ಬಿಟ್‍ಕಾಯಿನ್ ಹಗರಣ ಪಾರದರ್ಶಕವಾಗಿ ತನಿಖೆಯಾದರೆ ಸಿಎಂ ಬದಲಾಗಬೇಕಾಗುತ್ತೆ – ಪ್ರಿಯಾಂಕ್ ಖರ್ಗೆ

ಕಲಬುರ್ಗಿ : ಬಿಟ್‍ಕಾಯಿನ್ ಹಗರಣ ಪಾರದರ್ಶಕವಾಗಿ ತನಿಖೆಯಾದರೆ ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ಮೂರನೆ ಮುಖ್ಯಮಂತ್ರಿಯನ್ನು ನೋಡಬೇಕಾಗುತ್ತದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್‍ಕಾಯಿನ್ ಹಗರಣದಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದಾರೆ ಎಂದು ನಾನು ಹೇಳುವುದಿಲ್ಲ.

ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಯಾರೆಲ್ಲ ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದು ಗೊತ್ತಿದೆ. ನಿಷ್ಪಕ್ಷಪಾತ ತನಿಖೆಯಾದರೆ ಮುಖ್ಯಮಂತ್ರಿ ಸ್ಥಾನವನ್ನು ಹಗರಣ ಬಲಿ ತೆಗೆದುಕೊಳ್ಳುತ್ತದೆ ಈ ಬಾರಿಯೂ ಕೂಡ ಬಿಜೆಪಿ ಸರ್ಕಾರದಲ್ಲಿ ಮೂರು ಜನ ಸಿಎಂ ಆಗುತ್ತಾರೆ ಎಂದರು.

ಹಗರಣದಲ್ಲಿ ಬೇರೆ ಪಕ್ಷದವರ ಕೈವಾಡವಿದ್ದರೆ ಅದನ್ನೂ ಬಹಿರಂಗಪಡಿಸಲಿ. ಇದು ಅಂತಾರಾಷ್ಟ್ರೀಯ ಮಟ್ಟದ ಹಗರಣ. ಅದನ್ನು ಉನ್ನತ ಮಟ್ಟದ ತನಿಖೆಗೆ ವಹಿಸಲು ವಿಳಂಬ ಮಾಡುತ್ತಿರುವುದೇಕೆ ? ಬಿಟ್‍ಕಾಯಿನ್ ಒಂದೇ ಅಲ್ಲ ಕ್ರಿಪೆಪೊ ಕರೆನ್ಸಿಯಲ್ಲೂ ಬಿಜೆಪಿಯವರು ಲಂಚ ಪಡೆದಿದ್ದಾರೆ.

ಬಿಟ್‍ಕಾಯಿನ್‍ನಲ್ಲಿ 200-300 ಕೋಟಿ ವಹಿವಾಟು ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕಿಂತಲೂ ದೊಡ್ಡ ಪ್ರಮಾಣದ ಹಗರಣವಾಗಿರುವ ಮಾಹಿತಿ ಇದೆ. ಬಿಜೆಪಿಯವರು ಡ್ರಗ್ಸ್ ಕೇಸ್ ಮುಚ್ಚಿಹಾಕಲು ಲಂಚ ಪಡೆದಿದ್ದಾರೆ. ಬಿಟ್‍ಕಾಯಿನ್ ಹಗರಣದಲ್ಲಿ ಸಚಿವರೂ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಭಾಗಿಯಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದರು.

ಕಲಬುರಗಿ ಜಿಲ್ಲೆಯಲ್ಲಿ ರಕ್ಷಕರೆ ಭಕ್ಷಕರಾಗಿದ್ದಾರೆ. ಪೊಲೀಸರು ಮತ್ತು ಕೊಲೆಗಾರರ ನಡುವೆ ಮ್ಯಾಚ್‍ಫಿಕ್ಸಿಂಗ್ ನಡೆದಿದೆ. ಲಂಚ ಕೊಡದೆ ವರ್ಗಾವಣೆಯಾಗುವುದಿಲ್ಲ. ಅದನ್ನು ವಸೂಲಿ ಮಾಡಲು ಪೊಲೀಸರು ಹಗಲು ದರೋಡೆಗಿಳಿದಿದ್ದಾರೆ. ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸಾಗಾಟ ಹೆಚ್ಚಾಗಿದೆ. ಪಡಿತರಕ್ಕಿಂತ ಸುಲಭವಾಗಿ ಗಾಂಜಾ ಸಿಗುತ್ತಿದೆ, ಕೊಲೆ ಆರೋಪಿಗಳು ನಿರ್ಭಯವಾಗಿ ತಿರುಗಾಡುತ್ತಿದ್ದಾರೆ, ಬಿಜೆಪಿ ಸೇರಿದರೆ ರೌಡಿಶೀಟರ್‍ನಲ್ಲಿದ್ದ ಹೆಸರುಗಳೇ ಮಾಯವಾಗುತ್ತಿದೆ. ಬಾರ್‍ಗಳಿಂದ 5000 ರೂ. ಹಫ್ತ ವಸೂಲಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

Donate Janashakthi Media

Leave a Reply

Your email address will not be published. Required fields are marked *