- ಮಣ್ಣಲ್ಲಿ ಮಣ್ಣಾಗಿ ಹೋದ ಪುನೀತ್ ರಾಜ್ಕುಮಾರ್
- ಪುನೀತ್ ಅಂತ್ಯಕ್ರಿಯೆಯ ವಿಧಿ-ವಿಧಾನ ನೆರವೇರಿಸಿದ ವಿನಯ್ ರಾಜ್ಕುಮಾರ್
- ಕಣ್ಣೀರ ಕಡಲಲ್ಲಿ ಅಪ್ಪುವನ್ನು ಬೀಳ್ಕೊಟ್ಟ ಅಭಿಮಾನಿಗಳು
- ಅಪ್ಪ ಅಮ್ಮನ ಪಕ್ಕದಲ್ಲಿ ಪುನೀತ್
ಬೆಂಗಳೂರು : ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ಅಂತ್ಯಕ್ರಿಯೆ ಈಡಿಗ ಸಂಪ್ರದಾಯದಂತೆ ಇಂದು ಬೆಳಗ್ಗೆ 7:40 ನಡೆಯಿತು. ನಟ ಪುನೀತ್ ಪತ್ನಿ ಅಶ್ವಿನಿ, ಪುತ್ರಿಯರಾದ ಧೃತಿ, ವಂದನಾ, ಸಹೋದರರಾದ ರಾಘವೇಂದ್ರ ರಾಜ್ಕುಮಾರ್, ಶಿವಣ್ಣ, ಡಾ.ರಾಜ್ಕುಮಾರ್ ಕುಟುಂಬಸ್ಥರು ಅಂತಿನ ವಿಧಾನ ಕ್ರಿಯೆ ನಡೆಸುವ ಮೂಲಕ ಪವರ್ ಸ್ಟಾರ್ ಪುನೀತ್ ಮಣ್ಣಲ್ಲಿ ಮಣ್ಣಾಗಿದ್ದಾರೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಮೂರು ಬಾರಿ ಕುಶಾಲು ತೋಪು ಸಿಡಿಸಿ ಅಪ್ಪುಗೆ ಗೌರವ ಸಲ್ಲಿಸಲಾಯಿತು. ವಿನಯ್ ರಾಜ್ ಕುಮಾರ್ ಅವರು ಮೂರು ಸುತ್ತು ಸಮಾಧಿ ಸುತ್ತಿ ಅಂತಿಮ ವಿಧಾನಗಳನ್ನು ನೆರವೇರಿಸಿದರು. ನಂತರ ರಥದಲ್ಲಿ ಪುನೀತ್ ಶವವವನ್ನು ಮಲಗಿಸಿ ಪೂಜೆ ಸಲ್ಲಿಸಲಾಯಿತು. ಇದಾದ ಬಳಿಕ ಮೃತದೇಹವನ್ನು ಗುಂಡಿಗೆ ಇಳಿಸಿ ಅಲ್ಲಿ ಕೆಲವೊಂದು ಈಡಿಗ ಸಂಪ್ರದಾಯದಂತೆ ನಡೆದ ನಂತರ ಅಪ್ಪುವನ್ನು ಮಣ್ಣಲ್ಲಿ ಮಣ್ಣು ಮಾಡಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು. ಕಣ್ಣೀರ ಕಡಲಲ್ಲಿ ಅಪ್ಪು ಅವರನ್ನು ಕುಟುಂಬಸ್ಥರು, ಚಿತ್ರರಂಗ ಬೀಳ್ಕೊಟ್ಟಿದೆ.
ಅಪ್ಪ-ಅಮ್ಮನ ಪಕ್ಕ ಅಪ್ಪು ಅಂತ್ಯಕ್ರಿಯೆ
ಅಪ್ಪನನ್ನು ಕಳೆದುಕೊಂಡ ಧೃತಿ, ವಂದಿತಾ ಅಮ್ಮನ ಹೆಗಲ ಮೇಲೆ ಮಲಗಿ ಕೈಹಿಡಿದುಕೊಂಡು ಅಳುತ್ತಲೇ ಅಮ್ಮನನ್ನು ಸಮಾಧಾನ ಮಾಡುವ ದೃಶ್ಯ ಎಲ್ಲರಿಗೂ ನೋವುಂಟು ಮಾಡಿದೆ. ಅಶ್ವಿನಿ ಕಳೆದ ಎರಡು ದಿನಗಳಿಂದ ಒಂದೇ ಸಮನೆ ಅಳುತ್ತಿದ್ದಾರೆ. ಅಪ್ಪ ಡಾ. ರಾಜ್ಕುಮಾರ್, ಅಮ್ಮ ಪಾರ್ವತಮ್ಮ ರಾಜ್ಕುಮಾರ್ ಪಕ್ಕದಲ್ಲಿಯೇ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆಯಾಗಿದೆ. ಅದರಲ್ಲೂ ಅಮ್ಮನ ಪಕ್ಕದಲ್ಲಿಯೇ ಅಪ್ಪು ಅಂತ್ಯಕ್ರಿಯೆ ನೆರವೇರಿದೆ.