ರಾಹುಲ್ ಗಾಂಧಿ ಬಗ್ಗೆ ಕಟೀಲ್ ವಿವಾದಾತ್ಮಕ ಹೇಳಿಕೆ:‌ ಕ್ಷಮೆಯಾಚಿಸಲು ಡಿಕೆಶಿ ಆಗ್ರಹ

ಬೆಂಗಳೂರು:  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡಲೇ ಕ್ಷಮೆಯಾಚಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಡಿ.ಕೆ.ಶಿವಕುಮಾರ್‌ “ನಿನ್ನೆ ನಾನು ಮಾತನಾಡುವಾಗ ‘ರಾಜಕೀಯ ವಿರೋಧಿಗಳೊಡನೆ ನಾಗರಿಕ ಮೌಲ್ಯದ ಜೊತೆಗೆ ಗೌರವಯುತವಾಗಿ ನಡೆದುಕೊಳ್ಳೋದ್ರಲ್ಲಿ ನಂಬಿಕೆಯಿದೆ’ ಎಂದಿದ್ದೆ. ಬಿಜೆಪಿ ಇದನ್ನು ಒಪ್ಪುತ್ತದೆಂದು ಭಾವಿಸಿದ್ದೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರು ರಾಹುಲ್ ಗಾಂಧಿಯವರನ್ನು ಅಸಂಸದೀಯ ಪದಗಳಿಂದ ನಿಂದಿಸಿದ್ದು, ಕ್ಷಮೆ ಯಾಚಿಸುತ್ತಾರೆಂದು ಭಾವಿಸುತ್ತೇನೆ,” ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್ ಹಾಗೂ ಡ್ರಗ್ ಪೆಡ್ಲರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಅವರು, ರಾಹುಲ್ ಗಾಂಧಿ ಒರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಅಂತ ವರದಿ ಇವೆ ಎಂದು ಆರೋಪಿಸಿದ್ದರು.

ಅಷ್ಟೇ ಅಲ್ಲದೆ ನಳೀನ್‌ ಕುಮಾರ್‌ ಕಟೀಲ್‌ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರೂ ಜೈಲಿಗೆ ಹೋಗಿದ್ದರು. ಇತ್ತ ರಾಜ್ಯಾಧ್ಯಕ್ಷ ತಿಹಾರ್ ಜೈಲಿಗೆ ಹೋಗಿದ್ದರು. ಇವರೇನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲಿಗೆ ಹೋದರೋ? ಇಲ್ಲಾ ಸಂಗ್ರಾಮದ ಕಥೆ ಬರೆಯಲು ಹೋಗಿದ್ದರೋ? ಇಂಥವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಟೀಕಿಸುತ್ತಾರೆ ಎಂದು ಕಿಡಿಕಾರಿದ್ದರು.‌

ನಳಿನ್ ಕುಮಾರ್ ಕಟೀಲ್ ಅವರು ಬಳಸಿರುವ ಪದಗಳು  ಕಾಂಗ್ರೆಸ್ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಅವರ ವಿರುದ್ಧ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಆರೋಪ ಮಾಡಿದ್ದಾರೆ.

“ನಳಿನ್ ಕುಮಾರ್ ಕಟೀಲ್ ಮಾನಸಿಕ ಅಸ್ವಸ್ಥರಾಗಿದ್ದಾರೆ. ಎಂಥಹ ಅವಿವೇಕಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ ಅನ್ನುವುದನ್ನು ಇದು ತೋರಿಸುತ್ತದೆ,” ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಓರ್ವ ಅಪ್ರಬುದ್ಧ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಕುರಿತು ಕಟೀಲ್ ಟೀಕಿಸಿದ್ದನ್ನು ಖಂಡಿಸಿದ ಅವರು, ಅವರೊಬ್ಬ ಬೇಜವಾಬ್ದಾರಿ ರಾಜಕಾರಣಿ. ಅವರ ಮಾನಸಿಕ ಸ್ಥಿತಿ ಸರಿಯಿಲ್ಲ. ನಿಮ್ಹಾನ್ಸ್‌ನಲ್ಲಿ ತೋರಿಸಿಕೊಳ್ಳುವುದು ಒಳ್ಳೆಯದು ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *