ಪತ್ನಿಗೆ ಟಿಕೆಟ್‌ಗಾಗಿ ಬಿಜೆಪಿ ಪ್ರಮುಖರ ದುಂಬಾಲು ಬಿದ್ದಿರುವ ಸಂಸದ ಶಿವಕುಮಾರ್‌ ಉದಾಸಿ

ಬೆಂಗಳೂರು: ಹಾನಗಲ್‌ ವಿಧಾನಸಭೆಗೆ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿ ಇನ್ನು ಘೋಷಣೆಯಾಗಿಲ್ಲ. ಈ ನಡುವೆ ಸಂಸದ ಶಿವಕುಮಾರ್ ಉದಾಸಿ ತಮ್ಮ ಪತ್ನಿ ರೇವತಿ ಉದಾಸಿ ಅವರನ್ನು ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲೆ ಬೀಡು ಬಿಟ್ಟಿದ್ದಾರೆ.

ಪತ್ನಿಗೆ ಟಿಕೆಟ್‌ಗಾಗಿ ಶಿವಕುಮಾರ್‌ ಉದಾಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಎಲ್ಲೆಡೆ ಸುತ್ತುತ್ತಿದ್ದು, ಮುಖ್ಯಮಂತ್ರಿ ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಮನವೊಲಿಸುವ ಕೆಲಸದಲ್ಲಿ ಸತತವಾಗಿ ತೊಡಿಸಿಕೊಂಡಿದ್ದಾರೆ.

ಇದನ್ನು ಓದಿ: ಉಪಚುನಾವಣೆ: ಹಾನಗಲ್-ಸಿಂಧಗಿ ಕ್ಷೇತ್ರಗಳಿಗೆ ಅ.30ರಂದು ಮತದಾನ

ಸಿ.ಎಂ. ಉದಾಸಿ ಅವರಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಊಪಚುನಾವಣೆ ಘೋಷಣೆಯಾಗಿದೆ. ಬಿಜೆಪಿ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು ಯಾರು ಸ್ಪರ್ಧಿಸಲಿದ್ದಾರೆ ಎಂದು ಬಹಿರಂಗಗೊಂಡಿಲ್ಲ. ಸಿ.ಎಂ. ಉದಾಸಿ ಅವರ ನಿಧನದ ಅನುಕಂಪ ಪಡೆಯಬಹುದು ಮತ್ತು ಅವರು ಈವರೆಗೆ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಪರಿಗಣಿಸಿ ಅವರ ಕುಟುಂಬಕ್ಕೇ ಟಿಕೆಟ್ ನೀಡಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ.

ಸಂಸದ ಶಿವಕುಮಾರ ಉದಾಸಿ ಅಲ್ಲದೆ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಕೃಷ್ಣ ಈಳಗೇರ, ಮಾಜಿ ಶಾಸಕ ಶಿವರಾಜ ಸಜ್ಜನ ಸೇರಿದಂತೆ ಹಲವು ಆಕಾಂಕ್ಷಿಗಳು ತಮ್ಮದೆ ಪ್ರಯತ್ನ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಎರಡೂ ಕ್ಷೇತ್ರಗಳ ಉಪ ಚುನಾವಣೆಯನ್ನು ಪಕ್ಷದ ನೇತೃತ್ವದಲ್ಲಿ ಎದುರಿಸುತ್ತೇವೆ. ಈಗಾಗಲೇ ಬಹಳ ಸಿದ್ಧತೆ ಮಾಡಿಕೊಂಡಿದ್ದೇವೆ. ಚುನಾವಣೆ ನಡೆಯಲಿರುವ ಸಿಂದಗಿ ಮತ್ತು ಹಾನಗಲ್‌ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕೇಂದ್ರಕ್ಕೆ ಕಳುಹಿಸಲು ಪಕ್ಷದ ಪ್ರಮುಖರ ಸಭೆ (ಕೋರ್‌ ಕಮಿಟಿ) ಭಾನುವಾರ ನಡೆಯಲಿದೆʼ ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ: ರೈತರೇ ನಿಮ್ಮ ಹಿತಶತ್ರುವನ್ನು ಹಿಮ್ಮೆಟ್ಟಿಸಿ

ಹಾನಗಲ್‌ ಕ್ಷೇತ್ರದಲ್ಲಿ ಉದಾಸಿ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡಲಾಗುತ್ತಯೇ ಎಂಬ ಪ್ರಶ್ನೆಗೆ, ‘ಎಲ್ಲ ವಿಷಯಗಳನ್ನು ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚಿಸುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಪಕ್ಷದ ಜಿಲ್ಲಾ ಪ್ರಮುಖ ಸಭೆಗಳನ್ನು ನಡೆಸುತ್ತಿದ್ದಾರೆ.

ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಚುನಾವಣೆಯಾಗಿದೆ.

Donate Janashakthi Media

Leave a Reply

Your email address will not be published. Required fields are marked *