ಪ್ರಕಾಶ ಕಾರಟ್
ವಿಶ್ವ ಸಂಸ್ಥೆಯ ಭಾಷಣದಲ್ಲಿ ಮಾಮೂಲಿ ಸ್ವಯಂ-ಪ್ರಾಯೋಜನೆ ಮತ್ತು ಭಾರತವು ಪ್ರಜಾಪ್ರಭುತ್ವದ ತಾಯಿ ನಾಡು ಎಂಬಿತ್ಯಾದಿ ಅಬ್ಬರದ ಹೇಳಿಕೆಗಳನ್ನು ಬಿಟ್ಟರೆ ಹೇಳಿಕೊಳ್ಳುವಂಥದ್ದು ಏನೂ ಇರಲಿಲ್ಲ. ಸಭೆಗಳ ನಂತರ ಹೊರಡಿಸಲಾದ ಜಂಟಿ ಹೇಳಿಕೆಗಳನ್ನು ವಿಶ್ಲೇಷಿಸಿದರೆ ಭಾರತದ ವ್ಯೂಹಾತ್ಮಕ ಸ್ವಾಯತ್ತತೆಯನ್ನು ಕಾಯ್ದುಕೊಳ್ಳಲು ಈ ಸರ್ಕಾರಕ್ಕೆ ಆಸಕ್ತಿಯಿಲ್ಲ ಎನ್ನುವುದೇ ಮೋದಿಯವರ ಅಮೆರಿಕ ಭೇಟಿಯ ಫಲಶ್ರುತಿಯಾಗಿರುವಂತೆ ಕಾಣುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯಲ್ಲಿ ಮೂರು ಪ್ರಮುಖ ಘಟನೆಗಳಿದ್ದವು. ಜೋ ಬೈಡೆನ್ ಜೊತೆ ಪ್ರಥಮ ಮುಖತಃ ಭೇಟಿ, ಕ್ವಾಡ್ ದೇಶಗಳ ನಾಯಕರೊಂದಿಗೆ ಸಭೆ ಮತ್ತು ವಿಶ್ವ ಸಂಸ್ಥೆ ಮಹಾಧಿವೇಶನದಲ್ಲಿ ಭಾಷಣ-ಇವೇ ಆ ಮೂರು ಘಟನೆಗಳು.
ಭಾರತದ ಸಾಕು ಮಾಧ್ಯಮ ಮೋದಿ ಭೇಟಿಯನ್ನು ರಂಗುರಂಗಾಗಿ ಚಿತ್ರಿಸಿದೆ. ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಕ್ವಾಡ್ ಮೀಟಿಂಗ್ ಫಲಶ್ರುತಿ ಬಗ್ಗೆ ಸರ್ಕಾರ ಒದಗಿಸಿದ ಮಾಹಿತಿಗಳನ್ನು ಮಾಧ್ಯಮಗಳು ಒಂದಿಷ್ಟು ಕೂಡ ಟೀಕೆ ಟಿಪ್ಪಣಿಯಿಲ್ಲದೆ ಯಥಾವತ್ ಪ್ರಕಟಿಸಿವೆ, ಬಿತ್ತರಿಸಿವೆ. ಮೋದಿ ಪಾತ್ರ ಮತ್ತು ಭೇಟಿಯಿಂದ ಆಗಿರುವ ಲಾಭಗಳ ಬಗ್ಗೆ ಕಾರ್ಪೊರೇಟ್ ಮಾಧ್ಯಮಗಳು ಪಾಸಿಟಿವ್ ವರದಿಗಳನ್ನು ನೀಡಿವೆ.
ವಿಶ್ವ ಸಂಸ್ಥೆಯ ಮಹಾಧಿವೇಶನದ ಭಾಷಣದಲ್ಲಿ ಮಾಮೂಲಿ ಸ್ವಯಂ-ಪ್ರಾಯೋಜನೆ ಮತ್ತು ಭಾರತವು ಪ್ರಜಾಪ್ರಭುತ್ವದ ತಾಯಿ ನಾಡು ಎಂಬಿತ್ಯಾದಿ ಅಬ್ಬರದ ಹೇಳಿಕೆಗಳನ್ನು ಬಿಟ್ಟರೆ ಹೇಳಿಕೊಳ್ಳುವಂಥದ್ದು ಏನೂ ಇರಲಿಲ್ಲ. ಏನಿದ್ದರೂ ಸಭೆಗಳ ನಂತರ ಹೊರಡಿಸಲಾದ ಜಂಟಿ ಹೇಳಿಕೆಗಳನ್ನು ಹಾಗೂ ಭೇಟಿಯ ಫಲಶ್ರುತಿಯನ್ನು ವಿಶ್ಲೇಷಿಸಿದರೆ ತುಂಬಾ ವಿಭಿನ್ನವಾದ ಚಿತ್ರಣ ದೊರೆಯುತ್ತದೆ.
ಬೈಡೆನ್-ಮೋದಿ ಮುಖಾಮುಖಿ ಭೇಟಿಯ ನಂತರ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಹೊಸ ಉಪಕ್ರಮಗಳೇನೂ ಕಂಡುಬಂದಿಲ್ಲ. ಭಾರತ ಒಂದು ಪ್ರಮುಖ ರಕ್ಷಣಾ ಪಾಲುದಾರನ ನೆಲೆಯಲ್ಲಿ ಅದರೊಂದಿಗಿನ ನಿಕಟ ರಕ್ಷಣಾ ಭಾಗಿದಾರಿಕೆ ಬಗ್ಗೆ ಬೈಡೆನ್ ಕಡೆಯಿಂದ ಒತ್ತು ಇದೆ. ಸಾಗಾಟ ಮತ್ತು ಮಿಲಿಟರಿ-ಮಿಲಿಟರಿ ಸಂವಹನ ಹಂಚಿಕೊಳ್ಳುವಿಕೆ, ಮುಂದುವರಿದ ಮಿಲಿಟರಿ ತಂತ್ರಜ್ಞಾನದಲ್ಲಿ ಸಹಕಾರವನ್ನು ಬಲಗೊಳಿಸುವುದು ಮತ್ತು ರಕ್ಷಣಾ ವಾಣಿಜ್ಯ ಹಾಗೂ ಸಹ-ಉತ್ಪಾದನೆ ವಿಚಾರದಲ್ಲಿ ಕೆಲವು ಉಲ್ಲೇಖಗಳು ಸಂಯುಕ್ತ ಹೇಳಿಕೆಯಲ್ಲಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಪ್ರಾದೇಶಿಕ ಪಾಲುದಾರರೊಂದಿಗೆ ಸಹಕರಿಸುವುದು ಸೇರಿದಂತೆ ಬಹುಪಕ್ಷೀಯ ರಕ್ಷಣಾ ವೇದಿಕೆಗಳನ್ನು ವಿಸ್ತರಿಸಲು ಕೂಡ ಇದರಲ್ಲಿ ಒಂದು ಉಲ್ಲೇಖವಿದೆ. ಇದು ಅಮೆರಿಕ ಮತ್ತು ಕ್ವಾಡ್ನಂಥ ಅದರ ಮಿತ್ರ ದೇಶಗಳ ಜೊತೆ ವಿಸ್ತೃತ ಮಿಲಿಟರಿ ಮತ್ತು ಭದ್ರತಾ ಒಪ್ಪಂದಗಳಿಗೆ ಭಾರತವನ್ನು ಸೆಳೆಯುವ ಸ್ಪಷ್ಟ ಸೂಚನೆಯಾಗಿದೆ.
ದ್ವಿಪಕ್ಷೀಯ ವಾಣಿಜ್ಯ ಮಾತುಕತೆ ವಿಚಾರದಲ್ಲಿ ಬೈಡೆನ್ ಆಡಳಿತಕ್ಕೆ ಒಲವು ಇಲ್ಲದಿರುವುದರಿಂದ ಈ ವಿಷಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಈ ಸಂಬಂಧದಲ್ಲಿ ಇರುವ ಒಂದೇ ಭರವಸೆದಾಯಕ ವಿಚಾರವೆಂದರೆ 2021ರ ಕೊನೆಯೊಳಗೆ ಭಾರತ-ಅಮೆರಿಕ ವಾಣಿಜ್ಯ ನೀತಿ ವೇದಿಕೆಯ ಸಭೆ ಮತ್ತೆ ನಡೆಸುವುದಾಗಿದೆ. ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟ, ನಿರ್ಣಾಯಕ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳು, ತಂತ್ರಜ್ಞಾನ ಸಂಬಂಧೀ ಸಹಕಾರ, ತಾಪಮಾನ ಬದಲಾವಣೆಯ ಸವಾಲು ಮೊದಲಾದ ವಿಚಾರಗಳಲ್ಲಿ ಹಿಂದೆ ಹೇಳಿದ್ದನ್ನೇ ಈಗಲೂ ಪುನರುಚ್ಚರಿಸಲಾಗಿದೆ.
ಅಧ್ಯಕ್ಷ ಬೈಡೆನ್, ನಿಯೋಗ ಮಟ್ಟದ ಮಾತುಕತೆಯ ನೇತೃತ್ವ ವಹಿಸಿರಲಿಲ್ಲ. ಅದನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ರಿಗೆ ವಹಿಸಿದ್ದರು ಎನ್ನುವುದು ಇಲ್ಲಿ ಗಮನಾರ್ಹ.
ಕ್ವಾಡ್ ನಾಯಕರ ಸಭೆಯು ಚತುಷ್ಪಕ್ಷೀಯ ಮೈತ್ರಿಕೂಟವನ್ನು ಕ್ರೋಡೀಕರಿಸುವತ್ತ ಒಂದು ಹೆಜ್ಜೆ. ಇದು ಕ್ವಾಡ್ ಸದಸ್ಯ ರಾಷ್ಟ್ರಗಳಾದ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾಗಳ ನಾಯಕರ ನಡುವಿನ ಮೊದಲ ನೇರ ಸಭೆಯಾಗಿತ್ತು. ಮಾರ್ಚ್ನಲ್ಲಿ ಆನ್ಲೈನ್ ಸಭೆ ನಡೆದಿತ್ತು. ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಅಮೆರಿಕ ಒಳಗೊಂಡ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟ ಔಕುಸ್ (ಎಯುಕೆಯುಎಸ್) ರಚನೆಯ ಘೋಷಣೆಯಾದ ಕೆಲವೇ ದಿನಗಳಲ್ಲಿ ಕ್ವಾಡ್ ಸಭೆ ನಡೆದಿದೆ. ಆಸ್ಟ್ರೇಲಿಯಾವನ್ನು ನ್ಯೂಕ್ಲಿಯರ್ ಶಕ್ತಿ ಚಾಲಿತ ಜಲಾಂತರ್ಗಾಮಿಗಳೊಂದಿಗೆ ಸಜ್ಜುಗೊಳಿಸುವ ಉದ್ದೇಶ ಹೊಂದಿರುವ ಈ ಹೊಸ ಕೂಟವು ಚೀನಾದ ವಿರುದ್ಧ ನಿರ್ದೇಶಿತ ಎನ್ನುವುದು ಸ್ಪಷ್ಟವಾಗಿದೆ. ಇಂಥ ಉಪಕ್ರಮದ ನಂತರ ಕ್ವಾಡ್ನ ಪಾತ್ರವೇನು ಎಂಬುದರ ಬಗ್ಗೆ ಸಾಕಷ್ಟು ಊಹಾಪೋಹ ಹುಟ್ಟಿಕೊಂಡಿದೆ. ಡೀಸೆಲ್ ಚಾಲಿತ ಸಬ್ಮೆರಿನ್ ಸರಬರಾಜಿಗೆ ಫ್ರಾನ್ಸ್ನೊಂದಿಗೆ ಆಸ್ಟ್ರೇಲಿಯಾ ಒಪ್ಪಂದ ಮಾಡಿಕೊಂಡಿದ್ದಿದೆ. ಆದರೆ, ಫ್ರಾನ್ಸ್ ಅನ್ನು ಕೂಡ ಕತ್ತಲಲ್ಲಿ ಇಡಲಾಗಿದೆ. ಮಾತ್ರವಲ್ಲದೆ ಭಾರತ ಮತ್ತು ಜಪಾನ್ ದೇಶಗಳನ್ನು ಕೂಡ ಈ ಹೊಸ ಮಿಲಿಟರಿ ಕೂಟದ ಬಗ್ಗೆ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ. ಔಕುಸ್ನಲ್ಲಿ ಕ್ವಾಡ್ನ ಎರಡು ಸದಸ್ಯ ದೇಶಗಳು (ಅಮೆರಿಕ, ಆಸ್ಟ್ರೇಲಿಯಾ) ಕೂಡ ಇವೆ.
ಬಹಳ ಕಾಲದಿಂದ ಅಮೆರಿಕದೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಪ್ರತಿಪಾದಿಸುತ್ತಿರುವ ಭಾರತದ ಸಾಮರಿಕ ವ್ಯವಸ್ಥೆಯು ಇದರಿಂದ ಅಂತದ್ದೇನೂ ತೊಂದರೆಯಾಗಿಲ್ಲ ಎಂದು ನಟಿಸಲು, ಈ ಹೊಸ ಮೈತ್ರಿಕೂಟವು ಕೋವಿಡ್ ವ್ಯಾಕ್ಸಿನ್ ಸಹಕಾರ, ಪ್ರಮುಖ ತಂತ್ರಜ್ಞಾನ ಹಾಗೂ ಸರಬರಾಜು ಸರಪಣಿಗೆ ಉತ್ತೇಜನ ಮತ್ತು ಆರ್ಥಿಕ ಸಮನ್ವಯ ಬಲಪಡಿಸುವಿಕೆ ಮುಂತಾದ ಮಿಲಿಟರಿಯೇತರ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲು ಕ್ವಾಡ್ಗೆ ನೆರವಾಗುತ್ತದೆ ಎಂದು ಬಿಂಬಿಸಲು ಪ್ರಯತ್ನಿಸಿದೆ.
ಕ್ವಾಡ್ ಸಭೆಯ ನಂತರ ನೀಡಲಾದ ಸಂಯುಕ್ತ ಹೇಳಿಕೆಯು ಈ ವಿಚಾರಗಳಲ್ಲಿ ಯಾವುದೇ ಸ್ಪಷ್ಟನೆ ಒದಗಿಸಿಲ್ಲ. ಭಾರತ-ಶಾಂತಸಾಗರ ವಲಯದಲ್ಲಿ ಸ್ವತಂತ್ರ, ಮುಕ್ತ, ಕಾನೂನು ಸಮ್ಮತ ಆಡಳಿತ ಅವಶ್ಯ ಎಂಬ ಮೂಲ ಉದ್ದೇಶವನ್ನು ಹೇಳಿಕೆ ಮತ್ತೆ ಒತ್ತಿ ಹೇಳಿದೆ. ಇದು ಮೈತ್ರಿಕೂಟದ ಭದ್ರತಾ ಕಳವಳವನ್ನು ಎತ್ತಿ ತೋರಿಸುತ್ತದೆ. ಲಸಿಕೆ ಸಹಕಾರದ ಬಗ್ಗೆ ಹೇಳುವುದಾದರೆ, ಕ್ವಾಡ್ ಲಸಿಕೆ ಪಾಲುದಾರಿಕೆಯ ವೈಫಲ್ಯವನ್ನು ಹೇಳಿಕೆ ಮುಚ್ಚಿಹಾಕಿದೆ. ಮಾರ್ಚ್ ಸಭೆಯಲ್ಲಿ ನಿರ್ಧರಿಸಿದಂತೆ ಇಂಡೊ-ಪೆಸಿಫಿಕ್ ವಲಯಕ್ಕೆ ನೂರು ಕೋಟಿ ಡೋಸ್ ಲಸಿಕೆಯನ್ನು ಕ್ವಾಡ್ ಲಸಿಕೆ ಪಾಲುದಾರಿಕೆ ಒಪ್ಪಂದದ ಪ್ರಕಾರ ಸರಬರಾಜು ಮಾಡಬೇಕಿತ್ತು. ಅಭಿವೃದ್ಧಿಶೀಲ ದೇಶಗಳಿಗೆ ತನ್ನ ಸಂಗ್ರಹದಲ್ಲಿರುವ ಲಸಿಕೆ ಪೂರೈಸಲು ಅಮೆರಿಕ ನಿರಾಕರಿಸಿದೆ. ಬಯಾಲಾಜಿಕಲ್-ಇ ಸಂಸ್ಥೆಯಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯನ್ನು ಉತ್ಪಾದಿಸುವ ಹಾಗೂ ರಫ್ತು ಮಾಡುವ ಹೊಣೆಯನ್ನು ಭಾರತಕ್ಕೆ ವಹಿಸಲಾಗಿತ್ತು. ಈ ವಿಚಾರದಲ್ಲಿ ಭಾರತ ಭಾರಿ ವೈಫಲ್ಯ ಕಂಡಿದೆ. ಅದು ಎಲ್ಲ ಲಸಿಕೆಗಳನ್ನು ರಫ್ತು ಮಾಡುವುದನ್ನು ನಿಲ್ಲಿಸಬೇಕಾಗಿದೆ. ಬಯಾಲಾಜಿಕಲ್-ಇ ನಲ್ಲಿ ಉತ್ಪಾದನೆಯಾಗುವ ವ್ಯಾಕ್ಸಿನನ್ನು ಈ ವರ್ಷಾಂತ್ಯ ರಫ್ತು ಮಾಡಲಾಗುತ್ತದೆ ಎಂದು ಭಾರತ ಈಗ ಆಶ್ವಾಸನೆ ನೀಡಿದೆ. ಚೀನಾದ ವ್ಯಾಕ್ಸಿನ್ ರಾಜತಾಂತ್ರಿಕತೆಯನ್ನು ಎದುರಿಸುವ ಭಾರತದ ಉದ್ದೇಶ ಈಗಾಗಲೇ ವಿಫಲಗೊಂಡಿದೆ. ಯಾಕೆಂದರೆ ಕಳೆದ ಕೆಲವು ತಿಂಗಳಲ್ಲಿ ಇಂಡೋನೇಶ್ಯಾ, ಫಿಲಿಪ್ಪೀನ್ಸ್ ಮತ್ತು ಥಾಯ್ಲ್ಯಾಂಡ್ನಂಥ ಆಸಿಯಾನ್ ದೇಶಗಳಿಗೆ ಚೀನಾ ಕೋಟ್ಯಂತರ ಡೋಸ್ ಲಸಿಕೆಯನ್ನು ರಫ್ತು ಮಾಡಿದೆ.
ತುಂಬಾ ನಿರ್ಣಾಯಕ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರ ಮತ್ತು ಸರಬರಾಜು ಸರಪಣಿ ಅಭಿವೃದ್ಧಿಪಡಿಸುವ ಬಗ್ಗೆ ಸಹಕಾರದ ಸಾಮಾನ್ಯ ಹೇಳಿಕೆಗಳು ಬಂದಿವೆ. ಹೊಸ ಕ್ವಾಡ್ ಮೂಲಸೌಕರ್ಯ ಪಾಲುದಾರಿಕೆ ಬಗ್ಗೆ ಒಂದು ಅಸ್ಪಷ್ಟ ಘೋಷಣೆ ಮಾಡಲಾಗಿದೆ. ಬೆಲ್ಟ್ ಅಂಡ್ರೋಡ್ ಉಪಕ್ರಮವನ್ನು ಎದುರಿಸುವ ಈ ಉಪಕ್ರಮವು ಯಾವುದೇ ನಿರ್ದಿಷ್ಟ ಯೋಜನೆ ಇಲ್ಲದಿರುವುದರಿಂದ ಮೇಲೇಳುವಂತೆಯೇ ಕಾಣುತ್ತಿಲ್ಲ.
‘ರಾಜತಾಂತ್ರಿಕತೆಯಲ್ಲಿ, ಹೇಳಲು ಏನೂ ಗಟ್ಟಿಯಾದ್ದು ಇಲ್ಲದಿರುವಾಗ ಗಾಳಿಯಲ್ಲಿ ತೇಲಿಬಿಡುವ ದೀರ್ಘ ಹೇಳಿಕೆಗಳು ಅಗತ್ಯವಾಗಿ ಬಿಡುತ್ತವೆ. ಕ್ವಾಡ್ ಹೇಳಿಕೆಯಲ್ಲಿ 2,145 ಪದಗಳಿವೆ. ಆದರೆ ನಮಗೆ ಈಗಾಗಲೇ ಗೊತ್ತಿರದ ವಿಚಾರವೇನನ್ನೂ ಅದು ತಿಳಿಸುವುದಿಲ್ಲ” ಅದು ಎಂದು ವಿದೇಶ ವ್ಯವಹಾರಗಳ ವಿಶ್ಲೇಷಕ ಎಂ.ಕೆ. ಭದ್ರಕುಮಾರ್ ಹೇಳಿರುವುದು ಸರಿಯಾಗೇ ಇದೆ.
ಈ ಇಡೀ ಕಸರತ್ತಿನಿಂದ ಕ್ವಾಡ್, ಭಾರತ-ಶಾಂತಸಾಗರ ವಲಯದಲ್ಲಿ ಅಮೆರಿಕದ ಭೌಗೋಳಿಕ-ರಾಜಕೀಯ ಕಾರ್ಯವ್ಯೂಹದಲ್ಲಿ ಒಂದು ಸಾಧನವಾಗಿದೆ ಎಂದು ತಿಳಿದುಕೊಳ್ಳಬಹುದು. ಔಕುಸ್ ಆಗಲಿ, ಕ್ವಾಡ್ ಆಗಲಿ, ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದನ್ನು ಅಮೆರಿಕ ನಿರ್ಧರಿಸುತ್ತದೆ. ಈ ಉದ್ಯಮದಲ್ಲಿ ಭಾರತ ಒಂದು ಅಧೀನ ಪಾಲುದಾರ ಅಷ್ಟೇ.
ಭಾರತದೊಂದಿಗೆ ಸಮಾಲೋಚಿಸದೇ ಅಫಘಾನಿಸ್ತಾನದಿಂದ ಅಮೆರಿಕ ಹಿಂದೆ ಸರಿದಿದ್ದು ಅಥವಾ ಔಕುಸ್ ರಚನೆಯನ್ನು ರಹಸ್ಯವಾಗಿ ಮಾಡಿದ್ದು ಇವೇ ಮೊದಲಾದ ವಿದ್ಯಮಾನಗಳು ವ್ಯೂಹಾತ್ಮಕ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕಾದ ಅಗತ್ಯದ ಬಗ್ಗೆ ಮೋದಿ ಸರ್ಕಾರವನ್ನು ಹೆಚ್ಚು ವಿವೇಕಶಾಲಿಯಾಗಿ ಮಾಡಬೇಕಿತ್ತು. ಈ ರೀತಿ ಕಾಪಾಡಿಕೊಳ್ಳಲು ಚೀನಾದೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಬಾಂಧವ್ಯ ಉಳಿಸಿಕೊಳ್ಳುವುದರ ಜೊತೆಯಲ್ಲೇ ಬಾಕಿಯಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಚೀನಾದೊಂದಿಗೆ ನೇರವಾಗಿ ವ್ಯವಹರಿಸುವುದು ಇದಕ್ಕೆ ಅಗತ್ಯವಿದೆ. ಭಾರತದ ವ್ಯೂಹಾತ್ಮಕ ಸ್ವಾಯತ್ತತೆಯನ್ನು ಕಾಯ್ದುಕೊಳ್ಳಲು ಈ ಸರ್ಕಾರಕ್ಕೆ ಆಸಕ್ತಿಯಿಲ್ಲ ಎನ್ನುವುದು ಮೋದಿಯವರ ಅಮೆರಿಕ ಭೇಟಿಯ ಫಲಶ್ರುತಿ ತೋರಿಸುತ್ತದೆ.
ಅನು: ವಿಶ್ವ