ಬೆಂಗಳೂರು: ರಾಜ್ಯ ಸರ್ಕಾರವು ಬಿಬಿಎಂಪಿ ವ್ಯಾಪ್ತಿಯಲ್ಲಿ 8 ಇಲಾಖೆಗಳ 58 ಸರ್ಕಾರಿ ಸೇವೆಯನ್ನು ಮನೆಬಾಗಿಲಿಗೆ ಒದಗಿಸುವ ನೆಪದಲ್ಲಿ ಸೇವೆ ಪಡೆಯುವವರಿಂದ ಪ್ರತಿ ಸೇವೆಗೆ ರೂ.115 ಸೇವಾ ಶುಲ್ಕದೊಂದಿಗೆ ಇಲಾಖಾ ಶುಲ್ಕವನ್ನು ಸಂಗ್ರಹಿಸುವ ಮೂಲಕ ಸರ್ಕಾರಿ ಸೇವೆಗಳಿಗೆ ಬಳಕೆದಾರರ ಶುಲ್ಕ ವಿಧಿಸುವ ನಯವಂಚಕ ಕ್ರಮಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್. ಉಮೇಶ್ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ ಅವರು ಮನೆ ಬಾಗಿಲಿಗೆ ಸೇವೆ ಒದಗಿಸಲು ನೇಮಕ ಮಾಡಲಾಗುವ ಜನ ಸೇವಕರು ಯಾರು? ಅವರನ್ನು ಹೇಗೆ ನೇಮಿಸಲಾಗುತ್ತದೆ? ಎಂಬುದನ್ನು ರಾಜ್ಯ ಬಿಜೆಪಿ ಸರ್ಕಾರವು ಬಹಿರಂಗಪಡಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ. ಜನಸೇವಕರ ಹೆಸರಿನಲ್ಲಿ ಆರ್.ಎಸ್.ಎಸ್. ಕಾರ್ಯಕರ್ತರನ್ನು ನೇಮಿಸಿ ಅವರ ಮೂಲಕ ರಾಜ್ಯ ಸರ್ಕಾರಿ ಸೇವೆಗಳನ್ನು ಒದಗಿಸಿ ಅದರಿಂದಲೂ ಶುಲ್ಕ ಸಂಗ್ರಹಿಸಿ ಇದುವರೆಗೆ ಉಚಿತವಾಗಿ ಲಭ್ಯವಿದ್ದ ಸೇವೆಗಳಿಗೆ ಶುಲ್ಕ ವಿಧಿಸುವ ದೂರ್ತ ಕ್ರಮವನ್ನು ರಾಜ್ಯ ಬಿಜೆಪಿ ಸರ್ಕಾರವು ಜಾರಿಗೊಳಿಸಲು ಮುಂದಾಗಿದೆ ಎಂದು ಖಂಡಿಸಿದ್ದಾರೆ.
ಇದು ಒಂದೆಡೆ ನವ ಉದಾರಿವಾದಿ ಆರ್ಥಿಕ ನೀತಿಗಳ ಅನುಸಾರವಾಗಿ ಉಚಿತ ಸೇವೆಗಳನ್ನೂ ಪಾವತಿಸಿ ಸೇವೆ ಪಡೆಯಿರಿ ಎಂದಾಗಿಸುವ ಕ್ರಮದೊಂದಿಗೆ ಇನ್ನೊಂದೆಡೆ ಸರ್ಕಾರಿ ಸೇವೆಗಳನ್ನು ಆರ್.ಎಸ್.ಎಸ್. ಕಾರ್ಯಕರ್ತರಿಗೆ ಹೊರಗುತ್ತಿಗೆ ನೀಡಿ, ಆ ಮೂಲಕ ತಮ್ಮ ಹಿಂದುತ್ವದ ಸಿದ್ಧಾಂತವನ್ನು ಸರ್ಕಾರಿ ಸೇವೆ ಮೂಲಕ ಪ್ರಚುರಪಡಿಸುವ ಬಿಜೆಪಿ ಸರ್ಕಾರದ ದುಷ್ಟ ಯೋಜನೆಯಾಗಿದೆ.
ಸರ್ಕಾರ ಇಲಾಖೆಗಳಲ್ಲಿ ಸಮರ್ಥ ಮತ್ತು ಸಮರ್ಪಕ ಸೇವೆ ಒದಗಿಸುವ ಕಾರ್ಯವನ್ನು ಖಾತ್ರಿಪಡಿಸಬೇಕಾದ ಮುಖ್ಯಮಂತ್ರಿಗಳು ಅದನ್ನು ಖಾತ್ರಿಪಡಿಸದೆ ಭ್ರಷ್ಟಾಚಾರಕ್ಕೆ ಅಲ್ಲಿ ಅವಕಾಶವಿದೆ ಎಂಬ ನೆಪ ಹೇಳಿ ಸದರಿ “ಮನೆಬಾಗಿಲಿಗೆ ಜನ ಸೇವಕ” ಎಂಬ ಯೋಜನೆಯನ್ನು ಜಾರಿಗೊಳಿಸುತ್ತಿರುವುದು ಮುಖ್ಯಮಂತ್ರಿಗಳು ಮತ್ತು ರಾಜ್ಯ ಬಿಜೆಪಿ ಸರ್ಕಾರ ತಮ್ಮ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಪ್ರವೃತ್ತಿಯನ್ನು ತೋರುತ್ತದೆ ಎಂದು ಸಿಪಿಐ(ಎಂ) ಟೀಕಿಸಿದೆ.