ಭೋಪಾಲ್: ಮಧ್ಯಪ್ರದೇಶದ ರೇವಾ ಜಿಲ್ಲೆಯ ದೊಲ್ಮೌ ಎಂಬ ಗ್ರಾಮದಲ್ಲಿ ಜಾತಿ ಕ್ರೌರ್ಯದಿಂದಾಗಿ ಕೂಲಿ ಮಾಡಿಸಿಕೊಂಡು ಕೂಲಿ ಹಣವನ್ನು ಕೇಳಿದ್ದಕ್ಕೆ ಮಾಡಿದ ಆಕ್ರೋಶಗೊಂಡ ಮಾಲೀಕ ಆತನ ಕೈಯನ್ನೇ ಕತ್ತರಿಸಿ ಹಾಕಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ರೇವಾ ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ದೂರದಲ್ಲಿರುವ ಸಿರ್ಮೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕಾರ್ಮಿಕನೊಬ್ಬ ತನ್ನ ಬಾಕಿ ಕೂಲಿಯನ್ನು ಕೇಳಿದ್ದಕ್ಕೆ ಮಾಲೀಕರು ಆತನ ಕೈ ಕತ್ತರಿಸಿದ್ದಾರೆ. ಸಂತ್ರಸ್ತ ಕೂಲಿ ಕಾರ್ಮಿಕ ಅಶೋಕ್ ಸಾಕೇತ್, ಪಾಡ್ರಿ ಗ್ರಾಮದ ನಿವಾಸಿಯಾಗಿದ್ದಾನೆ.
ಶನಿವಾರ ಬೆಳಿಗ್ಗೆ 11.30ರ ಸಮಯಕ್ಕೆ ಸಂತ್ರಸ್ತ ಅಶೋಕ್ ಸಾಕೇತ್ ತನ್ನ ಸಹೋದ್ಯೊಗಿ ಸತ್ಯೇಂದ್ರ ಜೊತೆಗೆ ಮಾಲೀಕರ ಮನೆಗೆ ಹೋಗಿ ತಮ್ಮ ಪಾಲಿನ ವೇತನ ಕೇಳಿದ್ದಾರೆ. ಅವರು ಪಿಲ್ಲರ್ ಮತ್ತು ಬೀಮ್ಸ್ ಗಳನ್ನು ನಿರ್ಮಿಸಿಕೊಟ್ಟಿದ್ದರು. ಅದಕ್ಕಾಗಿ 15,000 ಮೊತ್ತವನ್ನು ನಿಗದಿಪಡಿಸಿದ್ದರು. ಆದರೆ ಆರೋಪಿ ಗಣೇಶ್ ಮಿಶ್ರಾ ಕೇವಲ 6,000 ಕೊಡಲು ಮುಂದಾದಾಗ ಮಾತಿಗೆ ಮಾತು ಬೆಳೆದಿದೆ. ಆಗ ಹಣ ಕೊಡುವುದಾಗಿ ಮನೆ ಒಳಗೆ ಹೋದ ಗಣೇಶ್ ಕತ್ತಿ ತಂದು ತಲೆಗೆ ಹಿಡಿದಿದ್ದಾರೆ. ತಪ್ಪಿಸಿಕೊಳ್ಳಲು ಹೋದಾಗ ಅಶೋಕ್ ಕೈ ಕತ್ತರಿಸಿದ್ದಾರೆ ಎಂದು ಅಶೋಕ್ ಸಹೋದರ್ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಘಟನೆ ನಡೆದ ಸ್ವಲ್ಪ ಸಮಯದಲ್ಲೇ ಗಾಯಗೊಂಡ ಅಶೋಕ್ ಸಾಕೇತ್ ಎಂಬ ಕಾರ್ಮಿಕನನ್ನು ಪೊಲೀಸರು ಸಂಜಯ ಗಾಂಧಿ ಸ್ಮಾರಕ ಆಸ್ಪತ್ರೆಗೆ ರವಾನಿಸಿದರು. ಅಲ್ಲಿ ವೈದ್ಯರ ತಂಡವೊಂದು ಶಸ್ತ್ರಚಿಕಿತ್ಸೆಯ ಮೂಲಕ ಕಾರ್ಮಿಕನಿಗೆ ಕೈಯನ್ನು ಮರುಜೋಡಿಸಿದ್ದಾರೆ. ಬಹಳ ರಕ್ತ ಹೋಗಿದ್ದರಿಂದ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ ಎಂದು ಸಹಾಯಕ ಪೊಲೀಸ್ ಅಧೀಕ್ಷಕ ಶಿವಕುಮಾರ್ ವರ್ಮಾ ಹೇಳಿದ್ದಾರೆ.
ಆರೋಪಿಗಳನ್ನು ಬಂಧಿಸಲು ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ಪತ್ತೆ ಹಚ್ಚಲು ಶುರು ಮಾಡಿದ್ದರು. ಆರೋಪಿ ಗಣೇಶ್ ಮಿಶ್ರಾ ಒಂದಷ್ಟು ಹಣದೊಂದಿಗೆ ತನ್ನ ಬೈಕ್‌ನಲ್ಲಿ ಪರಾರಿಯಾಗಿದ್ದನು. ಅವನ ಸಹೋದರರಾದ ರತ್ನೇಶ್ ಮಿಶ್ರಾ ಮತ್ತು ಕೃಷ್ಣ ಕುಮಾರ್ ಎಂಬುವವರು ರಕ್ತವನ್ನು ತೊಳೆದು ಅವನು ಪರಾರಿಯಾಗಿಲು ಸಹಕರಿಸಿದ್ದರು.
ಆರೋಪಿ ಗಣೇಶ್ ಮಿಶ್ರಾನ ತಂದೆ ರಾಘವೇಂದ್ರ ಮಿಶ್ರಾ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಮೂವರ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಗಣೇಶ್ ಮಿಶ್ರಾನನ್ನು ಬಂಧಿಸಲಾಗಿದ್ದು, ಕೊಲೆ ಯತ್ನ ಮತ್ತು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 307 ಮತ್ತು 201ರ ಅಡಿಯಲ್ಲಿ, ಶಶಸ್ತ್ರ ಕಾಯ್ದೆ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ದಲಿತ ಸಂಘಟನೆಗಳು, ಅಂಬೇಡ್ಕರ್‌ವಾದಿಗಳು ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ. “ಸಮಾಜದಲ್ಲಿ ಜಾತಿ ಇಲ್ಲ ಎಂದು ವಾದ ಮಾಡುವವರು ಕಣ್ತೆರೆದು ನೋಡಬೇಕು” ಎಂದು ಕಿಡಿಕಾರಿದ್ದಾರೆ.