ಚಿಕ್ಕೋಡಿ: ಪತ್ನಿ ಸಾವಿನಿಂದ ಮನನೊಂದಿದ್ದ ವ್ಯಕ್ತಿಯೊಬ್ಬ ತನ್ನ ನಾಲ್ವರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ನಡೆದಿದೆ.
ಬೋರಗಲ್ ಗ್ರಾಮದ ಗೋಪಾಲ ಹಾದಿಮನಿ (46) ಹಾಗೂ ಅವರ ಮಕ್ಕಳಾದ ಸೌಮ್ಯಾ ಹಾದಿಮನಿ (19), ಶ್ವೇತಾ ಹಾದಿಮನಿ (16), ಸಾಕ್ಷಿ ಹಾದಿಮನಿ (11), ಸೃಜನಾ ಹಾದಿಮನಿ (8) ಆತ್ಮಹತ್ಯೆಗೆ ಶರಣಾದವರು. ಮೃತ ವ್ಯಕ್ತಿ ಗೋಪಾಲ್ ಹಾದಿಮನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು ಎಂದು ಹೇಳಲಾಗಿದೆ. ಇಬ್ಬರು ಮಕ್ಕಳು ಸಂಕೇಶ್ವರ ಪಟ್ಟಣದಲ್ಲಿರುವ ಕಾಲೇಜಿಗೆ ಹೋಗುತ್ತಿದ್ದರು. ಇನ್ನಿಬ್ಬರು ಗ್ರಾಮದಲ್ಲೇ ಶಾಲೆಗೆ ಹೋಗುತ್ತಿದ್ದರು ಎನ್ನಲಾಗಿದೆ.
ಜುಲೈ 6 ರಂದು ಗೋಪಾಲ್ ಅವರ ಪತ್ನಿ ಜಯಾ ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಮೃತಪಟ್ಟಿದ್ದರು. ಜಯಾಳ ಸಾವು ಪತಿ ಗೋಪಾಲ್ ಮತ್ತು ಮಕ್ಕಳನ್ನ ತೀವ್ರವಾಗಿ ಕಾಡಿತ್ತು. ಜೀವನದಲ್ಲಿ ಜಿಗುಪ್ಸೆಗೊಂಡ ಗೋಪಾಲ್ ಸಾಯುವ ನಿರ್ಧಾರಕ್ಕೆ ಬಂದು ತನ್ನ ನಾಲ್ವರು ಮಕ್ಕಳೊಂದಿಗೆ ವಿಷ ಸೇವಿಸಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನೀರಿನಲ್ಲಿ ವಿಷ ಬೆರಸಿಕೊಂಡು ಸೇವಿಸಿದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿಯೇ ವಿಷ ಕುಡಿದಿರುವುದೆಂದು ತಿಳಿದುಬಂದಿದೆ. ಪೊಲೀಸರು, ವಿಷದ ಬಾಟಲಿಗಾಗಿ ಶೋಧ ನಡೆಸುತ್ತಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗವು ಲೆಕ್ಕವಿಲ್ಲದಷ್ಟು ಜನರ ಬದುಕನ್ನೇ ಕಸಿದುಕೊಂಡಿದೆ. ಕೋಟ್ಯಂತರ ಜನರ ಬದುಕನ್ನು ಆತಂತ್ರಗೊಳಿಸಿ ಸಂಕಷ್ಟ ಎಡೆ ಮಾಡಿಕೊಟ್ಟಿದೆ. ಹಲವು ಕುಟುಂಬಸ್ಥರನ್ನು ಕಳೆದುಕೊಂಡು ಅನೇಕರು ತಬ್ಬಲಿಗಳಾಗಿದ್ದಾರೆ. ಈ ಪಟ್ಟಿಗೆ ಗೋಪಾಲ್ ಹಾದಿಮನಿ ಕುಟುಂಬವೂ ಸೇರ್ಪಡೆಯಾಗಿದ್ದು, ಕೊರೊನಾ ಮತ್ತು ಬ್ಲ್ಯಾಕ್ ಫಂಗಸ್ನ ಭೀಕರತೆಗೆ ಸಾಕ್ಷಿ.
ಇನ್ನು ಈ ಸುದ್ದಿ ತಿಳಿಯುತ್ತಿದ್ದಂತೆ ಊರಿಗೇ ಊರೇ ಮೃತರ ಮನೆ ಬಳಿ ಜಮಾಯಿಸಿತ್ತು. ಕೊರೊನಾ ಮತ್ತು ಬ್ಲ್ಯಾಕ್ ಫಂಗಸ್ಗೆ ಹಿಡಿಶಾಪ ಹಾಕುತ್ತಾ, ಮಮ್ಮಲ ಮರುಗಿದರು.