಜವಾದಿ ಪಕ್ಷವು “ಸಾಫ್ ನಹೀ ಹೈ ಇನ್ಕಾ ದಿಲ್, ಚುನಾವ್ ಬಾದ್ ಫಿರ್ ಲೇಂಗೆ ಬಿಲ್” (ಇವರ ಮನಸ್ಸು ಸ್ವಚ್ಛವಾಗಿಲ್ಲ, ಚುನಾವಣೆ ನಂತರ ಮತ್ತೆ ಮಸೂದೆ ತರುತ್ತಾರೆ) ಎಂಬ ಘೋಷಣೆಯನ್ನು ಈಗಾಗಲೇ ನೀಡಿದೆ.

ಸಂಯುಕ್ತ ಕಿಸಾನ್ ಮೋರ್ಚಾದ ಹೇಳಿಕೆಯು ತಾವು ಎತ್ತುತ್ತಿರುವ ಪ್ರಮುಖ ವಿಷಯವಾದ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡುವವರೆಗೆ ತಮ್ಮ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಸೂಚಿಸುತ್ತದೆ.  ಪ್ರಧಾನಿ ಘೋಷಣೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ಹಲವು ರೈತ ನಾಯಕರು ಇತರ ವಿಷಯಗಳನ್ನೂ ಎತ್ತಿದ್ದಾರೆ. ಸರ್ಕಾರದ ಬಗ್ಗೆ ಅಪಾರ ಅಪನಂಬಿಕೆ ಇದೆ. ಹಾಗಾಗಿ ಈ ಕ್ರಮದಿಂದ ರೈತ ಅಜೆಂಡಾವನ್ನು ಚುನಾವಣಾ ಸಮರದಿಂದ ತೆಗೆದುಹಾಕಬಹುದು ಎಂದು ಬಿಜೆಪಿ ಭಾವಿಸಿದ್ದರೆ, ಅದಕ್ಕೆ ಕಟು ಆಶ್ಚರ್ಯ ಕಾದಿದೆ..

ಬಿಜೆಪಿ ನಡೆಗೆ ಇನ್ನೊಂದು ಸಿನಿಕ ಕಾರಣವಿದೆ. ಉತ್ತರ ಪ್ರದೇಶದಲ್ಲಿ, ವಿಶೇಷವಾಗಿ ಪಶ್ಚಿಮ ಉತ್ತರ ಪ್ರದೇಶದಲ್ಲಿ, ಕಳೆದ ವಿಧಾನಸಭಾ ಚುನಾವಣೆಗಳಿಗೆ ಸ್ವಲ್ಪ ಮೊದಲು ನಡೆದ ಕೋಮು ಗಲಭೆಗಳು ಬಿಜೆಪಿಗೆ ಪುಷ್ಕಳ ಚುನಾವಣಾ ಲಾಭ  ನೀಡಿದವು. ಈ ಬಾರಿಯ ಚುನಾವಣೆಗೆ ಕ್ಷಣಗಣನೆ ಆರಂಭವಾದಾಗಿನಿಂದ, ಬಿಜೆಪಿಯು ವಿಷಕಾರಿ ಕೋಮು ಘೋಷಣೆಗಳ ಬತ್ತಳಿಕೆಯಲ್ಲಿರುವ ಎಲ್ಲ ಶಸ್ತ್ರಗಳನ್ನು  ಬಳಸಿಕೊಂಡು ಕೋಮು ಸೌಹಾರ್ದತೆಯನ್ನು ಸೃಷ್ಟಿಸುವ ಮಿಷನ್ ಮೋಡ್‌ನಲ್ಲಿದೆ-  ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು “ಲವ್ ಜಿಹಾದ್” ಎಂದು ಕರೆಯಲ್ಪಡುವ ಅಪಪ್ರಚಾರಗಳು,  ಹಿಂಸಾತ್ಮಕ ಗೋಹತ್ಯೆ ವಿರೋಧಿ ಅಭಿಯಾನಗಳು ಮತ್ತು ಮನಬಂದಂತೆ ಯುವ ಮುಸ್ಲಿಮರನ್ನು ಬಂಧಿಸಲು ಪೊಲೀಸರಿಗೆ ಪರವಾನಗಿ ನೀಡುತ್ತಿದೆ. ಆದರೆ ಈ ಕೋಮುವಾದಿ ಅಭಿಯಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಧಾರ್ಮಿಕ ಸಮುದಾಯಗಳು ಮತ್ತು ಜಾತಿಗಳನ್ನು ಮೀರಿದ ರೈತರ ಏಕತೆ ಬಿಜೆಪಿಯ ಪೂರ್ವನಿಯೋಜಿತ ಚುನಾವಣಾ ತಂತ್ರಕ್ಕೆ ತಡೆಗೋಡೆಯಾಗಿ ಕೆಲಸ ಮಾಡುತ್ತಿದೆ.

ಸದ್ಯಕ್ಕೆ ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳುವ ಮೂಲಕ, ಈ ಸಮಸ್ಯೆಯನ್ನು ಪಕ್ಕಕ್ಕೆ ತಳ್ಳಬಹುದು ಮತ್ತು ತಮ್ಮದೇ ಆದ ವಿಭಜಕ ಕಾರ್ಯಸೂಚಿಯನ್ನು ತೂರಿಸಲು ಉತ್ತಮ ಅವಕಾಶವನ್ನು ಪಡೆಯಬಹುದು ಎಂದು ಬಿಜೆಪಿ ಭಾವಿಸುತ್ತಿದೆ.

ರೈತರು ಕಲಿಸಿದ  ಈ ಕೆಲವು ಪಾಠಗಳನ್ನು  ಸರ್ಕಾರ ಕಲಿತರೆ ಭಾರತಕ್ಕೆ ಒಳ್ಳೆಯದು:

ಪಾಠ 1: ಪಾಶವೀ ಬಹುಮತದ ಬಲವನ್ನು ಬಳಸಿಕೊಂಡು ಸಂಸತ್ತಿನ ಕಾರ್ಯವಿಧಾನಗಳನ್ನು ಬದಿಗೊತ್ತಿ ಬಿಡುವುದು ಬಹಳ  ದುಬಾರಿ ಯಾಬಹುದು. ಸರ್ಕಾರವು ಮಸೂದೆಗಳನ್ನು ಸ್ಥಾಯಿ ಸಮಿತಿಗೆ ಕಳುಹಿಸಿದ್ದರೆ, ರೈತರ ಮಾತುಗಳನ್ನು ಕೇಳಲು ಅವಕಾಶ ನೀಡಿದ್ದರೆ, ನ್ಯಾಯಯುತ ಮತದಾನ ಪ್ರಕ್ರಿಯೆಗೆ ಅವಕಾಶ ನೀಡಿದ್ದರೆ ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ.  ಅವು ಪ್ರಸ್ತುತ ರೂಪದಲ್ಲಿ ಕಾನೂನುಗಳಾಗುತ್ತಿರಲಿಲ್ಲ.

ಪಾಠ  2: ಭಿನ್ನಾಭಿಪ್ರಾಯದ ಧ್ವನಿಗಳನ್ನು ಕಡೆಗಣಿಸುವುದು ಮತ್ತು ತಿರಸ್ಕರಿಸುವುದು ಪ್ರತಿಕೂಲ ಪರಿಣಾಮ ಬೀರುತ್ತದೆ. ಮೊದಲಿನಿಂದಲೂ ಈ ಸರ್ಕಾರ ರೈತರ ಮಾನಹಾನಿ ಮಾಡಲು ತನ್ನೆಲ್ಲ ಅಧಿಕಾರವನ್ನು ಬಳಸಿಕೊಂಡಿದೆ. ಆದಿವಾಸಿಗಳು ಮತ್ತು ದಲಿತರು ಮತ್ತು ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಪಾದಿಸುವವರನ್ನು ‘ನಗರ ನಕ್ಸಲರು’ ಎಂದು ಹೆಸರಿಸಿ ಜೈಲಿನಲ್ಲಿಟ್ಟಂತೆ, ರೈತ ನಾಯಕರನ್ನು ದೇಶವಿರೋಧಿಗಳೆಂದು ಬಿಂಬಿಸಲಾಗಿದೆ. ಪ್ರಸ್ತುತ  ಸಂದರ್ಭದಲ್ಲಿ, ರೈತರ ಐಕ್ಯ ಚಳುವಳಿಗಳ ಬಲವು ಈ ಹೋರಾಟವನ್ನು  ಸಾವಯವವಾಗಿ ಬಿಜೆಪಿ ಮತ್ತು ಅದರ ಕೇಂದ್ರ ಹಾಗೂ ರಾಜ್ಯಗಳ  ಸರ್ಕಾರಗಳ ವಿರುದ್ಧ ಸಾಮೂಹಿಕ ಹೋರಾಟವಾಗಿ ರೂಪಾಂತರಗೊಳ್ಳುತ್ತಿರುವುದು ಸರ್ಕಾರವನ್ನು ಹೆಜ್ಜೆ ಹಿಂದಿಡುವಂತೆ ಮಾಡಿದೆ.

ಪಾಠ  3-ಇದಕ್ಕೆ ವಿವರಭೆಯ ಅಗತ್ಯವಿಲ್ಲ.: ಭಾರತದ ಶ್ರಮಜೀವಿ  ವರ್ಗಗಳು, ರೈತರು ಮತ್ತು ಕಾರ್ಮಿಕರು ತಮ್ಮಧೀರ ಹೋರಾಟದ ಮೂಲಕ ಸರ್ವಾಧಿಕಾರಕ್ಕೆ ನೆಲೆಯಿಲ್ಲ ಮತ್ತು ಸರ್ವಾಧಿಕಾರವನ್ನು ಸೋಲಿಸಬಹುದು ಎಂದು ನಿರೂಪಿಸಿದ್ದಾರೆ.

ರೈತ ಆಂದೋಲನದ ವಿಜಯವು ವ್ಯಾಪಕವಾದ ಪರಿಣಾಮಗಳನ್ನು ಹೊಂದಿದೆ ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಧರ್ಮ ನಿರಪೇಕ್ಷತೆಯ ಮೌಲ್ಯಗಗಳ ಪರ ನಿಲ್ಲುವ ಎಲ್ಲರಲ್ಲೂ ವಿಶ್ವಾಸವನ್ನು ಮೂಡಿಸುತ್ತಿದೆ.

ಅನು:ಶೃಂ.ಶ.ನಾ.

Donate Janashakthi Media

Leave a Reply

Your email address will not be published. Required fields are marked *