ಉತ್ತರ ಪ್ರದೇಶ ರೈತರನ್ನು ಕೊಂದ ಕೊಲೆಪಾತಕ ಧಾಳಿ ; ಕರ್ನಾಟಕ ಪ್ರಾಂತ ರೈತ ಸಂಘ ಖಂಡನೆ

ಬೆಂಗಳೂರು : ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದ ಸಾವಿರಾರು ರೈತರ ಮೇಲೆ, ಕೇಂದ್ರ ಸರಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ರ ಬೆಂಗಾವಲು ಪಡೆಯ ವಾಹನಗಳನ್ನು ಚಲಾಯಿಸಿ, ಪ್ರತಿಭಟನಾ ನಿರತ ನಾಲ್ವರು ರೈತರನ್ನು ಬರ್ಭರವಾಗಿ ಹತ್ಯೆ ಮಾಡಿದ ಕೊಲೆಪಾತಕ ದುಷ್ಜೃತ್ಯವನ್ನು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಖಂಡಿಸಿದೆ.

ಪ್ರಧಾನ ಮಂತ್ರಿಗಳು ಈ ಕೂಡಲೇ ಸಚಿವ ಅಜಯ್ ಮಿಶ್ರರ ರಾಜಿನಾಮೆಯನ್ನು ಪಡೆಯುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ. ಅದೇ ರೀತಿ, ಈ ಧಾರುಣ ಹತ್ಯೆಯ ಹಿಂದೆ ಸಚಿವರ ಪುತ್ರ ಮತ್ತು ಸಂಬಂಧಿಗಳು ಇದ್ದು ಅವರನ್ನು ಈ ಕೂಡಲೇ ಬಂಧಿಸಬೇಕು ಮತ್ತು ಅವರ ಮೇಲೆ ಕೊಲೆ ಪಾತಕ ಪ್ರಕರಣಗಳನ್ನು ದಾಖಲಿಸಬೇಕೆಂದು ರಾಜ್ಯ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಆಗ್ರಹಿಸಿದ್ದಾರೆ.

ಈ ಕೊಲೆಗಡುಕ ಪ್ರಕರಣದಲ್ಲಿ ಕೊಲ್ಲಲ್ಪಟ್ಟ ನಾಲ್ವರು ರೈತರಿಗೆ ತಲಾ ಒಂದು ಕೋಟಿ ರೂಗಳ ಪರಿಹಾರವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಕ್ಷಣವೇ ನೀಡುವಂತೆ ಮತ್ತು ಈ ದಾಳಿಯಲ್ಲಿ ಹತ್ತಕ್ಕೂ ಹೆಚ್ಚು ಜನರು ತೀವ್ರ ಗಾಯಾಳುಗಳಾಗಿದ್ದು ಅವರಿಗೆ ಉಚಿತ ಶೂಶೃಷೆ ಮತ್ತು ಅಗತ್ಯ ಪರಿಹಾರಗಳನ್ನು ಪ್ರಕಟಿಸಬೇಕು ಎಂದು ಬಯ್ಯಾರೆಡ್ಡಿ ಒತ್ತಾಯಿಸಿದ್ದಾರೆ.

ರೈತರ ಪ್ರತಿಭಟನೆಗೆ ಬೆದರಿದ ದುಷ್ಠ ಕಾರ್ಪೋರೇಟ್ ಕೂಟ ಈ ರೀತಿ ಹತಾಶ ಧಾಳಿ ನಡೆಸಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದ್ದಾರೆ.

ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಲೂಟಿಯ ಪರವಾದ ಮತ್ತು ವ್ಯವಸಾಯ ಹಾಗೂ ರೈತ ವಿರೋಧಿ ಕಾಯ್ದೆಗಳ ವಿರುದ್ದ ಕಳೆದ ಒಂದೆರಡು ವರ್ಷಗಳಿಂದ ದೇಶದಾದ್ಯಂತ, ಮುಖ್ಯವಾಗಿ, ದೆಹಲಿ ಗಡಿಗಳಲ್ಲಿ ಕೋಟ್ಯಾಂತರ ಜನತೆ ನಡೆಸುತ್ತಿರುವ ನಿರಂತರವಾದ ಐತಿಹಾಸಿಕ ಹೋರಾಟದಿಂದ ಬೆದರಿ ಹತಾಷೆಗೊಂಡ ಕಾರ್ಪೊರೇಟ್ ಕಂಪನಿಗಳು, ಬಿಜೆಪಿ, ಸಂಘ ಪರಿವಾರ ಮತ್ತು ಕೇಂದ್ರ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರಕಾರಗಳ ದುಷ್ಠಕೂಟವು, ಅಧಿಕಾರ ದುರುಪಯೋಗ ಮಾಡಿಕೊಂಡು ಹೋರಾಟ
ನಿರತರನ್ನು ಅವಹೇಳನಕಾರಿಯಾಗಿ ನಡೆಸಿಕೊಳ್ಳುತ್ತಿರುವುದು. ತುಚ್ಛವಾಗಿ ಮಾತನಾಡುವ ಮತ್ತು ಬಾಡಿಗೆ ರೈತರೆಂದು ಜರೆಯುವ ಉದ್ಧಟತನವನ್ನು ತೋರುತ್ತಿದೆ ಮಾತ್ರವಲ್ಲಾ, ಕೊಲೆ ಪಾತಕ ದುಷ್ಕೃತ್ಯಗಳನ್ನು ಪ್ರಚೋಧಿಸುತ್ತದೆ ಎಂದು ಆರೋಪಿಸಿದ್ದಾರೆ.

ಕಳೆದ ಒಂದೆರಡು ದಿನಗಳ ಹಿಂದೆ ಹರ್ಯಾಣ ಮುಖ್ಯಮಂತ್ರಿ ಹೋರಾಟ ನಿರತ ರೈತರ ಮೇಲೆ ಲಾಠಿ ಮುಂತಾದ ಆಯುಧಗಳಿಂದ ಧಾಳಿ ನಡೆಸುವಂತೆ ಬಿಜೆಪಿ ಹಾಗೂ ಸಂಘ ಪರಿವಾರದ ಗುಂಡಾಗಳಿಗೆ ಕರೆ ನೀಡುವ ಉದ್ಧಟತನವನ್ನು ತೋರಿದ್ದಾರೆ‌ ಹೋರಾಟ ನಿರತರನ್ನು ಚದುರಿಸಲು ಜಲಪಿರಂಗಿಗಳನ್ನು ಬಳಸಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹೋರಾಟ ನಿರತ ರೈತರನ್ನು ಜರೆಯುವಲ್ಲಿ ಹಿಂದೆ ಬಿದ್ದಿಲ್ಲ.

ಈ ದುಷ್ಠ ಕೂಟದ ಅಧಿಕಾರ ದುರುಪಯೋಗ ಮತ್ತು ಧಾಳಿಯ ಸಂಚಿಗೆ ದೇಶದ ರೈತಾಪಿ ಸಮುದಾಯ ಹೆದರುವುದಿಲ್ಲ. ಮಾತ್ರವಲ್ಲಾ, ಈ ದುಷ್ಠಕೂಟದ ಸಂಚನ್ನು ಮತ್ತಷ್ಠು ಬಲವಾಗಿ ಒಗ್ಗೂಡಿ ಪ್ರತಿರೋಧಿಸಲಿದೆಯೆಂದು ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಸುತ್ತದೆ.

ದೇಶದ 550ಕ್ಕು ಅಧಿಕ ರೈತ ಸಂಘಗಳಿರುವ ಸಂಯುಕ್ತ ಕಿಸಾನ್ ಮೋರ್ಚಾವು, ಈ ಕೊಲೆಪಾತಕ ಧಾಳಿಯ ವಿರುದ್ದ 04.10.21 ರಂದು ದೇಶದಾದ್ಯಂತ ತೀವ್ರವಾಗಿ ಪ್ರತಿಭಟಿಸಲು ಕರೆ ನೀಡಿದೆ. ರಾಜ್ಯದಲ್ಲಿ ಸಂಯುಕ್ತ ಹೋರಾಟ- ಕರ್ನಾಟಕ ಅದರ ಜಾರಿಗೆ ಕರೆ ನೀಡಿದೆ.
ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಘಟಕಗಳು, ಇತರೆ ಸಂಯುಕ್ತ ಹೋರಾಟ – ಕರ್ನಾಟಕದ ಘಟಕಗಳ ಜೊತೆ ಸೇರಿ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಕರೆ ನೀಡಲಾಗಿದೆ ಎಂದು ಪ್ರಾಂತರೈತ ಸಂಘ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *