ಪೆಟ್ರೋಲ್-ಡೀಸೆಲ್ ಬೆಲೆ ಕಡಿತಗೊಳಿಸದಿದ್ದರೆ ಅನಿರ್ದಿಷ್ಟಾವಧಿ ಲಾರಿ ಮುಷ್ಕರ: ಷಣ್ಮುಗಪ್ಪ

ಬೆಂಗಳೂರು: ಪ್ರತಿನಿತ್ಯ ಸತತವಾಗಿ ಬೆಲೆ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ದರಗಳನ್ನು ಕೂಡಲೇ ಇಳಿಕೆ ಮಾಡಿ ದೇಶದ ಜನತೆಗೆ ಅನುಕೂಲತೆ ಒದಗಿಸಬೇಕೆಂದು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಲಾರಿ ಮಾಲೀಕರ ಸಂಘ ನಿರ್ಧರಿಸಿದೆ.

ರಾಜ್ಯಾದ್ಯಂತ ಲಾರಿ ಮುಷ್ಕರದ ಬಗ್ಗೆ ಅಕ್ಟೋಬರ್ 23ರಂದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಲಾರಿ ಮಾಲೀಕರ ಸಂಘ ನಿರ್ಧರಿಸಿದೆ. ಅಕ್ಟೋಬರ್ 23ರ ರೊಳಗೆ ರಾಜ್ಯ ಸರ್ಕಾರ ಡೀಸೆಲ್ ಮೇಲೆ ವಿಧಿಸಿರುವ ವ್ಯಾಟ್ ಕಡಿಮೆ ಮಾಡಿದರೆ ಮಾತ್ರ ಲಾರಿಗಳು ರಸ್ತೆಗೆ ಇಳಿಯುತ್ತವೆ. ಇಲ್ಲವಾದಲ್ಲಿ ಸರಕು ಸಾಗಾಣಿಕೆ ಭಾರೀ ವಾಹನಗಳು ಓಡಾಟವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.

ಇದನ್ನು ಓದಿ: ಗ್ರಾಹಕರಿಗೆ ಮತ್ತಷ್ಟು ಹೊರೆ: ₹900ರ ಸಮೀಪ ಸಿಲಿಂಡರ್‌ ದರ-ಪೆಟ್ರೋಲ್‌ ಸಹ ದುಬಾರಿ

ಕೊರೊನಾ ಹಿನ್ನೆಲೆಯಲ್ಲೂ ಕೂಡ ಲಾರಿ ಉದ್ಯಮ ಸಂಕಷ್ಟಕ್ಕೀಡಾಗಿದ್ದು, ಸಾಲ ಮರುಪಾವತಿಸಲಾಗದೆ ಸುಮಾರು 60 ಸಾವಿರಕ್ಕೂ ಹೆಚ್ಚು ಲಾರಿಗಳನ್ನು ಫೈನಾನ್ಸ್‍ನವರು ವಶಕ್ಕೆ ಪಡೆದಿದ್ದಾರೆ. ಇರುವ ಲಾರಿಗಳು ಡೀಸೆಲ್ ದರ ತೆರಲಾಗದೆ ನಿಂತಿವೆ. ರಾಜ್ಯದಲ್ಲಿ ಸುಮಾರು ನಾಲ್ಕೂವರೆ ಲಕ್ಷ ಲಾರಿಗಳಿದ್ದು, ಇಂಧನದ ದರ ಏರಿಕೆಯಿಂದ ಈ ಉದ್ಯಮಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಲಾರಿ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಚಾಲಕ, ಕ್ಲೀನರ್, ಹಮಾಲಿಗಳು ಸೇರಿದಂತೆ ಸುಮಾರು 60 ಲಕ್ಷ ಈ ಉದ್ಯಮವನ್ನು ನಂಬಿ ಬದುಕುತ್ತಿದ್ದಾರೆ. ಡೀಸೆಲ್ ದರ ಏರಿಕೆಯಿಂದ ಉದ್ಯಮಕ್ಕೆ ಸಾಕಷ್ಟು ನಷ್ಟ ಉಂಟಾಗಿದ್ದು, ಸಂಕಷ್ಟಕ್ಕೀಡಾಗಿದ್ದೇವೆ. ಸರ್ಕಾರ ಕೂಡಲೇ ನೆರವಿಗೆ ಬರಬೇಕು ಎಂದು ಷಣ್ಮುಗಪ್ಪ ಹೇಳಿದರು.

ಡೀಸೆಲ್ ಬೆಲೆ ಏರಿಕೆಯಿಂದ ಬಾಡಿಗೆ ಸಿಗುವುದು ದುಸ್ತರವಾಗಿದೆ. ಸಾವಿರಾರು ಲಾರಿಗಳು ಬಾಡಿಗೆ ಇಲ್ಲದೆ ನಿಂತಲ್ಲೇ ನಿಂತಿವೆ, ತೈಲ ಬೆಲೆ ಇಳಿಸಬೇಕು ಇಲ್ಲವೆ ತೈಲದ ಮೇಲಿನ ತೆರಿಗೆ ಕಡಿತಗೊಳಿಸಬೇಕು ಎಂಬುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲು ತಯಾರಿ ನಡೆಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಲು ಸರ್ಕಾರಕ್ಕೆ ಮುಂದಿನ ವಾರದ ವರೆಗೆ ಕಾಲಾವಕಾಶ ನೀಡಿರುವ ಲಾರಿ ಮಾಲೀಕರ ಸಂಘವು ಸರಕು ಸಾಗಣಿಕೆ ಲಾರಿಗಳ ಓಡಾಟ ಸ್ಥಗಿತವಾದರೆ ಎಲ್ಲ ರೀತಿಯ ವಸ್ತುಗಳ ಸರಬರಾಜು ಬಂದ್ ಆಗಲಿದೆ ಎಂದು ಎಚ್ಚರಿಸಿದೆ.

ಡೀಸೆಲ್‍ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ನಮಗೆ ಅನುಕೂಲವಾಗುತ್ತದೆ. ಆದರೆ, ತೆರಿಗೆ ಹೆಚ್ಚು ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಈಗಾಗಲೇ ಒಂದು ವರ್ಷದಲ್ಲಿ ರೂ.26 ದರ ಹೆಚ್ಚಳವಾಗಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಲಾರಿ ಮುಷ್ಕರ ನಡೆಸಲು ಚಿಂತನೆ ನಡೆಸಿರುವ ಲಾರಿ ಮಾಲೀಕರ ಸಂಘ ಆಳುವ ಸರ್ಕಾರ ನೀತಿಗಳ ವಿರುದ್ಧ ಧ್ವನಿ ಎತ್ತಿದೆ.

ಲಾರಿ ಮುಷ್ಕರವಾದರೆ ಜನಜೀವನ ಅಸ್ತವ್ಯಸ್ತವಾಗುತ್ತದೆ. ಅಗತ್ಯ ವಸ್ತುಗಳ ಬೆಲೆ ಈಗಾಗಲೇ ಹೆಚ್ಚಾಗಿದೆ. ಹಾಲು, ಹಣ್ಣು, ತರಕಾರಿ, ಹೂ, ದಿನಸಿ ಪದಾರ್ಥಗಳು ಸೇರಿದಂತೆ ಎಲ್ಲ ಸರಕು ಸಾಗಾಣಿಕೆಗೆ ಸಮಸ್ಯೆಯಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *