ಸಂವಿಧಾನಕ್ಕೆ ಅಪರಾಧ ಎಸಗುವವರ ಹೀನಕೃತ್ಯ ಖಂಡನೀಯ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಅನಿಯಂತ್ರಿತವಾಗಿ ನಡೆಯುತ್ತಿರುವ ದೌರ್ಜನ್ಯಗಳು, ಅವಮರ್ಯಾದಾ ಕೊಲೆಗಳು, (ಅ)ನೈತಿಕ ಪೋಲೀಸ್‌ಗಿರಿ, ಧರ್ಮದ್ವೇಷದ ರಾಜಕಾರಣ ಮತ್ತು ಅದಕ್ಕೆ ಕುಮ್ಮಕ್ಕು ಕೊಡುವ ರೀತಿಯಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಸಮರ್ಥನೆ ನೀಡುತ್ತಿರುವುದು ಅತ್ಯಂತ ಕಳವಳಕಾರೀ ಸಂಗತಿ ಎಂದು ಮಮತಾ ಯಜಮಾನ್‌ ಹೇಳಿದರು.

ನಾವೆದ್ದು ನಿಲ್ಲದಿದ್ದರೆ, ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಐಪ್ವಾ, ಜಾಗೃತ ಮಹಿಳಾ ಒಕ್ಕೂಟ ಮತ್ತು ಇತರ ಸಂಘಟನೆಗಳಿಂದ ಇಂದು ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತು ಸಂವಿಧಾನಕ್ಕೆ ಎಸಗುತ್ತಿರುವ ಅಪಚಾರದಂತಹ ಘಟನೆಗಳು ಇದನ್ನು ಸಂವಿಧಾನವನ್ನು ಗೌರವಿಸುವ ಯಾರೂ ಒಪ್ಪಲು ಸಾದ್ಯವಿಲ್ಲ. ಈ ಹಿನ್ನೆಲೆಯಲ್ಲಿ ನಾವೆದ್ದು ನಿಲ್ಲದಿದ್ದರೆ ಕರ್ನಾಟಕ-ಮಹಿಳಾ ಮತ್ತು ಮಹಿಳಾಪರ, ಮಾನವ ಹಕ್ಕುಗಳ ಸಂಘಟನೆಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ 28, 2021ರಂದು ಬೆಳಗಾವಿಯ 24 ವರ್ಷದ ಅರ್ಬಾಜ್ ಮುಲ್ಲಾ ಅವರನ್ನು ಅಪಹರಿಸಿ ತಲೆ ಮತ್ತು ದೇಹದ ಇತರ ಭಾಗಗಳನ್ನು ಕತ್ತರಿಸಿ ಖಾನಾಪುರದ ಬಳಿಯ ನಿರ್ಜನ ಹಳಿಯ ಮೇಲೆ ಎಸೆದಿದ್ದು ಪತ್ತೆಯಾಯಿತು. ಪತ್ರಿಕೆಗಳಲ್ಲಿ ಆತ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಹಿಂದೂ ಉಗ್ರ ಸಂಘಟನೆಯಾದ `ಶ್ರೀರಾಮಸೇನೆ ಹಿಂದೂಸ್ಥಾನ’ ಸಂಘಟನೆಯ ಸದಸ್ಯರು ಕೊಲೆ ಮಾಡಿರುವುದಾಗಿ ವರದಿಯಾಗಿತ್ತು. ಆತನ ತಾಯಿಯ ಹೇಳಿಕೆಯಂತೆ ಆತನ ಮೇಲೆ ಹಲ್ಲೆ ನಡೆಯಬಹುದು, ತಮ್ಮ ಮಗನನ್ನು ಕೊಲೆ ಮಾಡಬಹುದು ಎಂದು ಹೆದರಿಕೊಂಡು ಅವನನ್ನು ಉಳಿಸಿಕೊಳ್ಳಲು ಕೆಲವು ತಿಂಗಳುಗಳಿಂದ ವಾಸಕ್ಕಾಗಿ ಹಲವು ಮನೆಗಳನ್ನು ಬದಲಾಯಿಸಿದ್ದರಂತೆ. ಮೃತನ ತಾಯಿ ಕೇಳುತ್ತಿದ್ದಾರೆ; ಯುವಕರ ಕೊಲೆ, ಯುವತಿಯರ ಮೇಲಿನ ಅತ್ಯಾಚಾರಗಳು ನಿಲ್ಲುವುದೆಂದು? ಎಂದು.

ನಮ್ಮ ದೇಶದ ಕಾನೂನಿನ ವ್ಯವಸ್ಥೆಯಡಿ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಇಂತಹ ಘಟನೆಗಳು ಸಂಭವಿಸುತ್ತವೆ ಎಂದರೆ ನಿಜಕ್ಕೂ ಆಘಾತಕಾರಿ ವಿಷಯವೇ. ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಪ್ರೀತಿಸುವ ಹಾಗೂ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯದ ಹಕ್ಕ ನೀಡಿದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯವೂ ಸಹ ಇಂತಹ ಕೊಲೆ ಪ್ರಕರಣಗಳನ್ನು ಖಂಡಿಸಿದೆ. ಆದರೂ ಸಹ ಇಂತಹ ಘಟನೆಗಳು ದೇಶದಾದ್ಯಂತ ಮರುಕಳಿಸುತ್ತಲೇ ಇವೆ ಎಂದು ಹೇಳಿದರು.

ಯುವಕ ಅರ್ಬಾಜ್ ಮುಲ್ಲಾನ ಕೊಲೆಯು, ಶ್ರೀರಾಮಸೇನೆ ಮತ್ತಿತರ ಮೂಲಭೂತವಾದೀ, ಧರ್ಮಾಂಧ ಗುಂಪುಗಳ ಸದಸ್ಯರಿಗೆ ಮನುಷ್ಯರ ಪ್ರಾಣ ಹಾಗೂ ನಮ್ಮ ಸಂವಿಧಾನದ ತತ್ವಗಳ ಮೇಲೆ ಇರುವ ಅಗೌರವವನ್ನು ಸೂಚಿಸುತ್ತದೆ. ಸಂವಿಧಾನವನ್ನು ಬದಲಾಯಿಸಲಿಕ್ಕೇ ಬಂದವರು ತಾವೆಂದು ಅವರು ಹೇಳಿಕೊಳ್ಳುತ್ತಿರಬಹುದು. ಆದರೆ ಜನಪರ, ಮಾನವ ಹಕ್ಕುಗಳನ್ನು ಗೌರವಿಸುವ ಸಂಘಟನೆಗಳಾದ ನಾವು ಪ್ರೀತಿಸುವುದನ್ನು ತಪ್ಪೆನ್ನುವ, ಪ್ರೀತಿಸಿದ್ದಕ್ಕಾಗಿ ಕೊಚ್ಚಿ ಕೊಲ್ಲುವಂಥಹ ಹೀನಕೃತ್ಯವನ್ನು ಖಂಡಾತುಂಡಾವಾಗಿ ಖಂಡಿಸುತ್ತೇವೆ.

ಜಾತ್ಯಾತೀತತೆ ಹಾಗೂ ವೈವಿಧ್ಯತೆಯ ಹೆಮ್ಮೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಯುವ ಜನರು ತಮ್ಮ ಆಯ್ಕೆಯ ಜೀವನ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶದಿಂದ ವಂಚಿತರಾಗುವ ಸ್ಥಿತಿ, ಮುಸ್ಲಿಂ ಅಥವಾ ಯಾವುದೇ ಸಮುದಾಯದ ಜನರು ಬೇರೆ ಧರ್ಮದ ವ್ಯಕ್ತಿಯನ್ನು ಪ್ರೀತಿಸಲಿಕ್ಕೇ ಹೆದರುವಂತಹ, ಸದಾಕಾಲ ಜೀವಭಯದಲ್ಲಿ ಬದುಕಬೇಕಾದ ಪರಿಸ್ಥಿತಿ ಬಂದಿರುವುದು ಕಳವಳಕಾರಿಯಾಗಿದೆ ಎಂದು ತಿಳಿಸಿದರು.

ಮಾನ್ಯ ಸರ್ವೋಚ್ಛ ನ್ಯಾಯಾಲಯವು ಅರುಮುಗಂ ಸೆರ್ವ್ಯಾ ವಿ. ಹಾಗೂ ತಮಿಳುನಾಡು ರಾಜ್ಯದ ಪ್ರಕರಣದಲ್ಲಿ ಇಂತಹ ಅಪರಾಧವನ್ನು ಮಾಡುವವರ ವಿರುದ್ಧ ಕಠಿಣ ಶಿಕ್ಷೆಯನ್ನು ತೆಗೆದುಕೊಳ್ಳಬೇಕು ಹಾಗೂ ಒಂದು ವೇಳೆ ಆಡಳಿತ ಅಪರಾಧಿಗಳನ್ನು ಬಂಧಿಸುವುದೂ ಒಳಗೊಂಡಂತೆ ಕ್ರಮಕೈಗೊಳ್ಳುವಲ್ಲಿ ವಿಫಲವಾದರೆ ರಾಜ್ಯ ಸರ್ಕಾರವು ಆಡಳಿತದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ ತಿಳಿಸಿದ್ದಾರೆ.

ಆದರೆ ಕರ್ನಾಟಕದಲ್ಲಿ ಆಡಳಿತದ ಮುಖ್ಯಸ್ಥರಾಗಿರುವ ಮಾನ್ಯ ಮುಖ್ಯಮಂತ್ರಿಗಳು `ಕೃತ್ಯಕ್ಕೆ ಪ್ರತಿಕೃತ್ಯ ಇದ್ದೇ ಇರುತ್ತದೆ, ಸಮಾಜದ ನೈತಿಕತೆಯನ್ನು ಕಾಪಾಡಬೇಕಲ್ಲ’ ಎಂದು ಮಾತನಾಡಿದ್ದಾರೆ. ಇದು ನೇರವಾಗಿಯೇ ಇಂಥಹ ಕೃತ್ಯಗಳನ್ನು ಸಮರ್ಥನೆ ಮಾಡಿದಂತಾಗಿದೆ. ಸಾಮರಸ್ಯ ಮತ್ತು ಜೊತೆಯಲ್ಲಿ ಬದುಕುವುದಕ್ಕಿಂತ ನೈತಿಕತೆಯೇ ಹೆಚ್ಚಿನದೆಂದು ಮುಖ್ಯಮಂತ್ರಿಗಳೇ ಮಾತನಾಡುತ್ತಾರೆ. ಆಡಳಿತದ ಮುಖ್ಯಸ್ಥರ ಇಂತಹ ಹೇಳಿಕೆಗಳು ಅನೈತಿಕ ಗೂಂಡಾಗಿರಿಗೆ ಹೆಚ್ಚೆಚ್ಚು ಪ್ರೋತ್ಸಾಹ ಕೊಡುತ್ತದೆ ಮತ್ತು ಸಮಾಜದ ಸ್ವಾಸ್ಥ್ಯ ಕೆಡಿಸುವಂಥ ಇಂತಹ ಹೇಳಿಕೆಗಳು ಮತ್ತು ಕೃತ್ಯಗಳನ್ನು ನಾವು ಖಂಡಿಸುತ್ತೇವೆ ಎಂದು ಗೋಷ್ಠಿಯಲ್ಲಿ ಆಗ್ರಹಿಸಲಾಯಿತು.

ಹೀನಕೃತ್ಯ ಎಸಗಿದ ಹತ್ತೂ ಅಪರಾಧಿಗಳನ್ನು ಬಂಧಿಸಿರುವುದಕ್ಕೆ ಬೆಳಗಾವಿಯ ಜಿಲ್ಲಾ ಪೊಲೀಸ್ ತಂಡವನ್ನು ಈ ಸಂದರ್ಭದಲ್ಲಿ ನಾವು ಅಭಿನಂದಿಸುತ್ತೇವೆ ಎಂದರು.

ಅಲ್ಲದೆ ಇದೇ ಸಂದರ್ಭದಲ್ಲಿ ಬೆಳಗಾಂ ಪ್ರಕರಣದ ತನಿಖೆ ಹಾದಿ ಯಾವುದೇ ಕಾರಣಕ್ಕೂ ತಪ್ಪದಂತೇ ಎಚ್ಚರಿಕೆ ವಹಿಸಬೇಕು. ಅಪರಾಧಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಯಾವುದೇ ರಾಜಕೀಯ, ಕೋಮುಶಕ್ತಿಗಳ ಒತ್ತಡಕ್ಕೆ ಮಣಿಯಬಾರದು. ಕೊಲೆಯಾದ ಯುವಕನ ತಾಯಿಗೆ ಸೂಕ್ತ ಪರಿಹಾರವನ್ನು ಸರಕಾರ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಸೂಕ್ತ ರಕ್ಷಣೆ ನೀಡಬೇಕು. ಧರ್ಮ-ಧರ್ಮಗಳ ನಡುವೆ ವಿಷದ ಬೀಜವನ್ನು ಬಿತ್ತುತ್ತಿರುವ ಧರ್ಮಾಂಧ, ಬಲಪಂಥೀಯ ಮನುಷ್ಯ ವಿರೋಧೀ ಗುಂಪುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದೆಲ್ಲೆಡೆ ಯುವಜನರ ಮತ್ತು ಎಲ್ಲ ಧರ್ಮೀಯರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಸರಕಾರ ಬದ್ಧವಾಗಿರಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

ಗೋಷ್ಠಿಯಲ್ಲಿ ವಿಮಲಾ .ಕೆ.ಎಸ್., ಆಶಾ ರಮೇಶ್, ಶಿಲ್ಪಾ ಪ್ರಸಾದ್ ಮತ್ತಿತರರು ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *