ಕುತ್ಲೂರೆಂಬ ಕರ್ನಾಟಕ ಕಯ್ಯೂರು..! ವಿಠಲ ಮಲೆಕುಡಿಯನೆಂಬ ಅಪ್ಪು..!

ನವೀನ್ ಸೂರಿಂಜೆ

ನಕ್ಸಲ್ ಆರೋಪ ಹೊತ್ತಿದ್ದ ವಿಠಲ ಮಲೆಕುಡಿಯ ಮತ್ತು ಅವರ ತಂದೆ ನಿಂಗಣ್ಣ ಮಲೆಕುಡಿಯರನ್ನು ದಕ್ಷಿಣ ಕನ್ನಡ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಆರೋಪ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.

ವಿಠಲ ಮಲೆಕುಡಿಯ ಬೆಳ್ತಂಗಡಿ ತಾಲೂಕು ಕುತ್ಲೂರು ನಕ್ಸಲ್ ಪೀಡಿತ ಎಂಬ ಪೊಲೀಸ್ ಪೀಡಿತ ಪ್ರದೇಶದ ಪ್ರತಿನಿಧಿ. ಕುತ್ಲೂರು ಗ್ರಾಮದ ಪ್ರತೀ ಮನೆಯಲ್ಲೊಬ್ಬ ವಿಠಲ ಮತ್ತು ನಿಂಗಣ್ಣರಿದ್ದಾರೆ. ಪ್ರತೀ ಮನೆ ಮಂದಿಯಲ್ಲೂ ಪೊಲೀಸ್ ಲಾಠಿ, ಗನ್ನಿನ ಮೊನೆಯಿಂದಾದ ಹಲ್ಲೆಯ ಗುರುತಿದೆ. ಪ್ರತೀ ಮನೆಯ ಬಾಗಿಲುಗಳನ್ನು ರಾತ್ರೋರಾತ್ರಿ ಪೊಲೀಸರು ಒಡೆದ ಕುರುಹುಗಳಿವೆ. ಕುತ್ಲೂರು ಎಂಬ ಮುಗ್ದ ಆದಿವಾಸಿಗಳ ನಾಡಿನ ಏಕೈಕ ವಿದ್ಯಾವಂತನಾದ್ದರಿಂದ ವಿಠಲನ ಮೇಲೆ ನಕ್ಸಲ್ ಆರೋಪ ಹೊರಿಸಲಾಯ್ತು. ಆದರೆ ಇದಷ್ಟೇ ಕಾರಣವಲ್ಲ.

ಕರಾವಳಿಯ ಪಶ್ಚಿಮ ಘಟ್ಟದಲ್ಲಿ ಕುತ್ಲೂರು ಎಂಬುದು ಪುಟ್ಟ ಊರು. ಇಂತಹ ಹತ್ತಾರು ಊರುಗಳು ನಕ್ಸಲ್ ಪೀಡಿತ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಆದರೆ ಕುತ್ಲೂರು ಮಾತ್ರ ಪೊಲೀಸ್ ಟಾರ್ಗೆಟ್ ಆಗಿದ್ದು ಯಾಕೆ ?

ಸರ್ಕಾರ ಪಶ್ಚಿಮ ಘಟ್ಟ ಸೂಕ್ಷ್ಮ ಪರಿಸರದಿಂದ ಜನರನ್ನು ಒಕ್ಕಲೆಬ್ಬಿಸಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಆ ಯೋಜನೆಗಳಿಗೆ ಸುಂದರ ಹೆಸರನ್ನೂ ಕೊಟ್ಟುಕೊಂಡಿದ್ದಾರೆ. ಪಶ್ಚಿಮ ಘಟ್ಟ ರಾಷ್ಟ್ರೀಯ ಉದ್ಯಾನವನದ ಒಳಗಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ನೋಟಿಸ್ ನೀಡಲಾಗಿತ್ತು. ಎಲ್ಲಾ ಕಡೆಗಳಲ್ಲಿ ಸುಲಭವಾಗಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದರೆ ಕುತ್ಲೂರಿನಲ್ಲಿ ಅದು ಸಾಧ್ಯವಾಗಿಲ್ಲ. ಯಾಕೆಂದರೆ ಕುತ್ಲೂರಿನ ಒಳಗೆ ಸರ್ಕಾರದ ಏಜೆಂಟರು, ಎನ್ ಜಿಒಗಳಿಗೆ ಪ್ರವೇಶ ಇರಲಿಲ್ಲ.

ಆರ್ ಎಸ್ ಎಸ್ ವನವಾಸಿ ಕಲ್ಯಾಣ ಎಂಬ ಎನ್ ಜಿಒ ನಡೆಸುತ್ತಿದೆ. ಈ ವನವಾಸಿ ಕಲ್ಯಾಣವು ಕಾಡಿನೊಳಗೆ ವಾಸಿಸುತ್ತಿರುವ ಆದಿವಾಸಿಗಳ ಮಧ್ಯೆ ಕೆಲಸ ಮಾಡುತ್ತದೆ. ಆದಿವಾಸಿಗಳ ತಲೆಯೊಳಗೆ ವೈದಿಕತೆಯನ್ನು ತುಂಬಿ “ಹಿಂದೂ”ವಾಗಿಸುವ ಪ್ರಯತ್ನ ನಡೆಸುತ್ತದೆ. ಎಲ್ಲೆಲ್ಲಿ ವನವಾಸಿ ಕಲ್ಯಾಣ ಕೆಲಸ ಮಾಡುತ್ತದೆಯೋ ಆ ಕಾಡುಗಳೊಳಗಿನ ಗ್ರಾಮಗಳು ಪ್ರತಿಭಟನಾ ಶಕ್ತಿಯನ್ನು ಸಂಪೂರ್ಣ ಕಳೆದುಕೊಂಡು ಬಿಡುತ್ತದೆ. ಸಿದ್ದಿ ಸಮುದಾಯವನ್ನು ವನವಾಸಿ ಕಲ್ಯಾಣವು ಇದೇ ರೀತಿ ಆವರಿಸಿಕೊಂಡು ಇನ್ನೂ ನಾಗರಿಕ ಸಮುದಾಯದ ಹಕ್ಕುಗಳನ್ನು ಪಡೆಯಲು ಒಂದು ಸಂಘಟಿತ ಹೋರಾಟವನ್ನು ಮಾಡಲು ಬಿಡುತ್ತಿಲ್ಲ ಎಂಬುದು ಗಮನಾರ್ಹ. ಸಿದ್ದಿ ಸಮುದಾಯದ ಬಗೆಗೆ ಸಮಾಜದಲ್ಲಿ ಇರುವ ಅನುಕಂಪವು ಸಿದ್ದಿ ಹೋರಾಟಗಾರರನ್ನು ಬೆಳೆಸಬಹುದಾದರೂ ಅದಕ್ಕೆ ವನವಾಸಿ ಕಲ್ಯಾಣ ಅವಕಾಶ ನೀಡುತ್ತಿಲ್ಲ.

ವನವಾಸಿ ಕಲ್ಯಾಣವು ಕಾಡಿನ ಮಕ್ಕಳ ತಾತ್ಕಾಲಿಕ ಬೇಡಿಕೆಗಳನ್ನು ದಾನದ ಮಾಧರಿಯಲ್ಲಿ ಈಡೇರಿಸುವುದಲ್ಲದೆ ಆದಿವಾಸಿಗಳನ್ನು ಧಾರ್ಮಿಕ ಕೆಲಸದಲ್ಲಿ ನಿರತರಾಗುವಂತೆ ಮಾಡುತ್ತದೆ. ಮೂಲಭೂತ ಸೌಕರ್ಯ ಮತ್ತಿತರ ಹಕ್ಕುಗಳಿಗಾಗಿ ಹೋರಾಟ ಮಾಡುವಂತೆ ಕಾಡೊಳಗಿನ ಜನಸಮುದಾಯ ಒಟ್ಟಾಗುವುದನ್ನು ವನವಾಸಿ ಕಲ್ಯಾಣ ತಡೆಯುತ್ತದೆ. ಸರ್ಕಾರಕ್ಕೂ ಇದೇ ಬೇಕಾಗಿರುವುದರಿಂದ ಸುಲಭವಾಗಿ ಕಾಡಿನ ಜನರನ್ನು ಒಕ್ಕಲೆಬ್ಬಿಸಲು, ಅಥವಾ ಜನರು ಇರುವಂತೆಯೇ ಕಾಡಿನೊಳಗೆ ಗಣಿಗಾರಿಕೆ, ರೆಸಾರ್ಟ್ ಸೇರಿದಂತೆ ಅಭಿವೃದ್ದಿ ಹೆಸರಿನಲ್ಲಿ ಲೂಟಿ ಮಾಡಲು ಸರಕಾರಕ್ಕೆ ಸುಲಭವಾಗುತ್ತದೆ.

ಬೆಳ್ತಂಗಡಿಯ ಕುತ್ಲೂರು ಎಂದರೆ ಕೇರಳದ ಕಯ್ಯೂರಿನಂತಿದೆ. ಇಲ್ಲಿ ಆರ್ ಎಸ್ ಎಸ್ ನ ವನವಾಸಿ ಕಲ್ಯಾಣಕ್ಕೆ ಮಾತ್ರ ಪ್ರವೇಶ ನಿಷಿದ್ದವಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯನ್ನೂ ಕುತ್ಲೂರಿನ ಜನ ಹೆಚ್ಚಾಗಿ ಒಳಬಿಟ್ಟುಕೊಂಡಿಲ್ಲ. ಜನರನ್ನು ಬಡ್ಡಿಯ ಸುಳಿಯಲ್ಲಿ ಸಿಲುಕಿಸುತ್ತಲೇ ಧರ್ಮಸ್ಥಳ ದೇವಸ್ಥಾನಕ್ಕೆ ಗ್ರಾಹಕರನ್ನಾಗಿಸುವ ಪಿಆರ್ ಕೆಲಸವನ್ನಷ್ಟೇ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತದೆ. ಇದಲ್ಲದೆ ಹಲವು ಎನ್ ಜಿಒಗಳೂ ಕೂಡಾ ಕುತ್ಲೂರಿನಲ್ಲಿ ಕೆಲಸ ಮಾಡಲು ಉತ್ಸುಕವಾಗಿದ್ದರೂ ಅವ್ಯಾವುದಕ್ಕೂ ಇಲ್ಲಿನ ಆದಿವಾಸಿಗಳು ಸೊಪ್ಪು ಹಾಕಿಲ್ಲ. ಜನ ಹೋರಾಟದ ಮೂಲಕವೇ ನಾವು ನಮ್ಮ ಹಕ್ಕುಗಳನ್ನು ಪಡೆಯುತ್ತೇವೆ ಮತ್ತು ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುತ್ತೇವೆ ಎಂಬ ಮನೋಭಾವ ಕುತ್ಲೂರು ನಿವಾಸಿಗಳದ್ದು. ಇಂತಹ ಮನಸ್ಥಿತಿ ಬೆಳೆಯಲು ಮುಖ್ಯಕಾರಣ ಬೆಳ್ತಂಗಡಿಯ ಎಡಪಂಥೀಯ ಮುಖಂಡರು.

ನಾವು ಪತ್ರಕರ್ತರ ತಂಡವಾಗಿ ಮೊದಲು ಕುತ್ಲೂರಿಗೆ ಭೇಟಿ ನೀಡಿದ ಸಂದರ್ಭಕ್ಕೂ ಮೊದಲು ಅಲ್ಲಿನ ಜನ ಸಿಪಿಐಎಂ ಎಡಪಂಥೀಯ ಮುಖಂಡರಾದ ಎಸ್ ಎಂ ಶಿವಕುಮಾರ್, ಬಿ ಎಂ ಭಟ್, ಶೇಖರ್ ಲಾಯಿಲಾ ಜೊತೆ ಸಂಪರ್ಕದಲ್ಲಿದ್ದರು. ಕುತ್ಲೂರಿನ ಸಮಸ್ಯೆಗಳು, ಅಲ್ಲಿ ಎಎನ್ಎಫ್ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ನಡೆಸುವ ಮಾನವ ಹಕ್ಕು ಉಲ್ಲಂಘನೆಗಳು ನಮ್ಮ ಭೇಟಿಯ ಬಳಿಕ ಹೊರಜಗತ್ತಿಗೆ ದೊಡ್ಡ ಮಟ್ಟದಲ್ಲಿ ಗೊತ್ತಾದರೂ, ಬೆಳ್ತಂಗಡಿಯ ಎಡಪಂಥೀಯ ನಾಯಕರು ಮತ್ತು ಅಲ್ಲಿನ ಪತ್ರಕರ್ತ ಶಿಭಿ ಧರ್ಮಸ್ಥಳ ಸೇರಿದಂತೆ ಹಲವರು ಕುತ್ಲೂರಿನ ಜನ ನೋವು ನಲಿವುಗಳ ಜೊತೆ ಬೆರೆತಿದ್ದರು. ಇದರಿಂದಾಗಿಯೇ ಮುಖ್ಯವಾಹಿನಿಂದ ಹೊರಗಿದ್ದ ಕುತ್ಲೂರನ್ನು ಜಿಲ್ಲಾಡಳಿತ ಒಕ್ಕಲೆಬ್ಬಿಸಲು ಸಾಧ್ಯವಾಗಿಲ್ಲ. ಈ ಎಡಪಂಥೀಯ ನಾಯಕರಿಂದಾಗಿಯೇ ಕುದ್ರೇಮುಖ ರಾಷ್ಟ್ರೀಯ ಉದ್ಯಾನವನಕ್ಕಾಗಿ ನಮ್ಮ ಭೂಮಿಯನ್ನು ಬಿಟ್ಟುಕೊಡಕೂಡದು ಎಂಬ ಅರಿವು ಮಲೆಕುಡಿಯರಿಗಿತ್ತು.

ನಾವು ಒಂದು ತಂಡವಾಗಿ ಕುತ್ಲೂರಿಗೆ ಭೇಟಿ ನೀಡಿದ ಬಳಿಕ ವಿಠಲ ಮಲೆಕುಡಿಯ, ಪೂವಪ್ಪ‌ಮಲೆಕುಡಿಯ ಬೆಳಕಿಗೆ ಬಂದರು. ಆಗ ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯರು ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದುಕೊಂಡು ನಕ್ಸಲ್ ಬೇಟೆಯ ನೆಪದಲ್ಲಿ ನಾಗರಿಕರ‌ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ಮಾಹಿತಿಯನ್ನು ನಮಗೆ ನೀಡುತ್ತಿದ್ದರು. ಕುತ್ಲೂರು ಗ್ರಾಮದಲ್ಲಿ ವಿಠಲ ಒಬ್ಬನೇ ಆಗ ಪಿಯುಸಿ ಓದಿದ್ದ ಮತ್ತು ಸಾಮಾನ್ಯ ಜ್ಞಾನ ಹೊಂದಿದ್ದ ಯುವಕನಾಗಿದ್ದರಿಂದ ಇಡೀ ಅನಕ್ಷರಸ್ಥ ಗ್ರಾಮವನ್ನು ಎಚ್ಚರಿಸುತ್ತಿದ್ದ‌‌. ಒಕ್ಕಲೇಳಲು ಸರ್ಕಾರ ನೀಡುತ್ತಿದ್ದ ಪ್ರತೀ ನೋಟಿಸನ್ನು ವಿಠಲ ಓದಿ ಹೇಳುತ್ತಿದ್ದರು. ಅದಕ್ಕೆ ಇರುವ ಪರಿಹಾರವನ್ನೂ ಬೆಳ್ತಂಗಡಿಯ ಸಿಪಿಐಎಂ ನಾಯಕರು, ವಕೀಲರೂ ಆಗಿರುವ ಶಿವಕುಮಾರ್ ಜೊತೆ ಚರ್ಚಿಸಿ ಗ್ರಾಮಸ್ಥರಿಗೆ ವಿವರಿಸುತ್ತಿದ್ದರು.

ಕುತ್ಲೂರಿನ ಸುತ್ತಮುತ್ತ ಮತ್ತು ರಸ್ತೆ ಪಕ್ಕದಲ್ಲಿದ್ದ ಹಲವು ಕುಟುಂಬಗಳ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸೇರಿದಂತೆ ಹಲವು ಎನ್ ಜಿಒಗಳ ಹಿಡಿತದಲ್ಲಿದ್ದವು. ಅವೆಲ್ಲವೂ ಜಿಲ್ಲಾಡಳಿತದ ಒಕ್ಕಲೆಬ್ಬಿಸುವಿಕೆ ಪ್ರಕ್ರಿಯೆಗೆ ತಲೆಬಾಗಿ ಭೂಮಿಯನ್ನು ಬಿಟ್ಟುಕೊಟ್ಟಿದ್ದರು. ಆದರೆ ಸಿಪಿಐಎಂ ಮತ್ತು ಪತ್ರಕರ್ತರ ಜೊತೆ ಸಂಪರ್ಕದಲ್ಲಿದ್ದ ಕುತ್ಲೂರು ಕಾಡಿನ ನಿವಾಸಿಗಳು ಭೂಮಿ ಬಿಟ್ಟುಕೊಡಲಿಲ್ಲ. ಇದು ವಿಠಲ್ ಮಲೆಕುಡಿಯ ಮೇಲೆ ಸರ್ಕಾರದ ಕೋಪಕ್ಕೆ ಕಾರಣವಾಗಿತ್ತು.

ಈಗ ಕುತ್ಲೂರು ಗ್ರಾಮ ಉಳಿದಿದ್ದರೆ ಅದರಲ್ಲಿ ವಿಠಲ ಮಲೆಕುಡಿಯರ ಪಾತ್ರ ಅಪಾರ. ಅದರ ಜೊತೆಗೆ ಎಡಪಂಥೀಯ ಚಳುವಳಿ ವಿಠಲ ಸೇರಿದಂತೆ ಕುತ್ಲೂರಿನ ಅನಕ್ಷರಸ್ಥ ಆದಿವಾಸಿಗಳಲ್ಲಿ ಹೋರಾಟದ ಕಿಚ್ಚನ್ನು ಹುಟ್ಟಿಸಿದ್ದೂ ಅತ್ಯಂತ ಮುಖ್ಯವಾಗುತ್ತದೆ. ವಿಠಲರ ಬಂಧನದ ಬಳಿಕವೂ ಬಿಡುಗಡೆಗಾಗಿ ಡಿವೈಎಫ್ಐ ಹೋರಾಟದ ಸಾರಥ್ಯವನ್ನು ವಹಿಸುತ್ತದೆ. ಸಿಪಿಐಎಂ ರಾಷ್ಟ್ರೀಯ ನಾಯಕರೂ ವಿಠಲ ಮತ್ತು ಆದಿವಾಸಿಗಳ ಬೆನ್ನಿಗೆ ನಿಲ್ಲುತ್ತಾರೆ‌. ಎಡಪಂಥೀಯ ಚಳುವಳಿಯ ಜಾಗದಲ್ಲಿ ವನವಾಸಿ ಕಲ್ಯಾಣವೋ, ಎನ್ ಜಿಓಗಳೋ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯೋ ಇದ್ದಿದ್ದರೆ ವಿಠಲ ಮತ್ತು ಅವರ ತಂದೆ ಅರೆಸ್ಟ್ ಆಗುತ್ತಿರಲಿಲ್ಲ. ಆದರೆ ಈ ಸ್ವಾಭಿಮಾನದ ಕ್ರಾಂತಿಗೆ ಕಾರಣವಾದ ಕುತ್ಲೂರು ಗ್ರಾಮವೇ ಅಸ್ತಿತ್ವದಲ್ಲಿ ಇರುತ್ತಿರಲಿಲ್ಲ.

Donate Janashakthi Media

Leave a Reply

Your email address will not be published. Required fields are marked *