ಬೆಂಗಳೂರು: ಅಕ್ಟೋಬರ್ 25ನೇ ತಾರೀಖಿನಿಂದ 1 ರಿಂದ 5ನೇ ತರಗತಿ ಶಾಲೆಗಳ ಆರಂಭವಾಗಲಿದೆ. ಶಾಲೆ ಆರಂಭಿಸುವುದಕ್ಕೆ ಶಿಕ್ಷಣ ಇಲಾಖೆ ತೀರ್ಮಾನಿಸಿದ್ದು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದ್ದರಿಂದ ಇಲಾಖೆಯು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಿಸಿದೆ.
ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರ ಅನುಮತಿ ಕಡ್ಡಾಯ ಎಂದು ತಿಳಿಸಲಾಗಿದೆ. ಶಿಕ್ಷಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂದೂ ಸಹ ಹೇಳಲಾಗಿದೆ. ತರಗತಿಯಲ್ಲಿ ಶೇಕಡಾ 50ರಷ್ಟು ಮಕ್ಕಳಿಗೆ ಮಾತ್ರ ಅವಕಾಶ ನೀಡಿ ಸದ್ಯ ಶಾಲೆ ತೆರೆಯಲಾಗುವುದು. ತರಗತಿಯಲ್ಲಿ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿತ ನಿಯಮಗಳನ್ನು ವಿಧಿಸಲಾಗಿದೆ.
ಮಾರ್ಗಸೂಚಿಯಲ್ಲಿನ ಪ್ರಮುಖ ಅಂಶಗಳು
- ಶೇ.50 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
- ಕೋವಿಡ್ ಮಾರ್ಗಸೂಚಿ ಕಡ್ಡಾಯ ಪಾಲನೆ
- ತರಗತಿಯಲ್ಲಿ 1 ಮೀಟರ್ ಅಂತರದಲ್ಲಿ ಮಕ್ಕಳನ್ನು ಕೂರಿಸಬೇಕು
- ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿ ಬಳಸಬೇಕು
- ಪೋಷಕರ ಅನುಮತಿ ಪಡೆದು ಮಕ್ಕಳು ಶಾಲೆಗೆ ಬರಬಹುದು
- ಪ್ರವೇಶ ದ್ವಾರ, ಆವರಣ ಹಾಗೂ ತರಗತಿಗಳ ಒಳಗೆ ಗುಂಪುಗೂಡುವಂತಿಲ್ಲ
- ಶಿಕ್ಷಕರು ಕೋವಿಡ್ ಲಸಿಕೆ ಎರಡು ಡೋಸ್ ಪಡೆದಿರಬೇಕು
ಈ ಬಗ್ಗೆ ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ದಸರಾ ಬಳಿಕ ಶಾಲೆ ಆರಂಭಿಸುವುದಾಗಿ ನಾವು ಹೇಳಿದ್ದೇವು. ಅದರಂತೆ ಶಾಲೆ ಆರಂಭವಾಗುತ್ತಿದೆ. ಆದರೆ, ಮಕ್ಕಳಿಗೆ ಹಾಜರಾತಿ ಕಡ್ಡಾಯ ಇರುವುದಿಲ್ಲ. ಶಾಲೆಗೆ ಹಾಜರಾಗಲು ಮಕ್ಕಳಿಗೆ ಒತ್ತಾಯವಿಲ್ಲ. ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರ ಒಪ್ಪಿಗೆ ಬೇಕು. ಜಾಗದ ಕೊರತೆ ಇರುವಲ್ಲಿ ಶೇ.50ರಷ್ಟು ಮಕ್ಕಳು ಮಾತ್ರ ಹಾಜರಾಗಬೇಕು ಎಂದು ಸಚಿವರು ತಿಳಿಸಿದ್ದಾರೆ.
ಸದ್ಯಕ್ಕೆ ಎಲ್ಕೆಜಿ-ಯುಕೆಜಿ ತರಗತಿ ಆರಂಭಿಸುವ ಬಗ್ಗೆ ಇಲಾಖೆ ನಿರ್ಧಾರ ಮಾಡಿಲ್ಲ. ಶೈಕ್ಷಣಿಕ ಶುಲ್ಕದ ಬಗ್ಗೆ ಕೋರ್ಟ್ನಿಂದ ಆದೇಶದ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಸೆಪ್ಟೆಂಬರ್ 23ರಿಂದ 9ರಿಂದ 12ನೇ ತರಗತಿ ಹಾಗೂ ಅಕ್ಟೋಬರ್ 6ರಿಂದ 6ರಿಂದ 8ನೇ ತರಗತಿ ಶಾಲೆಗಳನ್ನು ರಾಜ್ಯ ಸರ್ಕಾರ ಆರಂಭ ಮಾಡಿತ್ತು.
ಕೋವಿಡ್ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ
ಕೋವಿಡ್ ಹೊಸ ಮಾರ್ಗಸೂಚಿಯನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ಅದರಂತೆ ಈಜುಕೊಳ ಕಾರ್ಯಾಚರಣೆಗೆ ಕೆಲವು ನಿರ್ಬಂಧಗಳ ಅನುಸಾರ ತೆರೆಯಲು ಅನುಮತಿಸಿದೆ. ನೂತನ ಮಾರ್ಗಸೂಚಿಯಲ್ಲಿ ಶಾಲೆಗಳ ಆರಂಭದ ಬಗ್ಗೆಯೂ ಉಲ್ಲೇಖಿಸಲಾಗಿದೆ. ಈಜುಕೊಳಗಳಲ್ಲಿ ಶೇಕಡಾ 50 ರಷ್ಟು ಕಾರ್ಯಚಾರಣೆಗೆ ಅವಕಾಶ ನೀಡಲಾಗಿದೆ. ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ರಿಲ್ಯಾಕ್ಸೇಷನ್ ನೀಡಲಾಗಿದೆ. ಆದರೆ, ಯು.ಕೆ. ಪ್ರಯಾಣಿಕರಿಗೆ ಕ್ವಾರಂಟೈನ್ ನಿಯಮ ಮುಂದುವರಿಕೆ ಮಾಡಲಾಗಿದೆ.