ಪಾಟ್ನ: ಅಕ್ಟೋಬರ್ 30ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಬಿಹಾರದಲ್ಲಿ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ(ಆರ್ಜೆಡಿ) ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಇದರಿಂದೊಂದಿಗೆ ಮಹಾಘಟಬಂಧನ್ ಮೈತ್ರಿಕೂಟದ ಆರ್ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ಮೈತ್ರಿ ಮುರಿದುಬಿದ್ದಿದೆ.
ಬಿಹಾರದ ಕುಶೇಶ್ವರ ಆಸ್ಥಾನ ಮತ್ತು ತಾರಾಪುರ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಉಪಚುನಾವಣೆ ನಡೆಯಲಿದೆ. ಈ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ. ಸೀಟು ಹಂಚಿಕೆ ಮುಗಿದ ಅಧ್ಯಾಯ ಎಂದು ಕಾಂಗ್ರೆಸ್ ಉಸ್ತುವಾರಿ ತಾರಿಕ್ ಅನ್ವರ್ ಹೇಳಿದ್ದಾರೆ.
ಇದನ್ನು ಓದಿ: ರಾಹುಲ್ ಗಾಂಧಿ ಸಮ್ಮುಖದಲ್ಲಿ ಕನ್ನಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆ
ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಉಪಚುನಾವಣೆಯನ್ನು ಎದುರಿಸುತ್ತಿದೆ. ಈ ತೀರ್ಮಾನ ಪಕ್ಷಕ್ಕೆ ಹೆಚ್ಚು ಅನುಕೂಲವಾಗಲಿದೆ. ಫಲಿತಾಂಶ ಪಕ್ಷದ ತೀರ್ಮಾನಕ್ಕೆ ಪೂರಕವಾಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎರಡೂ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಹೋರಾಡಲಿದ್ದೇವೆ. ಇದು ಸ್ನೇಹಿತರ ನಡುವಿನ ಹೋರಾಟವಲ್ಲ ಎಂದು ತಾರಿಕ್ ಅನ್ವರ್ ಸ್ಪಷ್ಡಪಡಿಸಿದರು.
ಕಾಂಗ್ರೆಸ್ ಭದ್ರಕೋಟೆ ಕುಶೇಶ್ವರ ಆಸ್ಥಾನ ಕ್ಷೇತ್ರದ ಉಪಚುನಾವಣೆಯಲ್ಲಿ ಆರ್ಜೆಡಿ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಹೀಗಾಗಿ ಪಕ್ಷಗಳ ನಡುವಿನ ಮೈತ್ರಿ ಮುರಿದುಬಿದ್ದಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಹಾರ ಕಾಂಗ್ರೆಸ್ ಉಸ್ತುವಾರಿ ಭಕ್ತಚರಣ್ ದಾಸ್, ‘ಆರ್ಜೆಡಿ ನಮ್ಮನ್ನು ಕಡೆಗಣಿಸುತ್ತಿದೆ. ತೇಜಸ್ವಿ ಯಾದವ್ಗೆ ನಮ್ಮ ಬೆಂಬಲ ಬೇಡದಿದ್ದರೆ ಹೇಳಿಬಿಡಲಿ, ವಿಧಾನಸಭೆಯಲ್ಲಿ ನಮ್ಮ 19 ಶಾಸಕರ ಬೆಂಬಲ ವಾಪಸ್ ಪಡೆಯುತ್ತೇವೆ ಹೀಗಾಗಿ 2024ರ ಲೋಕಸಭಾ ಚುನಾವಣೆಯಲ್ಲಿ 40 ಕ್ಷೇತ್ರಗಳಲ್ಲೂ ನಾವು ಸ್ಪರ್ಧಿಸುತ್ತೇವೆ.ʼ ಎಂದು ತಿಳಿಸಿದ್ದಾರೆ. ಕನ್ಹಯ್ಯ ಬಿಹಾರದ ಭವಿಷ್ಯದ ನಾಯಕ ಎಂದು ಸಹ ಬಣ್ಣಿಸಿದ್ದಾರೆ.
ಇದನ್ನು ಓದಿ: ಎನ್ಡಿಎಗೆ ಅಲ್ಪದರಲ್ಲಿ ಗೆಲುವು, ಗಮನಾರ್ಹ ಹಿನ್ನಡೆ
ಶಾಸಕ ಜಿಗ್ನೇಶ್ ಮೇವಾನಿ, ವಿದ್ಯಾರ್ಥಿ ನಾಯಕ ಕನ್ಹಯ್ಯಕುಮಾರ್ ಮತ್ತು ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದ ಬಳಿಕ ಬಿಹಾರದ ಮಹಾಘಟಬಂಧನ್ ನಿಂದ ಕಾಂಗ್ರೆಸ್ ಹೊರಬಂದಿದೆ. ಉಪಚುನಾವಣೆ ಮಾತ್ರವಲ್ಲ, 2024ರಲ್ಲಿ ಬಿಹಾರದ ಎಲ್ಲಾ 40 ಲೋಕಸಭಾ ಸ್ಥಾನಗಳಿಗೂ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದೆ.
ಅಕ್ಟೋಬರ್ 22ರಂದು ಕನ್ಹಯ್ಯಕುಮಾರ್ ಮತ್ತು ಶಾಸಕ ಜಿಗ್ನೇಶ್ ಮೇವಾನಿ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಬಿಹಾರದಲ್ಲಿ ಉಪಚುನಾವಣೆ ಸಂಬಂಧ ನಡೆದ ಸಭೆಯಲ್ಲಿಯೂ ಪಾಲ್ಗೊಂಡಿದ್ದರು. ಈ ಮೂವರು ಆಗಮನದಿಂದ ಕಾಂಗ್ರೆಸ್ ತಂತ್ರಗಾರಿಕೆ ಬದಲಾಗಿದೆ. ಉಪಚುನಾವಣೆಯಲ್ಲಿ ಇವರು ಸ್ಟಾರ್ ಪ್ರಚಾರಕರಾಗಿದ್ದಾರೆ. ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ನಮ್ಮದು ಹಳೆಯ ಪಕ್ಷ. ದೇಶ ಹಾಗೂ ಬಿಹಾರ ರಾಜ್ಯವನ್ನು ಉಳಿಸಲು ಹೋರಾಟ ನಡೆಸುತ್ತೇವೆ. ಗೆಲುವಿಗಾಗಿ ಹೋರಾಟ ಮಾಡುತ್ತೇವೆ. ದೇಶವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.