ನಟ ಪುನೀತ್ ರಾಜ​​ಕುಮಾರ್​ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ

ಚಿತ್ರದುರ್ಗ: ಮುರುಘಾಮಠದಿಂದ ನೀಡುವ 2021ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ನಟ ಪುನೀತ್ ರಾಜ್‍ಕುಮಾರ್ ಅವರಿಗೆ ನೀಡುವುದಾಗಿ ಡಾ.ಶಿವಮೂರ್ತಿ ಮುರುಘಾ ಶರಣರು ಘೋಷಿಸಿದ್ದಾರೆ.

ನಟ ಪುನೀತ್​ ರಾಜ್​ಕುಮಾರ್​ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಷ್ಟಿಷ್ಟಲ್ಲ. ಚಿಕ್ಕ ವಯಸ್ಸಿನಿಂದಲೇ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಅವರು ನಂತರ ಹೀರೋ ಆಗಿ ಮೆರೆದರು. ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದರು. ಈಗ ಅವರಿಗೆ ಚಿತ್ರದುರ್ಗದ ಮುರುಘಾಮಠ ಕೊಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಮರಣೋತ್ತರವಾಗಿ ನೀಡಲು ನಿರ್ಧರಿಸಲಾಗಿದೆ.

ಇದನ್ನು ಓದಿ: ನಾಲ್ವರು ಅಂಧರ ಬಾಳಿಗೆ ಬೆಳಕಾದ ಪುನೀತ್‌ ರಾಜಕುಮಾರ್‌ ನೇತ್ರಗಳು

ಬಸವಶ್ರೀ ಪ್ರಶಸ್ತಿ ರೂ.5 ಲಕ್ಷ ನಗದನ್ನು ಒಳಗೊಂಡಿದೆ. ಮುಂಬರುವ ಬಸವ ಜಯಂತಿ ದಿನದಂದು ಬಸವಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಮುರುಘಾಮಠದ ಅನುಭವ ಮಂಟಪದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪುನೀತ್ ಪರವಾಗಿ ಪತ್ನಿ ಅಶ್ವಿನಿ ಅವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು. ನಟ ಶಿವರಾಜಕುಮಾರ್ ಅವರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

ಅಲ್ಲದೇ ನವೆಂಬರ್ 10ರಂದು ಪುನೀತ್ ಮನೆಗೆ ಮುರುಘಾ ಶ್ರೀಗಳು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಪುನೀತ್ ಕುಟುಂಬದವರೊಂದಿಗೆ ಕೋಟೆನಾಡಿನ ಅನೇಕ ಮಠಾಧೀಶರು, ಪುನೀತ್ ಒಡನಾಡಿಗಳು ಭಾಗಿಯಾಗುವರೆಂದು ಶರಣರು ತಿಳಿಸಿದ್ದಾರೆ.

ನೇತ್ರದಾನ ಮಾಡಲು ಸಾಲು ಸಾಲು ಸರದಿ

ನಟ ಪುನೀತ್ ಅಕ್ಟೋಬರ್ 29ರಂದು ಅಕಾಲಿಕವಾಗಿ ನಿಧನರಾದರು. ಬದುಕಿದ್ದಾಗ ರಾಜನಂತೆ ಅನೇಕರಿಗೆ ಸಹಾಯ ಮಾಡಿದ್ದ ಪುನೀತ್ ರಾಜ್ಕುಮಾರ್ ಸಾವಿನ ನಂತರವೂ ನಾಲ್ಕು ಜನರಿಗೆ ದೃಷ್ಟಿ ನೀಡಿದ್ದಾರೆ. ಈ ಘಟನೆ ಬಳಿಕ ನೇತ್ರದಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಮುಂದಾಗುತ್ತಿರುವುದು ತಿಳಿದು ಬಂದಿದೆ.

ಇದನ್ನು ಓದಿ: ಅಪ್ಪು ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತ ತಮಿಳು ನಟ ವಿಶಾಲ್

ಪುನೀತ್ ನೇತ್ರದಾನದ ಬಳಿಕ ಪುನೀತ್‌ರಿಂದ ಪ್ರೇರಣೆ ಪಡೆದು ಸಾಕಷ್ಟು ಜನರು ನೇತ್ರದಾನಕ್ಕೆ ಬರುತ್ತಿದ್ದಾರೆ. ಇಂದು ಒಂದೇ ದಿನ 1000ಕ್ಕೂ ಹೆಚ್ಚು ಜನರಿಂದ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳಲಾಗಿದೆ. ಈ ಹಿಂದೆ ಇಷ್ಟು ಸಂಖ್ಯೆಯಲ್ಲಿ ಜನರು ಮುಂದೆ ಬರುತ್ತಿರಲಿಲ್ಲ. ಇದೀಗಾ ಎರಡು-ಮೂರು ದಿನದಿಂದ ಕಣ್ಣು ದಾನ ಮಾಡುವವರ ಸಂಖ್ಯೆ ಏರಿಕೆಯಾಗಿದೆ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಭುಜಂಗ ಶೆಟ್ಟಿ ತಿಳಿಸಿದ್ದಾರೆ.

ದಾನ ಮಾಡಲಾದ 2 ಕಣ್ಣುಗಳು ತುಂಬ ಆರೋಗ್ಯವಾಗಿದ್ದರೆ ಕಾರ್ನಿಯಾವನ್ನು ನಾಲ್ಕು ಭಾಗ ಮಾಡಬಹುದು. ಕಾರ್ನಿಯಾವನ್ನು ಒಂದು ಗ್ಲಾಸ್ ಎಂದು ಊಹಿಸಿದರೆ ಅದರಲ್ಲಿ ಮುಂಭಾಗ ಮತ್ತು ಹಿಂಭಾಗ ಇರುತ್ತದೆ. ಮುಂಭಾಗದ ಕಾರ್ನಿಯಾ ತೊಂದರೆ ಇರುವವರಿಗೆ ದಾನ ಪಡೆದ ಕಣ್ಣಿನ ಮುಂಭಾಗವನ್ನು ಅಳವಡಿಸಲಾಗುತ್ತೆ. ಹಿಂಭಾಗದ ತೊಂದರೆ ಇರುವವರಿಗೆ ಹಿಂಭಾಗದ ಕಾರ್ನಿಯಾವನ್ನು ಅಳವಡಿಸಲಾಗುತ್ತೆ. ಈ ರೀತಿ ಒಬ್ಬ ವ್ಯಕ್ತಿಯ ಎರಡು ಕಣ್ಣುಗಳು ನಾಲ್ವರಿಗೆ ಬಳಸಲಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *