ಲಕ್ನೋ : ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಇಂದು (ಸೋಮವಾರ) ಲಖನೌ ಇಕೋಗಾರ್ಡನ್ನಲ್ಲಿ ಎಂಎಸ್ಪಿ ಅಧಿಕಾರ್ ಮಹಾಪಂಚಾಯತ್ ಆಯೋಜಿಸಿದೆ.
ಪಶ್ಚಿಮ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ರೈತರು ಮತ್ತು ಚಳುವಳಿ ಬೆಂಬಲಿಗರು, ಕಾರ್ಮಿಕರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮಹಾಪಂಚಾಯತ್ನಲ್ಲಿ ಸೇರುವ ನಿರೀಕ್ಷೆಯಿದೆ.
ಕನಿಷ್ಠ ಬೆಂಬಲ ಬೆಲೆ ಖಾತರಿ, ವರ್ಷವಿಡೀ ನಡೆದ ರೈತ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬದವರಿಗೆ ಪರಿಹಾರ, ರೈತರ ವಿರುದ್ಧದ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಆಗ್ರಹಿಸುವ ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.
27ರಂದು ರೈತರ ಸಭೆ: ಮುಂದಿನ ಹೋರಾಟದ ರೂಪುರೇಷೆ ಕುರಿತು ಇದೇ 27ರಂದು ಮತ್ತೊಂದು ಸುತ್ತಿನ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲು ರೈತ ಸಂಘಟನೆಗಳು ನಿರ್ಧರಿಸಿವೆ. 29ರಂದು ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುವ ನಿರೀಕ್ಷೆಯಿದ್ದು, ಇದಕ್ಕೂ ಮುನ್ನ ಈ ಸಭೆ ಜರುಗಲಿದೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೇರಿದಂತೆ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಧಾನಿಗೆ ಬಹಿರಂಗ ಪತ್ರ ಬರೆಯಲು ಭಾನುವಾರದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಎಸ್ ಕೆ ಎಂ ಮುಖಂಡರು ತಿಳಿಸಿದ್ದಾರೆ. ಪೂರ್ವ ನಿಗದಿಯಂತೆ, 29ರಂದು ಸಂಸತ್ಗೆ ಟ್ರ್ಯಾಕ್ಟರ್ ಜಾಥಾ ನಡೆಯಲಿದೆ.
ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಮಸೂದೆಗೆ ಕೇಂದ್ರ ಸಚಿವ ಸಂಪುಟವು ಬುಧವಾರ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಹೇಳಲಾಗುತ್ತಿದೆ.