ನಕಲಿ ಅಭಿಯಾನ: ಲಸಿಕೆ ಪಡೆಯದಿದ್ದರೂ ಮೊಬೈಲ್‌ಗೆ ಸಂದೇಶ, 3 ಸಾವಿರ ಡೋಸ್ ವಶ

ಉನ್ನಾವೋ:  ಉತ್ತರ ಪ್ರದೇಶದಲ್ಲಿ ಕೋವಿಡ್-19 ರೋಗನಿರೋಧಕ ಶಕ್ತಿ ಹೆಚ್ಚುತ್ತಿದ್ದರೂ ನಕಲಿ ಲಸಿಕಾ ಅಭಿಯಾನಾಗಳ ಬಗ್ಗೆ ದೂರುಗಳು ಕೇಳಿಬಂದಿವೆ. ನಕಲಿ ಅಭಿಯಾನದ ಬೃಹತ್ ಜಾಲ ಪತ್ತೆಯಾಗಿದ್ದು, ಸುಮಾರು 3 ಸಾವಿರ ಲಸಿಕೆ ಡೋಸ್‌ಗಳು ಖಾಸಗಿ ಉದ್ಯೋಗಿಯ ಮನೆಯಲ್ಲಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.

ಜನರು ಕೋವಿಡ್‌ ಲಸಿಕೆಗಳನ್ನು ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಕ್ಕೆ ಭೇಟಿ ನೀಡದಿದ್ದರೂ, ಲಸಿಕೆ ಹಾಕಲಾಗಿದೆ ಎಂಬ ಸಂದೇಶಗಳು ಮೊಬೈಲ್‍ಗೆ ಬರುತ್ತಿರುವ ಬಗ್ಗೆ ನೂರಾರು ಮಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದಾಗ ಹಲವಾರು ಮಂದಿ ಲಸಿಕೆ ನೀಡಲಾಗಿದೆ ಎಂಬ ಸುಳ್ಳು ಸಂದೇಶ ಬಂದಿರುವುದಾಗಿ ಹೇಳಿದ್ದಾರೆ. ದೇಶದಲ್ಲಿ ಈ ಮೊದಲು ಮಹಾರಾಷ್ಟ್ರದಲ್ಲಿ ಈ ರೀತಿಯ ನಕಲಿ ಲಸಿಕಾ ಅಭಿಯಾನದ ಜಾಲ ಬೆಳಕಿಗೆ ಬಂದಿತ್ತು. ಈಗ ಉತ್ತರ ಪ್ರದೇಶದಲ್ಲಿ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ.

ಉನ್ನಾವೋ ಜಿಲ್ಲೆಯ ಮಿಯಾಗಂಜ್‌ನಲ್ಲಿ ಬೃಹತ್ ಪ್ರಮಾಣದ ಕೋವಿಡ್‌ ನಿವಾರಕ ಲಸಿಕೆ ಡೋಸ್‌ಗಳು ಸಂಶಯಾಸ್ಪದವಾದ ರೀತಿಯಲ್ಲಿ ಪತ್ತೆಯಾಗಿವೆ. ಇಷ್ಟು ಬೃಹತ್ ಪ್ರಮಾಣದ ಲಸಿಕೆಯನ್ನು ನಿರ್ಲಕ್ಷ್ಯದಿಂದ ಸಂಗ್ರಹಿಸಲಾಗಿದೆ. ಮಿಯಾಗಂಜ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೀಡಲಾದ 3000 ಲಸಿಕೆಗಳು ಅಲ್ಲಿನ ಖಾಸಗಿ ಉದ್ಯೋಗಿಯ ಮನೆಯಲ್ಲಿ ಪತ್ತೆಯಾಗಿದೆ.

ಸಮುದಾಯ ಆರೋಗ್ಯ ಕೇಂದ್ರದ ದಾಸ್ತಾನು ಮಳಿಗೆ ಸಹಾಯಕಿ ರಾಣಿ ಎಂಬವರ ಮನೆಯಲ್ಲಿ ಲಸಿಕೆಗಳು ಪತ್ತೆಯಾಗಿವೆ. ರಾಣಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆಸ್ಪತ್ರೆಯ ಅಧಿಕ್ಷಕ ಅಫ್ತಾಬ್ ಅಹಮದ್ ಲಸಿಕೆಗಳು ಇರುವ ಬಾಕ್ಸ್‌ಗಳನ್ನು ನಿಮ್ಮ ಮನೆಯಲ್ಲಿಟ್ಟಿರು ಎಂದು ಹೇಳಿದ್ದರು. ಅಧಿಕಾರಿಯ ಆದೇಶ ಪಾಲನೆ ಮಾಡಬೇಕು ಎಂಬ ಕಾರಣಕ್ಕೆ ನಾನು ಅವುಗಳನ್ನು ತಂದು ಮನೆಯಲ್ಲಿ ಇಟ್ಟುಕೊಂಡಿದ್ದೇನೆ. ಅವುಗಳನ್ನು ಏತಕ್ಕಾಗಿ ಬಳಸುತ್ತಾರೆ ಎಂಬ ಮಾಹಿತಿ ನನಗಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

ತನಿಖಾಧಿಕಾರಿ ಸಂಗೀತಾ ಪಟೇಲ್  ಆಸ್ಪತ್ರೆಯಿಂದ ಕೈಗೊಳ್ಳುವ ಲಸಿಕೆ ಅಭಿಯಾನದ ಬಗ್ಗೆ ನಕಲಿ ದಾಖಲೆಗಳನ್ನು ಸೃಷ್ಠಿಸುವಂತೆ ಅಹ್ಮದ್ ತನ್ನ ಮೇಲೆ ಒತ್ತಡ ಹೇರುತ್ತಿದ್ದನಲ್ಲದೆ, ಆಕ್ಷೇಪಿಸಿದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ರಾಣಿ ಆರೋಪಿಸಿದ್ದಾರೆ.

ಹಿರಿಯ ಅಧಿಕ್ಷಕ ಸ್ಥಳದಿಂದ ಪರಾರಿಯಾಗಿದ್ದು, ಅವರ ಎರಡೂ ಮೊಬೈಲ್‌ಗಳು ಸಂಪರ್ಕ ಕಡಿತಗೊಂಡಿವೆ. ಫಲಾನುಭವಿಗೆ ಎರಡನೇ ಡೋಸ್ ನೀಡದಿದ್ದರೂ ಲಸಿಕೆ ಸಿಕ್ಕಿದೆ ಎಂಬ ಸಂದೇಶ ಬಂದ ನಂತರ ನಕಲಿ ಲಸಿಕೆ ದಂಧೆ ಬೆಳಕಿಗೆ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬಿಜೆಪಿ ಶಾಸಕ ದಿವಾಕರ್ ಅವರು, ಇದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡವಿದೆ. ಮುಖ್ಯಮಂತ್ರಿ ಗಂಭೀರ ಸ್ವರೂಪದ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *