ನವದೆಹಲಿ: ಅಕ್ಟೋಬರ್ 3ರಂದು ಲಖೀಂಪುರ್ ಖೇರಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರನ್ನು ತರಿದು ಹಾಕುವ ಬರ್ಬರ ಅತ್ಯಾಚಾರದಲ್ಲಿ ನೇರ ಹೊಣೆಯಿರುವ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಮಂತ್ರಿ ಅಜಯ್ ಮಿಶ್ರ ತೇನಿಯವರನ್ನು ವಜಾ ಮಾಡಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ.
ಕಾನೂನು ವ್ಯವಸ್ಥೆಯನ್ನು ರಕ್ಷಿಸುವ ಆದೇಶವಿರುವ ಒಂದು ಅತ್ಯಂತ ಸೂಕ್ಷ್ಮ ಮಂತ್ರಾಲಯದಲ್ಲಿ ಒಬ್ಬ ಮಂತ್ರಿಯಾಗಿರುವ ಈತನೇ ಸಪ್ಟಂಬರ್ 25ರಂದು ಎಲ್ಲ ನೀತಿ-ನಿಯಮಗಳನ್ನು ಉಲ್ಲಂಘಿಸಿ ಒಂದು ಅತ್ಯಂತ ಉದ್ರೇಕಕಾರೀ ಭಾಷಣವನ್ನು ಮಾಡಿದರು, ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಬೆದರಿಸುವ, ಅವರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಭಾಷಣವದು.
ಈ ಹತ್ಯೆಗಳ ನಂತರವೂ, ಆತನ ಮಗ ಇದರಲ್ಲಿ ಇದ್ದರೂ, ಆತ ಈ ಅತ್ಯಾಚಾರವನ್ನು ಸಮರ್ಥಿಸಿಕೊಂಡಿದ್ದಾರೆ, ರೈತರನ್ನು ದೂಷಿಸಿದ್ದಾರೆ. ಬೆಂಗಾವಲು ವಾಹನಗಳು ಸೈರನ್ ಬಾರಿಸುತ್ತ ರೈತರ ಮೇಲೆ ನುಗ್ಗಿ ಸಾಯಿಸಿರುವ ಸ್ಪಷ್ಟ ವೀಡಿಯೋ ಸಾಕ್ಷ್ಯವಿದೆ. ಗಾಯಗೊಂಡವರು ಮತ್ತು ಕೊಲ್ಲಲ್ಪಟ್ಟವರು “ಹೊರಗಿನವರು”, ಎಂದು ಆಪಾದಿಸುವವರೆಗೂ ಈ ಮಂತ್ರಿ ಹೋಗಿದ್ದಾರೆ. ಇದರಲ್ಲಿ “ಖಾಲಿಸ್ತಾನಿ’ ಮಂದಿ ಶಾಮೀಲಾಗಿದ್ದಾರೆ ಎಂದು ತನ್ನನ್ನು ಮತ್ತು ತನ್ನ ಸಂಬಂಧಿಕರನ್ನು ರಕ್ಷಿಸಿಕೊಳ್ಳಲು ಅವರು ಹೇಳಿಕೊಂಡಿದ್ದಾರೆ.
ಆತ ಗೃಹ ರಾಜ್ಯಮಂತ್ರಿಯಾಗಿ ಇರುವಾಗ ಒಂದು ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಆದಿತ್ಯನಾಥ ಸರಕಾರ ಪ್ರಜಾಪ್ರಭುತ್ವಕ್ಕೆ ಬೀಗ ಹಾಕಿರುವುದು, ದುಃಖತಪ್ತ ಕುಟುಂಬದವರನ್ನು ಭೇಟಿಯಾಗಲು ಹೊರಟಿರುವ ಪ್ರತಿಪಕ್ಷಗಳ ಮುಖಂಡರನ್ನು ಬಂಧಿಸಿರುವುದು ಅತ್ಯಂತ ಖಂಡನಾರ್ಹ ಎಂದಿದೆ. ಅವರನ್ನು ಬಿಡುಗಡೆ ಮಾಡಬೇಕು ಮತ್ತು ಗಾಯಗೊಂಡವರ ಕುಟುಂಬಗಳನ್ನು ಭೇಟಿಯಾಗಲು ಮುಕ್ತ ಓಡಾಟಕ್ಕೆ ಅವಕಾಶವಿರಬೇಕು ಎಂದು ಆಗ್ರಹಿಸಿದೆ.