ದಲಿತರಿಗೆ ಕ್ಷೌರ ನಿರಾಕರಣೆ : ಪಾರ್ಲರ್ ಮುಂಭಾಗ ಪ್ರತಿಭಟನೆ

ಮಂಡ್ಯ : ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ ಅಂಗಡಿ ಮಾಲಕನಿಗೆ ಸ್ಥಳೀಯ ದಲಿತ ಮುಖಂಡರು ತರಾಟೆಗೆ ತೆಗೆದುಕೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ಗುರುವಾರ ನಡೆದಿದೆ. ಈ ಘಟನೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ದಲಿತ ಮುಖಂಡ ಹಾಗೂ ಸಮಾಜ ಪರಿವರ್ತನೆ ಸಂಘಟನೆಯ ಚಲುವರಾಜು ಎಂಬುವರು ಸ್ಥಳಕ್ಕೆ ತೆರಳಿ ‘ಮೆನ್ಸ್ ಬ್ಯೂಟಿ ಪಾರ್ಲರ್’ ಮಾಲಕ ಕುಮಾರ್ ಎಂಬುವರರನ್ನು ಯಾಕೆ ದಲಿತರಿಗೆ ಕ್ಷೌರ ಮಾಡದೆ ನಿರಾಕರಿಸಿತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಮೊದಲಿನಿಂದಲೂ ಮಾಡುತ್ತಿಲ್ಲ. ಈಗಲೂ ಮಾಡುವುದಿಲ್ಲ. ಇದನ್ನು ಗ್ರಾಮದ ಯಜಮಾನರು ಒಪ್ಪುವುದಿಲ್ಲ. ಹಾಗಾಗಿ ನಾನು ದಲಿತರಿಗೆ ಕ್ಷೌರ ಮಾಡುತ್ತಿಲ್ಲವೆಂದು ಅಂಗಡಿ ಮಾಲಕ ಕುಮಾರ್ ಚಲುವರಾಜು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾನೆ.

ಇದನ್ನೂ ಓದಿ : ದಲಿತ ಯುವಕನ ಕೈ ಕಟ್ಟಿ ಮೆರವಣಿಗೆ

ಇದನ್ನು ಖಂಡಿಸಿ ಚಲುವರಾಜು ಹಾಗೂ ಇತರ ದಲಿತ ಮುಖಂಡರು ಪಾರ್ಲರ್ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಜೋರಾಗುತ್ತಿದ್ದಂತೆ ವಿಷಯ ತಿಳಿದ ಪೊಲೀಸರು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಗ್ರಾಮದ ಮುಖಂಡರು ಮತ್ತು ದಲಿತ ಮುಖಂಡರು ಸಮ್ಮುಖದಲ್ಲಿ ಮಾತುಕತೆ ನಡೆದು ಇನ್ನು ಮುಂದೆ ಈ ರೀತಿ ಆಗದಂತೆ ಗ್ರಾಮಸ್ಥರು ಒಪ್ಪಿಕೊಂಡಿದ್ದು, ನಂತರ, ದಲಿತರನ್ನು ಕರೆದು ಕ್ಷೌರ ಮಾಡಿಸಲಾಯಿತು.

ಈ ಘಟನೆಯಿಂದ ಆಕ್ರೋಶಗೊಂಡಿರುವ ಸಾರ್ವಜನಿಕರು ತಾಲ್ಲೂಕಿನ ಬಹಳಷ್ಟು ಹಳ್ಳಿಗಳಲ್ಲಿ ಇಂತಹ ತಾರತಮ್ಯವಿದೆ. ಶಾಸಕ ಸಿ.ಎಸ್.ಪುಟ್ಟರಾಜು ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮತ್ತೆ ಪ್ರಕರಣ ಮರುಕಳಿಸದಂತೆ ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ. ಕಳೆದ ವಾರವಷ್ಟೆ ಮಳವಳ್ಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಹಸು ಕದ್ದನೆಂಬ ಸುಳ್ಳು ಆರೋಪ ಹೊರಿಸಿ ದಲಿತ ವ್ಯಕ್ತಿಯ ಕೈಗೆ ಹಗ್ಗ ಕಟ್ಟಿ ಮೆರವಣಿಗೆ ಮಾಡಲಾಗಿತ್ತು. ಬಹಳಷ್ಟು ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ. ಮಂಡ್ಯದ ಜಿಲ್ಲಾಡಳಿತ ಅಸ್ಪೃಶ್ಯತೆ ಬಗ್ಗೆ ಹಳ್ಳಿ ಹಳ್ಳಿಗೆ ಜಾಗೃತಿ ಮೂಡಿಸಿ, ದಲಿತರನ್ನು ಗೌರವಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ‌.

Donate Janashakthi Media

Leave a Reply

Your email address will not be published. Required fields are marked *