ಹುಚ್ಚ ಬಸ್ಯಾ ಇನ್ನಿಲ್ಲ , ಆತನ ಅಂತ್ಯಕ್ರಿಯೆಗೆ ಸೇರಿದ್ದು ಐದು ಸಾವಿರ ಮಂದಿ

ಹೂವಿನ ಹಡಗಲಿ : ಹೂವಿನ ಹಡಗಲಿ ಜನರ ಅಚ್ಚುಮೆಚ್ಚಿನ ಹುಚ್ಚ ಬಸ್ಯಾ ನಿಧನರಾಗಿದ್ದಾರೆ. ಬಸ್ಯಾನ ನಿಧನಕ್ಕೆ ಸಾವಿರಾರು ಜನ ಕಣ್ಣೀರು ಸುರಿಸಿದ್ದಾರೆ. 5 ಸಾವಿರಕ್ಕೂ ಹೆಚ್ಚು ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಈತ ಸ್ಟಾರ್‌ ಅಲ್ಲ, ರಾಜಕಾರಣಿಯೂ ಅಲ್ಲ ನಮ್ಮ ನಿಮ್ಮಂತೆ ಸಾಮಾನ್ಯನು ಅಲ್ಲ, ಆದ್ರೂ ಕೂಡ ಈತನ ಅಂತ್ಯಕ್ರಿಯೆಗೆ ಸಾವಿರಾರು ಜನ ಸೇರಿದದ್ದರು ಅಂದ್ರೆ ಆತನ ಬಗ್ಗೆ ನಮಗೆ ಕೂತುಹಲ ಮೂಡುವುದು ಸಹಜ ಅಲ್ವಾ?

ಹೌದು, ಆತ ನಮ್ಮ ನಿಮ್ಮಂತೆ ಸಾಮಾನ್ಯನಲ್ಲ ಆತ ಮಾನಸಿಕ ಅಸ್ವಸ್ಥ, ಆತನಿಗೆ ಆ ಊರಿನ ಜನತೆ ಪ್ರೀತಿಯಿಂದ ಇಟ್ಟ ಹೆಸರು, ಹುಚ್ಚ ಬಸ್ಯಾ.

ಹುಚ್ಚ ಬಸ್ಯಾ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದೇ ವೇಳೆ ಈತನ ಸಾವಿಗೆ ಇಡೀ ಊರಿಗೆ ಊರೇ ಕಣ್ಣಿರಾಗಿದ್ದು, ಈತನ ಶವವನ್ನು ಟ್ಯಾಕ್ಟರ್‌ನಲ್ಲಿ ಇಟ್ಟು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಮಂದಿ ಸೇರಿ, ಈತನ ಅಂತ್ಯಕ್ರಿಯೆಯನ್ನು ನೇರವೇರಿಸಿದ್ದಾರೆ.

ಬಸ್ಯಾನ ಜನಪ್ರಿಯತೆಗೆ ಕಾರಣವೇನು?: ಅಷ್ಟಕ್ಕೂ ಹಿಂದು ಮುಂದಿಲ್ಲದ ಬಸ್ಯಾಗೆ ಜನರು ಇಷ್ಟು ಪ್ರೀತಿ ತೋರಿಸಲು ಕಾರಣವೇನೆಂದು ಯೋಚಿಸುತ್ತಿದ್ದೀರಾ? ಭಿಕ್ಷುಕ ಬಸ್ಯಾ ಒಬ್ಬ ವ್ಯಕ್ತಿಯಿಂದ ಕೇವಲ 1 ರೂಪಾಯಿಯನ್ನು ಭಿಕ್ಷೆಯಾಗಿ ತೆಗೆದುಕೊಂಡು ಹೆಚ್ಚುವರಿ ಮೊತ್ತವನ್ನು ಹಿಂದಿರುಗಿಸುತ್ತಿದ್ದರು. ಜನರೇ ಬಲವಂತ ಮಾಡಿದರೂ ಆತ ಹೆಚ್ಚು ಹಣ ತೆಗೆದುಕೊಳ್ಳುತ್ತಿರಲಿಲ್ಲ.

ಆ ಕಾರಣಕ್ಕಾಗಿಯೇ ಬಸ್ಯಾನ ಬಗ್ಗೆ ಗೌರವವನ್ನು ಹೊಂದಿದ್ದರು. ಹಾಗಾಗಿ ಬಸ್ಯಾನ ಅಂತ್ಯಕ್ರಿಯೆಯನ್ನು ಊರಿನವರೇ ಸೇರಿಕೊಂಡು ಗೌರವಪೂರ್ವಕವಾಗಿ, ಅದ್ದೂರಿಯಾಗಿಯೇ ನಡೆಸಿಕೊಟ್ಟರು.

ಎಲ್ಲರನ್ನೂ ನಗಿಸುತ್ತಿದ್ದ : ಒಂದು ನಗರದ ಮಾನಸಿಕ ಅಸ್ವಸ್ಥ ಹುಚ್ಚನಂತೆ ಜೀವಿಸಿದ ಮುಗ್ಧ ಜೀವವನ್ನು ಜನ ಹುಚ್ಚೆದ್ದು ಪ್ರೀತಿಸುತ್ತಿದ್ದರು ಎಂಬುದಕ್ಕೆ ಮಲ್ಲಿಗೆ ನಾಡು ಹೂವಿನ ಹಡಗಲಿ ಸಾಕ್ಷಿಯಾಗಿದೆ.

ಹುಚ್ಚ್ ಬಸ್ಯಾ,  ದೇಹದ ಅಸ್ವಸ್ಥತೆ ನಡುವೆಯೂ ಇಡೀ ಹಡಗಲಿ ತುಂಬಾ ಅಡ್ಡಾಡುತ್ತಾ ಇಡೀ ನಗರದ ಜನತೆಯನ್ನು ಅಪ್ಪಾಜಿ ಎಂದು ಕರೆಯುತ್ತಾ ನಗೆಗಡಲಲ್ಲಿ ತೇಲಿಸುತ್ತ ತನ್ನದೇ ಸ್ಟೈಲ್ ನಲ್ಲಿ ನೃತ್ಯ, ಹಾಡು, ಡೈಲಾಗ್ ಗಳ ಮೂಲ ರಂಜಿಸುತ್ತಿದ್ದ.ಹರುಕು ಅಂಗಿ, ದಿನಂಪ್ರತಿ ಕೊರಳಿಗೆ ಹಾರ ಹಾಕಿಕೊಂಡು ಅಂದಿನ ದಿನಕ್ಕೆ ತನಗೆ ಬೇಕಾದ ಹೊಟ್ಟೆಯ ಪಾಡಿಗೆ ಭಿಕ್ಷೆ ಬೇಡಿ ದಿನ ಕಳೆಯುತ್ತಿದ್ದ.

ಈತನ ಬಹು ಇಷ್ಟದ ತಾಣ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಗಡಿಯಾರ ಸರ್ಕಲ್ ಎಲ್ಲೋ ತಂಗಿ ಇನ್ನೆಲ್ಲೋ ಮಲಗಿ ಮತ್ತೆ ಮುಂಜಾನೆ ಹೂವಿನ ಹಾರ ಪರಿಕರಗಳನ್ನು ಹಾಕಿಕೊಂಡು ನಗರದ ಜನತೆಗೆ ನಗಿಸಲು ಅಣಿಯಾಗುತ್ತಿದ್ದ.

ಹೂವಿನಲಿಯ ಸರ್ವ ನಾಗರಿಕರೂ ಅವನ ಅಂತ್ಯಸಂಸ್ಕಾರಕ್ಕೆ ಬಂದ ಪರಿ ನೋಡಿದರೆ, ಬಸ್ಯಾನ ಹೃದಯ ಸಿರಿತನ ಎಂತದ್ದು ಎಂಬುದು ಗೊತ್ತಾಗುತ್ತೆ ಇಡೀ ರಸ್ತೆ ಇಕ್ಕಲಗಳೆಲ್ಲಾ ಭರ್ತಿ, ಸರಿಸುಮಾರು ಐದು ಸಾವಿರ ಜನ ಬಸ್ಯಾನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದರು…..
ಪ್ರತಿಯೊಬ್ಬರ ಕೈಯಲ್ಲೂ ಹೂವಿನ ಹಾರ, ದುಡ್ಡು ನನಗೆ ನನ್ನ ಮುಂಬರುವ ಮಕ್ಕಳಿಗೆ ಎಂದು ಬದುಕುವ ಜನರ ಮಧ್ಯೆ. ಒಬ್ಬ ಹುಚ್ಚಗಳಿಸಿದ ಈ ಪ್ರೀತಿ ದುಡ್ಡುಗಿಂತ ದೊಡ್ಡದು ಅನ್ನಿಸದೆ ಇರದು ಎಂದು ಹೇಳುತ್ತಾರೆ ಬಸ್ಯಾನ ಅಭಿಮಾನಿ ನಾಗ್ ಉಲವತ್ತಿಯವರು.

 

 

Donate Janashakthi Media

Leave a Reply

Your email address will not be published. Required fields are marked *