ಬೆಂಗಳೂರು: ಕೋವಿಡ್ನಿಂದ ಮೃತಪಟ್ಟ 1200 ಮಂದಿಯನ್ನು ಅನಾಥರು ಎಂದು ಪರಿಗಣಿಸಿ ಅವರ ಪಿಂಡ ಪ್ರದಾನ ಮಾಡಿ ಪ್ರಚಾರ ಪಡೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಜನರಿಗೆ ನೆರವಾಗುವ ಮನಸ್ಸಿದ್ದರೆ, ಕೋವಿಡ್ನಿಂದ ಮೃತಪಟ್ಟ ಎಲ್ಲರಿಗೂ ಯಾವುದೇ ಷರತ್ತು ಇಲ್ಲದೇ, ಅವರ ಮನೆ ಬಾಗಿಲಿಗೆ ಕೋವಿಡ್ ಮರಣ ಪ್ರಮಾಣಪತ್ರ ನೀಡಲಿ. ಜತೆಗೆ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಿ’ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಆರೋಗ್ಯ ಸಚಿವ ಸುಧಾಕರ್ ಅವರಿಗೆ ಕೇಂದ್ರ ಸರ್ಕಾರ ಅತ್ಯುತ್ತಮ ರೀತಿಯಲ್ಲಿ ಕೋವಿಡ್ ನಿರ್ವಹಣೆ ಪ್ರಮಾಣಪತ್ರ ನೀಡಿದೆ. ಯಾವ ಮಾನದಂಡದ ಆಧಾರದ ಮೇಲೆ ಈ ಪ್ರಶಸ್ತಿ ಕೊಟ್ಟಿದ್ದಾರೋ ಗೊತ್ತಿಲ್ಲ. ಬೆಂಗಳೂರಿನಲ್ಲಿ ಕಂಡುಕೇಳರಿಯದಷ್ಟು ಅವಾಂತರ ಕಂಡಿದ್ದರೂ ಯಾವ ಕಾರಣಕ್ಕೆ ಈ ಪ್ರಶಸ್ತಿ ಕೊಟ್ಟಿದ್ದಾರೆ ಎಂಬ ಪ್ರಶ್ನೆ ಇದೆ ಎಂದು ಆರೋಪಿಸಿದರು.
ಆರ್. ಅಶೋಕ್, ಸುಧಾಕರ್ ಮತ್ತು ಅವರ ಸರ್ಕಾರ ಪ್ರಚಾರಕ್ಕಾಗಿ ಪಿಂಡ ಪ್ರದಾನ ಮಾಡುವುದು, ಪ್ರಶಸ್ತಿ ಪಡೆಯುವುದನ್ನು ಬಿಟ್ಟು ಜನರ ಕಷ್ಟಕ್ಕೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ನೆರವಾಗಿತ್ತು. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆ ಸಲ್ಲಿಸಬೇಕು ಎಂದು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಕೋವಿಡ್ ನಿಂದ ರಾಜ್ಯದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದು, ಸರ್ಕಾರ ಮಾತ್ರ 37 ಸಾವಿರ ಜನ ಮೃತಪಟ್ಟಿದ್ದಾರೆ ಎಂಬ ಸುಳ್ಳು ಲೆಕ್ಕ ನೀಡುತ್ತಿದೆ. ಆರೋಗ್ಯ ಇಲಾಖೆ ಕಾರ್ಯದರ್ಶಿಗಳು 18 ವರ್ಷಕ್ಕಿಂದ ಕೆಳಗಿನವರರು ಕೋವಿಡ್ ನಿಂದ ಮೃತಪಟ್ಟರೆ ಅವರಿಗೆ ಪರಿಹಾರ ಇಲ್ಲ ಎಂದು ಹೇಳಿದ್ದಾರೆ. ಯುವ ಪೀಳಿಗೆ ನಮ್ಮ ದೇಶದ ಭವಿಷ್ಯ ಎಂದು ನಾವು ಭಾವಿಸುತ್ತೇವೆ. ಆದರೆ ಈ ಸರ್ಕಾರಕ್ಕೆ ಅವರ ಪ್ರಾಣ ಲೆಕ್ಕಕ್ಕೇ ಇಲ್ಲವಾಯಿತೆ? ಇದೆಂತಾ ಸರ್ಕಾರ ಎಂದು ಚಲುವರಾಯಸ್ವಾಮಿ ಪ್ರಶ್ನೆ ಮಾಡಿದರು.
ಕೋವಿಡ್ ನಿಂತ ಮೃತಪಟ್ಟವರ ಹೆಸರನ್ನು ಐಸಿಎಂಆರ್ ನಲ್ಲಿ ನೋಂದಣಿ ಮಾಡಿಸಬೇಕು ಎಂದು ಸರ್ಕಾರ ಹೇಳಿದೆ. ಈ ನೋಂದಣಿ ಯಾರು ಮಾಡಬೇಕು? ಇದು ಸರ್ಕಾರಿ ಇಲಾಖೆ ಅಧಿಕಾರಿಗಳ ಕೆಲಸ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಈಗ ನೋಂದಣಿಯಾಗದಿದ್ದರೆ ಪರಿಹಾರ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರ ಕೋವಿಡ್ ಸಾವಿನ ಆಡಿಟ್ ಮಾಡಿಲ್ಲ.
ಕಾಂಗ್ರೆಸ್ ಪಕ್ಷವು ಕೋವಿಡ್ ನಿಂದ ಮೃತಪಟ್ಟ ಎಲ್ಲರಿಗೂ ತಲಾ 5 ಲಕ್ಷ ಪರಿಹಾರ ನೀಡಬೇಕು. ಸತ್ತವರಿಗೆ ಆರೋಗ್ಯ ಹಾಗೂ ಕಂದಾಯ ಇಲಾಖೆಯಿಂದ ನೇರವಾಗಿ ಅವರ ಮನೆಗೆ ಕೋವಿಡ್ ಮರಣ ಪ್ರಮಾಣ ಪತ್ರ ಸಿಗುವಂತಾಗಬೇಕು. ಇದರಿಂದ ಸಂತ್ರಸ್ತರ ಕುಟುಂಬ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.