ಮತ ನೀಡಬೇಕೆಂದು ಅಂಗಲಾಚಿದ ಮುಖ್ಯಮಂತ್ರಿ: ಡಿ.ಕೆ.ಶಿವಕುಮಾರ್‌ ಆರೋಪ

ಹಾನಗಲ್:‌ ನಾನು ಇಲ್ಲಿಗೆ ಬರುವ ಮೊದಲು ಸೀಗೆಹಳ್ಳಿ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲೊಬ್ಬರು ಲೈನ್‌ಮನ್ ಸಿಕ್ಕಿದ್ದರು. ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯುತ್ ಇಲಾಖೆ ನೌಕರರು, ಲೈನ್ ಮನ್ ಅಸೋಸಿಯೇಷನ್ ನವರನ್ನು ಕರೆದು ಸಭೆ ಮಾಡಿದರಂತೆ. ಇದೇ ಜಿಲ್ಲೆಯವನಾದ ನನ್ನ ಮರ್ಯಾದೆ ನಿಮ್ಮ ಕೈಯಲ್ಲಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಗೊಂಬೆ ಇದ್ದಂತೆ. ನಾನೇ ಇಲ್ಲಿ ಅಭ್ಯರ್ಥಿ ದಯವಿಟ್ಟು ನನಗೆ ಸಹಾಯ ಮಾಡಿ ಅಂದರಂತೆ ಅಲ್ಲಿಗೆ ಬಿಜೆಪಿಯ ಸ್ಥಿತಿ ಏನಾಗಿದೆ ನೋಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಇದನ್ನು ಓದಿ: ಬಿಜೆಪಿ ಅಭಿವೃದ್ಧಿ ಮಾಡದೆಯೇ ಮತ ಕೇಳುತ್ತಿದ್ದಾರೆ-ಹಾಗಾದರೆ ಅಭಿವೃದ್ಧಿಗಳ ಪಟ್ಟಿ ನೀಡಲಿ: ಸಿದ್ದರಾಮಯ್ಯ

ಮುಂದುವರೆದು ಮಾತನಾಡಿದ ಡಿ.ಕೆ.ಶಿವಕುಮಾರ್‌ ಅಲ್ಲಿಗೆ ಬೊಮ್ಮಾಯಿ ಅವರ ಪರಿಸ್ಥಿತಿ ಏನಾಗಿದೆ ಅಂತ ನೀವೇ ಯೋಚನೆ ಮಾಡಿ. ಅವರಿಗೆ ಸೋಲಿನ ಭಯ. ತಮ್ಮ ಅಭ್ಯರ್ಥಿ ಸೋಲೋದು ಅವರಿಗೆ ಖಾತ್ರಿಯಾಗಿದೆ ಹೀಗಾಗಿ ಹಾಗೆ ಮಾತಾಡಿದ್ದಾರೆ.

ಆ ಸಭೆ ಮುಗಿದ ಮೇಲೆ ಹೊರಗೆ ಬಂದ ನೌಕರರು ಹಾಗೂ ಲೈನ್‌ಮನ್ ಗಳು ಮಾತಾಡಿಕೊಂಡರಂತೆ. ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ನಮಗೆಲ್ಲ ಕೆಲಸ ಕೊಟ್ಟಿದೆ. ಉದ್ಯೋಗ ಕಾಯಂ ಮಾಡಿದೆ. ಸಂಬಳ ಜಾಸ್ತಿ ಮಾಡಿದೆ. ಕಾಂಗ್ರೆಸ್ಸಿಗೆ ವೋಟು ಹಾಕದಿದ್ದರೆ ನಮಗೆ ನಾವೇ ದ್ರೋಹ ಮಾಡಿಕೊಂಡಂತೆ ಅಂತಾ ಹೇಳಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ನಿಜ, ಮನುಷ್ಯನಿಗೆ ಉಪಕಾರ ಸ್ಮರಣೆ ಇರಬೇಕು ಅನ್ನೋ ಮಾತನ್ನು ಆ ನೌಕರರು ರುಜುವಾತು ಮಾಡಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಹೇಳುತ್ತೇನೆ. ರೈತರಿಗೂ ಅಷ್ಟೇ ಉಪಕಾರ ಸ್ಮರಣೆ ಇದೆ. ಬೆಲೆ ಏರಿಕೆ ಮೂಲಕ ತಮಗೆ ಇನ್ನಿಲ್ಲದ ತೊಂದರೆ ಕೊಟ್ಟಿರುವ ಬಿಜೆಪಿಗೆ ನೀವು ವೋಟು ಹಾಕಲ್ಲಾ ಅಂತಾ ನಮಗೆ ಚೆನ್ನಾಗಿ ಗೊತ್ತು.

ಶ್ರೀನಿವಾಸ ಮಾನೆ ಚುನಾವಣೆಯಲ್ಲಿ ಸೋತಿದ್ದರೂ ಕೊರೋನಾ ಸಂಕಷ್ಟ ಕಾಲದಲ್ಲಿ ಇಲ್ಲಿನ ಜನರಿಗೆ ಚೆಕ್ ಮೂಲಕ ತಲಾ ಎರಡು ಸಾವಿರ ರುಪಾಯಿ ಕೊಟ್ಟಿದ್ದಾರೆ. ಆದರೆ ಗೆದ್ದವರು, ಈಗ ಅಭ್ಯರ್ಥಿ ಆಗಿರುವವರಾಗಲಿ, ಅವರಿಗೆ ಮತ ಹಾಕಿ ಎನ್ನುತ್ತಿರುವ ಬೊಮ್ಮಾಯಿ ಅವರಾಗಲಿ ನಿಮ್ಮನ್ನು ತಿರುಗಿಯೂ ನೋಡಲಿಲ್ಲ. ನಿಮ್ಮ ಕಷ್ಟಕ್ಕೆ ಆಗಲಿಲ್ಲ. ಈಗ ಬಂದು ಅದ್ಯಾವ ಮುಖ ಇಟ್ಟುಕೊಂಡು ನಿಮ್ಮನ್ನು ಮತ ಕೇಳುತ್ತಿದ್ದಾರೆ? ನೀವೆ ಅದನ್ನು ಪ್ರಶ್ನೆ ಮಾಡಬೇಕು.

ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ದಿನಬಳಕೆ ವಸ್ತುಗಳ ಬೆಲೆ ಏರಿಕೆ‌ ಮಾಡಿ, ಕರ್ನಾಟಕವನ್ನು ಕತ್ತಲೆಗೆ ತಳ್ಳುತ್ತಿರುವ ಈ ಬಿಜೆಪಿ ಸರಕಾರಕ್ಕೆ ಮತ ಹಾಕುತ್ತೀರೋ, ನಿಮ್ಮ ಕಷ್ಟಕ್ಕೆ ಆಗಿರುವ ಶ್ರೀನಿವಾಸ ಮಾನೆಗೆ ಮತ ಹಾಕುತ್ತೀರೋ? ಎಂದು ಕೇಳಿದರು.

ಈ ಡಬಲ್ ಎಂಜಿನ್ ಬಿಜೆಪಿ ಸರಕಾರದಿಂದ ನಿಮಗೆ ಯಾವುದೇ ಅನುಕೂಲ ಆಗಿಲ್ಲ.ಈ ರಾಜ್ಯದ ಜನ ನೆಮ್ಮದಿ ಅಗಿ ಇದ್ದದ್ದು ಕಾಂಗ್ರೆಸ್ ಸರಕಾರದಲ್ಲಿ. ನಿಮಗೆ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ನಾನಾ ಭಾಗ್ಯಗಳನ್ನು ಕೊಟ್ಟದ್ದು ಕಾಂಗ್ರೆಸ್ ಸರಕಾರ. ಮುಂದೆ ನೀವು ನೆಮ್ಮದಿ ಆಗಿರಬೇಕಾದರೆ ಮತ್ತೆ ಕಾಂಗ್ರೆಸ್ ಸರಕಾರವೇ ಬರಬೇಕು. ನೀವು ಮಾನೆ ಅವರನ್ನು ಗೆಲ್ಲಿಸುವ ಮೂಲಕ ಮೂಲಕ ಸಿಎಂ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದು ಸಂದೇಶ ರವಾನಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.

Donate Janashakthi Media

Leave a Reply

Your email address will not be published. Required fields are marked *