ಕೊಡುಗು: ಕೃಷಿ ಕಾಯ್ದೆಗಳನ್ನು ಮುಂಬರುವ ರಾಜ್ಯ ಚುನಾವಣಾ ದೃಷ್ಠಿಯಿಂದ ಹಿಂತೆಗೆದುಕೊಳ್ಳಲಾಗಿದೆ ಎನ್ನುವ ಪ್ರತಿಪಕ್ಷಗಳ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ʻʻಕೃಷಿ ಕಾಯ್ದೆಗಳನ್ನು ರಚಿಸುವ ಬಗ್ಗೆ ಹಿಂದಿನ 30 ವರ್ಷಗಳಿಂದ ಚರ್ಚೆ ಆಗುತಿತ್ತುʼʼ ಎಂದು ಹೇಳಿದ್ದಾರೆ.
ಬೇರೆ ಬೇರೆ ಉಪಸಮಿತಿಗಳು ನೀಡಿದ ವರದಿ ಆಧಾರದಲ್ಲಿಯೇ ಕಾಯ್ದೆಗಳನ್ನು ಜಾರಿ ಮಾಡಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಹೇಳಿದ್ದಾರೆ. ದೇಶದ ಜನರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದೇವೆ ಅಂತ. ಕೃಷಿ ಅನ್ನೋದು ರಾಜ್ಯಗಳ ವಿಷಯ. ಹೀಗಾಗಿ ಆಯಾ ರಾಜ್ಯಗಳು ನಿರ್ಧಾರ ತೆಗೆದುಕೊಳ್ಳುತ್ತವೆ ಎಂದು ಸಚಿವರು ಹೇಳಿದರು.
ಜನಸ್ವರಾಜ್ ಸಮಾವೇಶಕ್ಕೆ ಆಗಮಿಸಿದ ಸಚಿವೆ ಶೋಭಾ ಕರಂದ್ಲಾಜೆ ಈ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಸಿದ್ದರಾಮಯ್ಯ ಟೀಕಿಸುತ್ತಿರುವ ವಿಚಾರಕ್ಕೆ ಟಾಂಗ್ ಕೊಟ್ಟಿದ್ದು, ʻʻಸಿದ್ದರಾಮಯ್ಯ ಸರ್ಕಾರದಲ್ಲಿ ಸ್ಥಿತಿ ಹೇಗಿತ್ತು ಎನ್ನೋದು ಗೊತ್ತಿದೆ. ಕಮಿಷನ್ ಪಡೆಯಲು ಯಾರನ್ನೆಲ್ಲಾ ಇಟ್ಟುಕೊಂಡಿದ್ದರು ಅನ್ನೋದೂ ಗೊತ್ತಿದೆ. ಕೈಗೆ ಎಟಕುತ್ತಿಲ್ಲ ಎಂದಾಗ ದ್ರಾಕ್ಷಿ ಹುಳಿ ಎನ್ನೋದು ವಾಡಿಕೆ. ಸಿದ್ದರಾಮಯ್ಯನವರ ಸ್ಥಿತಿಯೂ ಹಾಗೆ ಆಗಿದೆ. ಅಧಿಕಾರ ಸಿಗದೆ ಬೇಸತ್ತು ಇಂತಹ ಮಾತುಗಳನ್ನು ಆಡುತ್ತಿದ್ದಾರೆʼʼ ಎಂದು ಹೇಳಿದರು.
ಜನಸ್ವರಾಜ್ ಅಲ್ಲ ಬಿಜೆಪಿಯದ್ದು ಬರ್ಬಾದ್ ಸಮಾವೇಶ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್.ಈಶ್ವರಪ್ಪ ʻʻಚುನಾವಣಾಗಳು ಬಂದಾಗ ಮಾತ್ರ ಅವರು ಹೀಗೆ ಮಾತನಾಡೋದು. ಇದು ಕಾಂಗ್ರೆಸನ್ನು ಬರ್ಬಾದ್ ಮಾಡುವ ಸಮಾವೇಶ. ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಈಗ ಪ್ರಾದೇಶಿಕ ಪಕ್ಷವಾಗಿದೆ. ಅದು ಕೂಡ ಯಾವಾಗ ಹೊಡೆದು ಹೋಗುತ್ತೋ ಗೊತ್ತಿಲ್ಲ. ಈಗಾಗಲೇ ರಾಜ್ಯ ಕಾಂಗ್ರೆಸ್ಸಿನಲ್ಲಿ ಎರಡು ಬಣವಾಗಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯದು ಎರಡು ಬಣವಾಗಿದೆ. ಇಬ್ಬರಿಗೂ ತಾವು ಮುಖ್ಯಮಂತ್ರಿ ಅನ್ನೋದು ಬಂದಿದೆ. ಸಮಾವೇಶಗಳಲ್ಲಿ ಸಿದ್ದರಾಮಯ್ಯ ಡಿಕೆಶಿ ಇಬ್ಬರ ಪರವಾಗಿ ಘೋಷಣೆ ಕೂಗುತ್ತಾರೆ. ಇಬ್ಬರಿಗೂ ಒಳಗೊಳಗೊಳಗೆ ಖುಷಿಯಾಗುತ್ತದೆ. ಆದರೆ ಮೇಲ್ನೋಟಕ್ಕೆ ಕ್ರಮಕೈಗೊಳ್ಳುವುದಾಗಿ ಹೇಳ್ತಾರೆ. ಇದುವರೆಗೆ ಯಾರ ವಿರುದ್ಧ ಯಾವ ಕ್ರಮಕೈಗೊಂಡಿದ್ದಾರೆʼʼ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಚುನಾವಣೆ ಬಳಿಕ ಮುಖ್ಯಮಂತ್ರಿ ಬದಲಾವಣೆಯಾಗುತ್ತದೆ ಎಂಬ ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರದ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ ಮುಖ್ಯಮಂತ್ರಿ ಮಾಡಿರೋದು ಪ್ರಿಯಾಂಕ ಖರ್ಗೆ ಅಲ್ಲ, ಇವನ ಮಾತಿಗೆ ಯಾರು ಬೆಲೆ ಕೊಡ್ತಾರೆ. ಅವನ ಮಾತಿಗೆ ಎಳ್ಳಷ್ಟು ಬೆಲೆ ಕೊಡಲ್ಲʼʼ ಎಂದು ಪ್ರಿಯಾಂಕ ಖರ್ಗೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ ಶಾಸಕರು. ಬಿಜೆಪಿಯ ಕೇಂದ್ರ ನಾಯಕರು ಮುಖ್ಯಮಂತ್ರಿ ಮಾಡಿದ್ದು. ಅವರ ಪಕ್ಷದ ನಾಯಕರು ಹೊಡೆದಾಡುತ್ತಿದ್ದಾರೆ. ಜಮೀರು ಮುಸ್ಲಿಂ ನಾಯಕರು ಅಂತ ಹೊಡೆದಾಡುತ್ತಿದ್ದಾರಲ್ಲ. ಅದನ್ನು ಮೊದಲು ಪ್ರಿಯಾಂಕ ಖರ್ಗೆ ಸರಿ ಮಾಡಿಕೊಳ್ಳಲಿ ಎಂದು ಹೇಳಿದರು.