ಬೆಂಗಳೂರು: ಪ್ರಸ್ತುತ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಬಹುದೊಡ್ಡ ಆತಂಕದಲ್ಲಿದೆ. ಇದು ಪ್ರಜಾಪ್ರಭುತ್ವಕ್ಕೆ ಗಂಡಾಂತಕಾರಿ ಬೆಳವಣಿಗೆ. ಬಹುತ್ವ ಭಾರತದಲ್ಲಿ ಏಕ ಭಾಷೆ. ಏಕ ದೇಶ ಏಕ ಸಂಸ್ಕೃತಿ ಎಂಬ ಕೋಮುವಾದಿ ಧೋರನೆಯೇ ತಪ್ಪು. ಇದು ಫ್ಯಾಸಿಸ್ಟ್ ನಡೆಯಾಗಿದೆ. ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ, ಶ್ರೇಷ್ಠ-ಕನಿಷ್ಠತೆಗಳ ತಾರತಮ್ಯ ನೀತಿ ಇರುವವರೆಗೂ ನೊಂದವರ, ಅವಮಾನಿತರ ಪರವಾಗಿ ದನಿ ಎತ್ತುವುದು ಪ್ರಜ್ಞಾವಂತ ಪ್ರಜೆಗಳ ಆದ್ಯ ಕರ್ತವ್ಯʼ ಎಂದು ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಹೇಳಿದರು.
ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಮಾತನಾಡಿದ ಸಿದ್ದರಾಮಯ್ಯ ಅವರು ʻʻಪೇಜಾವರರು ದಲಿತರ ಕೇರಿಗಳಿಗೆ, ಮನೆಗಳಿಗೆ ಭೇಟಿ ನೀಡಿದ್ದನ್ನು, ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಿದ್ದನ್ನು ಕುರಿತು ಸಿನಿಮಾ ಲೋಕದ ಸಂಗೀತ ನಿರ್ದೇಶಕ ಹಂಸಲೇಖ ಅವರು ಹೇಳಿರುವ ಮಾತುಗಳು ಜಾತಿ ವ್ಯವಸ್ಥೆ- ವರ್ಣನೀತಿ – ರಾಜಕೀಯ ಬೂಟಾಟಿಕೆಗಳಿಗೆ ಕನ್ನಡಿ ಹಿಡಿದ ಮಾತುಗಳಾಗಿವೆ ಎಂದರು.
ಅವರ ಮಾತುಗಳಲ್ಲಿ ದಲಿತರ ಅವಮಾನಿತರ ನೋವಿಗೆ ಮಿಡಿದ ಹೃದಯವಂತಿಕೆ ಕಾಣುತ್ತಿದೆಯೇ ಹೊರತು ಯಾವುದೇ ಅಸಂವಿಧಾನಿಕ ಪದ ಪ್ರಯೋಗವಿಲ್ಲ. ಈ ಮಾತುಗಳ ಸತ್ಯವನ್ನು ಅಂತರಂಗಕ್ಕೆ ತೆಗೆದುಕೊಳ್ಳಬೇಕಾದರೆ ಬಸವ ಪ್ರಜ್ಞೆಯ ಆತ್ಮವಿಮರ್ಶಾ ಗುಣವಿರಬೇಕಾಗುತ್ತದೆ. ಆತ್ಮವಿಮರ್ಶೆ ಇಲ್ಲದವರಿಗೆ ಅಹಂಕಾರವೇ ಅಜ್ಞಾನವಾಗಿ ನೊಂದ ನೋವನ್ನು ಅರಿಯಲಾರದ ಜಡತ್ವವಿರುತ್ತದೆ.
ಬಲಿತರು ದಲಿತರ ಕೇರಿಗಳಿಗೆ, ಮನೆಗಳಿಗೆ ಹೋಗುವ ಬೂಟಾಟೀಕೆಗಿಂತ ದಲಿತರನ್ನೇ ಬಲಿತರ ಮನೆಗಳಿಗೆ ಆಹ್ವಾನಿಸಿ ಅವರಿಗೆ ಉಣಬಡಿಸಿ ಅವರು ಉಂಡ ತಟ್ಟೆ-ಲೋಟಗಳನ್ನು ತೊಳೆಯುವ ಮುಖೇನ ತಮ್ಮನ್ನು ತಾವು ಅಪವರ್ಣಿಕರಿಸಿಕೊಂಡಂತೆ ಸಮಾನತೆಯ ದಾರಿ ತುಳಿಯುವ ಅಗತ್ಯವಿದೆ. ಹಂಸಲೇಖರ ಈ ವಿಚಾರ ಬಸವ ಪ್ರಜ್ಞೆಯ ವಿಚಾರವೇ ಆಗಿದೆ. ಬಸವಣ್ಣನವರು ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯನ್ನು ಪಾಪ ಪ್ರಜ್ಞೆಯನ್ನು ನೀಗಿಸಿಕೊಂಡದ್ದು ಅಸ್ಪೃಶ್ಯಮೂಲದ ಹೊಸಹುಟ್ಟು ಪಡೆದಂತೆ ತಮ್ಮನ್ನು ತಾವು ಅಪವಣಕರಿಸಿಕೊಂಡದ್ದರಿಂದ, ಯಾವುದೇ ಮೇಲ್ಜಾತಿಯ ಧರ್ಮಗುರುಗಳಿಗೆ ಇದು ಮಾದರಿಯ ನಡೆ ಎಂದರು.
ಜನಪರ ಹೋರಾಟಗಾರ್ತಿ ವಿಮಲಾ ಕೆ.ಎಸ್ ಮಾತನಾಡಿ, ಆಹಾರ ಪದ್ಧತಿ ಎಂಬುದು ಬಹುತ್ವ ಭಾರತದಲ್ಲಿ ಭಿನ್ನರುಚಿಗಳಲ್ಲಿದೆ. ಈ ಕಾರಣದಿಂದಲೇ ʻಊಟ ತನ್ನಿಷ್ಟ: ನೋಟ ಪರರಿಷ್ಟʼ ಎಂಬ ಅನುಭವದ ಜಾನಪದ ಗಾದೆ ಮಾನೆಮಾತಾಗಿದೆ. ಈ ಪರಿಯ ಜಾನಪದ ಪರಿಭಾಷೆಯ ಹಿನ್ನೆಲೆಯಲ್ಲಿ ಬಂದ ಹಂಸಲೇಖ ಅವರು ಪೇಜಾವರರ ದಲಿತರ ಮನೆಯ ಭೇಟಿ ವಾಸ್ತವ ಸತ್ಯವನ್ನು ಪ್ರಶ್ನಿಸಿದ್ದಾರೆ. ಅವರು ತಿನ್ನಕಾಗುತ್ತ? ಆಗಲ್ಲ… ಎಂದು ಪ್ರಶ್ನಿಸಿದ್ದಾರ ಹಿಂದೆ ತಿನ್ನಬೇಕು ಎಂಬ ಅವಧಾರಣೆ ಇಲ್ಲ. ಬದಲಾಗಿ ತಿನ್ನಲಾಗುವುದಿಲ್ಲ ಎಂಬ ವಾಸ್ತವ ಸತ್ಯವಿದೆ. ಅದಕ್ಕೇ ದಲಿತರನ್ನು ನಿಮ್ಮ ಮನೆಗಳಿಗೆ ಆಹ್ವಾನಿಸಿ ಎಂಬ ಪರ್ಯಾಯದ ನಿಜದಾರಿಯ ಮಾತನಾಡಿದ್ದಾರೆ.
ಆದರೆ ಇದನ್ನು ಅರ್ಥಮಾಡಿಕೊಳ್ಳಲಾಗದ ಮತಾಂಧ ಮನಸ್ಸುಗಳು ಆವೇಶದ ಆಕ್ರೋಶದ ಭರದಲ್ಲಿ ಶ್ರೇಷ್ಠತೆಯ ವ್ಯಸನಿಗಳಾಗಿ ಆಡಬಾರದ ಅಸಂವಿಧಾನಿಕ ಪದಗಳನ್ನು ಬಳಸುತ್ತಾ ಹರಿದಾಡುತ್ತಿರುವುದು ಖಂಡನೀಯ. ಬಸವ ಪ್ರಜ್ಞೆಯ ವಿವೇಕದಲ್ಲಿ ಈ ಮಂದಮತಿಗಳು ಆತ್ಮವಿಮರ್ಶೆಯ ಮುಖೇನ ತಮ್ಮ ಒಳಗನ್ನು ಬೆಳಗಿಸಿಕೊಳ್ಳಲಿ. ಸಮಸಮಾಜದ ನಿರ್ಮಾಣಕ್ಕೆ ಪ್ರಜಾಪ್ರಭುತ್ವದ ಉಳಿವಿಗೆ ಬಹುತ್ವ ಭಾರತದ ಬೆಳೆವಣಿಗೆಗೆ ಸಹಕಾರಿಯಾಗಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ ಜಿ. ಕಪ್ಪಣ್ಣ, ರುದ್ರಪ್ಪ ಹನಗವಾಡಿ, ಸಿ.ಕೆ. ಗುಂಡಣ್ಣ, ಡಾ. ಕೆ. ಶರೀಫ ಉಪಸ್ಥಿತರಿದ್ದರು.