ಅದಾನಿ ಮುಂದ್ರಾ ಬಂದರಿನಲ್ಲಿ ಡ್ರಗ್ಸ್ ಪತ್ತೆ ಪ್ರರಕರಣದಲ್ಲಿ ಸರ್ಕಾರದ ಮೌನ ಏಕೆ: ಕಾಂಗ್ರೆಸ್

ಬೆಂಗಳೂರು: ‘ಅದಾನಿ ಮುಂದ್ರಾ ಅವರ ಬಂದರಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಬಿಜೆಪಿ ಸರ್ಕಾರ ಮೌನ ವಹಿಸಿರುವುದೇಕೆ? ಇದು ದೇಶದ ಭದ್ರತೆಗೆ ಅಪಾಯ ತರುವ ವಿಚಾರವಾಗಿದ್ದು, ಇದರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಲು ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನೇಟ್ ‘ಅದಾನಿ ಮುಂದ್ರಾ ಬಂದರಿನಲ್ಲಿ ಈ ರೀತಿ ಡ್ರಗ್ಸ್ ಪತ್ತೆ ಪ್ರಕರಣ ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಡ್ರಗ್ಸ್ ಪತ್ತೆಯಾಗಿದ್ದು, ಬಂದರು ನಡೆಸುತ್ತಿರುವ ಅದಾನಿ ಸಮೂಹದ ವಿಚಾರಣೆ ನಡೆಸಿಲ್ಲ ಯಾಕೆ?’ ಎಂದು ಪ್ರಶ್ನಿಸಿದರು.

ಇದನ್ನು ಓದಿ: ಗುಜರಾತಿನಲ್ಲಿ ₹19 ಸಾವಿರ ಕೋಟಿ ಮೌಲ್ಯದ ಹೆರಾಯಿನ್ ವಶ

ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥ ಬಿ.ಎಲ್ ಶಂಕರ್, ಎಐಸಿಸಿ ವಕ್ತಾರರಾದ ಭವ್ಯ ನರಸಿಂಹಮೂರ್ತಿ, ಕೆಪಿಸಿಸಿ ಸಂವಹನ ಹಾಗೂ ಮಾಧ್ಯಮ ವಿಭಾಗದ ಸಹ ಸಂಚಾಲಕರಾದ ರಾಮಚಂದ್ರಪ್ಪ ಹಾಗೂ ಸಲೀಂ ಅವರು ಇದ್ದರು.

‘ಕೆಲ ದಿನಗಳ ಹಿಂದೆ ಗುಜರಾತಿನ ಅದಾನಿ ಮುಂದ್ರಾ ಬಂದರಿನಲ್ಲಿ 3000 ಕೆ.ಜಿ ಅಂದರೆ ರೂ.21 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು. ಕಳೆದ ಜೂನ್ ತಿಂಗಳಲ್ಲಿ 25,000 ಕೆ.ಜಿಯಷ್ಟು ಡ್ರಗ್ಸ್ ಬಂದಿದ್ದು, ಅದು ಈಗಾಗಲೇ ಮಾರುಕಟ್ಟೆಯಲ್ಲಿ ಸರಬರಾಜಾಗುತ್ತಿವೆ. ಇದನ್ನು ಸೆಮಿ ಕಟ್ ಟಾಲ್ಕಮ್ ಪೌಡರ್ ಎಂದು ಹೆಸರಿಸಲಾಗಿದ್ದು, ಈ ಡ್ರಗ್ಸ್‌ಗಳು ತಾಲಿಬಾನ್ ಹಿಡಿತದಲ್ಲಿರುವ ಅಫ್ಘಾನಿಸ್ತಾನದಿಂದ ಆಶಿ ಟ್ರೇಡಿಂಗ್ ಕಂಪನಿ ಆಮದು ಮಾಡಿಕೊಂಡಿದೆ. ಇದು ದೇಶದ ಯುವಕರ ಭವಿಷ್ಯದ ವಿಷಯವಾಗಿದೆ. ಆದರೂ ಈ ವಿಚಾರವಾಗಿ ನರೇಂದ್ರ ಮೋದಿ ಅವರ ಸರ್ಕಾರವಾಗಲಿ, ದೇಶದ ಪ್ರಮುಖ ಮಾಧ್ಯಮಗಳಾಗಲಿ ಮಾತನಾಡುತ್ತಿಲ್ಲ’ ಎಂದು ಆರೋಪಿಸಿದರು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಿ ಟ್ರೇಡಿಂಗ್ ಕಂಪನಿ ಮಾಲೀಕರಾದ ಸುಧಾಕರ್ ಮಚ್ವರಮ್ ಹಾಗೂ ಅವರ ಪತ್ನಿ ಗೋವಿಂದರಾಜು ವೈಶಾಲಿ ಅವರನ್ನು ಬಂಧಿಸಲಾಗಿದ್ದು, ಇಂತಹ ಸಣ್ಣ ಟ್ರೇಡಿಂಗ್ ಕಂಪನಿ ಇಷ್ಟು ದೊಡ್ಡ ಮೊತ್ತದ ಡ್ರಗ್ಸ್ ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಇದರ ಹಿಂದೆ ಪ್ರಭಾವಿಗಳ ಕೈವಾಡದ ಶಂಕೆ ಇದ್ದು, ಅದು ಯಾರು ಎಂಬುದರ ಬಗ್ಗೆ ತನಿಖೆ ನಡೆದಿಲ್ಲ. ಜೂನ್ ತಿಂಗಳಲ್ಲಿ ಅಫ್ಘಾನಿಸ್ತಾನದ ಹಸನ್ ಹುಸೇನ್ ಲಿಮಿಟೆಡ್ ಕಂಪನಿ 25 ಸಾವಿರ ಕೆ.ಜಿ ಅಂದರೆ 1.75 ಲಕ್ಷ ಕೋಟಿಯಷ್ಟು ಮೊತ್ತದ ಹೆರಾಯಿನ್ ರಫ್ತು ಮಾಡಿದ್ದು, ಅದು ದೇಶದ ಮಾರುಕಟ್ಟೆಯಲ್ಲಿ ಸರಬರಾಜಾಗುತ್ತಿದೆ. ಇದು ದೇಶದ ಲಕ್ಷಾಂತರ ಯುವಕರು ಮಾದಕ ವ್ಯಸನಿಗಳಾಗುವ ಸ್ಥಿತಿ ನಿರ್ಮಾಣವಾಗಿದೆ. ಆ ಮೂಲಕ ಇದು ದೇಶದ ಭದ್ರತೆಗೆ ಮಾರಕವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಇದನ್ನು ಓದಿ: ವಿಪಕ್ಷಗಳ ವಿರೋಧದ ನಡುವೆಯೂ ಬಂದರು ಪ್ರಾಧಿಕಾರ ಮಸೂದೆ 2020 ಕ್ಕೆ ಅನುಮೋದನೆ

‘ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಯುವಕರಿಗೆ ಕಳೆದ 7 ವರ್ಷಗಳಲ್ಲಿ 14 ಕೋಟಿ ಉದ್ಯೋಗ ನೀಡಬೇಕಾಗಿತ್ತು, ಆದರೆ ದೇಶದ ಯುವಕರು ಈ ಡ್ರಗ್ಸ್ ಜಾಲಕ್ಕೆ ಸಿಲುಕುವಂತೆ ಮಾಡಲಾಗಿದೆ. ಕಳೆದ ವರ್ಷ ಕೇವಲ 2 ಗ್ರಾಂ ಡ್ರಗ್ಸ್ ಸಿಕ್ಕ ಪ್ರಕರಣದಲ್ಲಿ ಇಡೀ ಹಿಂದಿ ಚಿತ್ರರಂಗವನ್ನೇ ಜಾಲಾಡಿದ್ದ ಮಾಧ್ಯಮಗಳು, ಈ ವರ್ಷ ದೇಶದ ಇತಿಹಾಸದಲ್ಲಿ ಅತಿ ದೊಡ್ಡ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದ್ದರೂ ಯಾವುದೇ ಚರ್ಚೆ ನಡೆಸುತ್ತಿಲ್ಲ. ಡ್ರಗ್ಸ್ ನಿಯಂತ್ರಣ ಮಾಡಲು ನೇಮಕಗೊಂಡಿರುವ ಮಾದಕ ವಸ್ತುಗಳ ನಿಯಂತ್ರಣ ಮಂಡಳಿಯಲ್ಲಿ ಕಳೆದ 18 ತಿಂಗಳಿನಿಂದ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿಲ್ಲ. ದೇಶಕ್ಕೆ ಡ್ರಗ್ಸ್ ಪ್ರವೇಶಿಸಲು ಗುಜರಾತಿನ ಬಂದರು ರಹದಾರಿಯಾಗಿದ್ದು, ಮೋದಿ ಸರ್ಕಾರ ಈ ವಿಚಾರದಲ್ಲಿ ಮೌನ ವಹಿಸಿದೆ’ ಎಂದು ತಿಳಿಸಿದರು.

ಪ್ರಭಾವಿ ವ್ಯಕ್ತಿ ಹೊರತಾಗಿ ಇತರರು ಇಷ್ಟು ದೊಡ್ಡ ಮಟ್ಟದ ಡ್ರಗ್ಸ್ ಆಮದು ಮಾಡಿಕೊಳ್ಳಲು ಸಾಧ್ಯವೇ? ಈ ಬಗ್ಗೆ ಪ್ರಧಾನಮಂತ್ರಿಗಳಾಗಲಿ, ಗೃಹಮಂತ್ರಿಗಳಾಗಲಿ ಅನುಮಾನಾಸ್ಪದ ಮೌನಕ್ಕೆ ಶರಣಾಗಿರುವುದೇಕೆ? ಭಾರತದ ಮಾದಕದ್ರವ್ಯ ನಿಯಂತ್ರಣ ಮಂಡಳಿ, ಸಿಬಿಐಐ, ಇಡಿ, ಡಿಆರ್‌ಐ ಸಂಸ್ಥೆಗಳು ಏನು ಮಾಡುತ್ತಿವೆ? ಇವು ಕೇವಲ ರಾಜಕೀಯ ಎದುರಾಳಿಗಳ ವಿರುದ್ಧ ಬಳಸುವ ಅಸ್ತ್ರವಾಗಿದೆಯಾ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *