- ₹10 ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಕೆಎಚ್ಬಿ
- ಕೆಎಚ್ಬಿಗೆ 1ಲಕ್ಷ ರೂ ದಂಡ ವಿಧಿಸಿದ ಹೈಕೋರ್ಟ್
- ಜಾಗ ಮರಳಿಸುವಂತೆ ಕೋರ್ಟ್ ಸೂಚನೆ
ಬೆಂಗಳೂರು : ಕಲಬುರಗಿ ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಪತ್ನಿ ಟ್ರಸ್ಟ್ಗೆ ನೀಡಲಾಗಿದ್ದ ನಿವೇಶನ ಹಂಚಿಕೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದು ಪಡಿಸಿದೆ. ಇನ್ನು, ನಿಯಮಬಾಹಿರ ಹಂಚಿಕೆ ಮಾಡಿದ ಕರ್ನಾಟಕ ಹೌಸಿಂಗ್ ಬೋರ್ಡ್ಗೆ (KHB) 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಬೆಂಗಳೂರಿನಲ್ಲಿ ಸಾರ್ವಜನಿಕ ಸೌಕರ್ಯ ಕಲ್ಪಿಸಲು ಮೀಸಲಾಗಿರುವ ನಿವೇಶನವನ್ನು (ಸಿ ಎ ಸೈಟ್) ಕರ್ನಾಟಕ ಗೃಹ ಮಂಡಳಿಯು (ಕೆಎಚ್ಬಿ)ಯು ಬಿಜೆಪಿ ಸಂಸದ ಉಮೇಶ್ ಜಾಧವ್ ಅವರ ಪತ್ನಿ ಒಡೆತನದ ಟ್ರಸ್ಟಿಗೆ ಅಕ್ರಮವಾಗಿ ವಿಕ್ರಯ ಮಾಡಲಾಗಿತ್ತು.
ಮೂರ್ತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಗಾಯತ್ರಿ ಅವರಿಗೆ ಷರತ್ತುಬದ್ಧ ಕ್ರಯಪತ್ರದ ನಿಯಮಗಳಿಗೆ ವಿರುದ್ಧವಾಗಿ ಮಾರಾಟ ಮಾಡಿಕೊಡುವ ಮೂಲಕ ಪಕ್ಷಪಾತ ಎಸಗಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಸದರಿ ನಿವೇಶನವನ್ನು ಮರಳಿ ವಶಕ್ಕೆ ಪಡೆಯುವಂತೆ ಕೆಎಚ್ಬಿಗೆ ಆದೇಶಿಸಲಾಗಿದ್ದು, ಕಾನೂನುಬಾಹಿರವಾಗಿ ವ್ಯವಹರಿಸಿರುವ ಕೆಎಚ್ಬಿಯು ಒಂದು ಲಕ್ಷ ರೂಪಾಯಿ ದಂಡವನ್ನು ಒಂದು ತಿಂಗಳ ಒಳಗಾಗಿ ಬೆಂಗಳೂರು ವಕೀಲರ ಸಂಘಕ್ಕೆ ಪಾವತಿಸಬೇಕು ಎಂದು ಆದೇಶ ಹೊರಡಿಸಿದೆ.
ವಕೀಲ ಸುನೀಲ್ ಕುಮಾರ್ ಎಚ್ ಅವರ ಮೂಲಕ ಆದಿನಾರಾಯಣ ಶೆಟ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸತ್ಯಶೋಧನಾ ತನಿಖೆ ನಡೆಸುವಂತೆ ಆದೇಶಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಿದೆ. ಈ ಎಲ್ಲಾ ಪ್ರಕ್ರಿಯೆ ಆರು ತಿಂಗಳ ಒಳಗೆ ಮುಕ್ತಾಯವಾಗಬೇಕು ಎಂಬ ಗಡುವನ್ನು ಪೀಠ ವಿಧಿಸಿದೆ.
” ಬೆಂಗಳೂರಿನ ಯಲಹಂಕ ನ್ಯೂ ಟೌನ್ನ ಐದನೇ ಹಂತದಲ್ಲಿ 232 ಸ್ಕ್ವೇರ್ ಮೀಟರ್ಗಳ ಸಿ ಎ ನಿವೇಶನವನ್ನು ಉಮೇಶ್ ಜಾಧವ್ ಅವರ ಪತ್ನಿ ಗಾಯತ್ರಿ ಅಧ್ಯಕ್ಷರಾಗಿರುವ ಮೂರ್ತಿ ಚಾರಿಟಬಲ್ ಟ್ರಸ್ಟ್ಗೆ 2004ರ ಜುಲೈ 23ರಂದು ಷರತ್ತಿಗೆ ಒಳಪಟ್ಟು ಕೆಎಚ್ಬಿಯು ಕ್ರಯ ಮಾಡಿಕೊಟ್ಟಿದೆ. ಇದರ ಪ್ರಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ವರ್ಷಗಳ ಒಳಗೆ ಶೈಕ್ಷಣಿಕ ಸಂಸ್ಥೆ ನಿರ್ಮಿಸಬೇಕು ಎಂದು ಹೇಳಲಾಗಿದೆ. ಕೆಎಚ್ಬಿ ನಿಯಮಾವಳಿಗಳ ಪ್ರಕಾರ ಸಿ ಎ ನಿವೇಶನದಲ್ಲಿ ಐದು ವರ್ಷಗಳ ಒಳಗೆ ಕಟ್ಟಡ ನಿರ್ಮಿಸದಿದ್ದರೆ ಯಾವುದೇ ನೋಟಿಸ್ ನೀಡದೇ ಅದನ್ನು ಕೆಎಚ್ಬಿ ವಶಪಡಿಸಿಕೊಳ್ಳಬಹುದಾಗಿದೆ.
ನಿರ್ದಿಷ್ಟ ಕಾಲಮಿತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡದಿದ್ದರೂ ಸದ್ಯ ಮಾರುಕಟ್ಟೆಯಲ್ಲಿ 10 ಕೋಟಿ ರೂಪಾಯಿ ಬೆಲೆಬಾಳುವ ನಿವೇಶನವನ್ನು 2020ರ ಜುಲೈ 23ರಂದು 3.87 ಲಕ್ಷ ರೂಪಾಯಿ ಪಡೆದು ಕೆಎಚ್ಬಿಯು ಟ್ರಸ್ಟ್ಗೆ ಕ್ರಯಮಾಡಿಕೊಟ್ಟಿದೆ. ಇದೇ ನಿವೇಶನಕ್ಕೆ ಹೊಂದಿಕೊಂಡಿರುವ ಹೆಚ್ಚುವರಿಯಾಗಿದ್ದ ಸ್ಥಳ ಸೇರಿ ನಿವೇಶನದ ವಿಸ್ತೀರ್ಣವು 278.73 ಚದರ ಮೀಟರ್ ಆಗಿದ್ದು, ಅದಕ್ಕೆ ಪ್ರತ್ಯೇಕವಾಗಿ 18 ಲಕ್ಷ ರೂಪಾಯಿಗಳನ್ನು ಕೆಎಚ್ಬಿ ಪಡೆದುಕೊಂಡಿದೆ. ಕ್ರಯಪತ್ರ ಮಾಡಿಕೊಡುವಾಗ ಕರ್ನಾಟಕ ಗೃಹ ಮಂಡಳಿ ನಿವೇಶನ ಹಂಚಿಕೆ ನಿಯಮಾವಳಿ 1983ರನ್ನು ಪಾಲಿಸಲಾಗಿಲ್ಲ”ಎಂದು ಪೀಠವು ಆದೇಶದಲ್ಲಿ ಹೇಳಿದೆ.
”ಟ್ರಸ್ಟ್ ಅಧ್ಯಕ್ಷೆ ಗಾಯತ್ರಿ ಅವರು ಲೋಕಸಭಾ ಸದಸ್ಯ ಉಮೇಶ್ ಜಾಧವ್ ಅವರ ಪತ್ನಿ ಎಂಬ ಕಾರಣಕ್ಕೆ ಕೆಎಚ್ಬಿ ಪಕ್ಷಪಾತದ ನಿಲುವು ಕೈಗೊಂಡಿದೆ. ಮನವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ದಾಖಲಿಸಿದ್ದ ಕೆಎಚ್ಬಿಯು ಪಿಐಎಲ್ ನಿರ್ವಹಣೆಗೆ ಅರ್ಹವಲ್ಲ. ಶಿಕ್ಷಣ ಸಂಸ್ಥೆ ಸ್ಥಾಪಿಸುವ ಸದುದ್ದೇಶದಿಂದ ಗಾಯತ್ರಿ ಅವರು ಕೋರಿಕೆ ಸಲ್ಲಿಸಿದ್ದರಿಂದ ನಿವೇಶನ ಹಂಚಿಕೆ ಮಾಡಲಾಗಿತ್ತು. ಸದರಿ ನಿವೇಶನವನ್ನು ಒಳಗೊಂಡು ಬೇರೊಬ್ಬರು ದಾವೆ ಹೂಡಿದ್ದರಿಂದ ಷರತ್ತುಬದ್ಧ ಕ್ರಯಪತ್ರದ ಭರವಸೆ ಜಾರಿಗೊಳಿಸಲಾಗಿಲ್ಲ.
ಹೀಗಾಗಿ, 2020ರ ಜುಲೈನಲ್ಲಿ ಹೊಸದಾಗಿ ಕ್ರಯಪತ್ರ ಮಾಡಿಕೊಡಲಾಗಿದೆ ಎಂದು ವಾದಿಸಿದೆ. ಈ ಮೂಲಕ ಕಾನೂನುಬಾಹಿರವಾಗಿ ನಿವೇಶನ ಕ್ರಯ ಮಾಡಿಕೊಟ್ಟಿರುವುದನ್ನು ಸಮರ್ಥಿಸಿಕೊಳ್ಳಲು ಕೆಎಚ್ಬಿ ಎಲ್ಲಾ ಪ್ರಯತ್ನಗಳನ್ನೂ ಮಾಡಿದೆ. ಗಾಯತ್ರಿ ಅವರೂ ಟೆಂಡರ್ ಅಥವಾ ಹರಾಜಿನ ಮೂಲಕ ನಿವೇಶನ ಪಡೆದಿರುವ ಕುರಿತ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಇದ್ಯಾವುದೂ ಕೆಎಚ್ಬಿಯ ಪ್ರತಿಕ್ರಿಯೆಯಲ್ಲಿ ಸ್ಥಾನ ಪಡೆದಿಲ್ಲ. ಸದಾಶಿವನಗರ ಯುವ ಸಂಘಟನೆ ವರ್ಸಸ್ ಕರ್ನಾಟಕ ಸರ್ಕಾರ ಮತ್ತು ಇತರರು ಪ್ರಕರಣದಲ್ಲಿ ಆಕ್ಷೇಪಾರ್ಹವಾದ ನಿವೇಶನದ ಬಗ್ಗೆ ಉಲ್ಲೇಖ ಇದೆಯಾದರೂ ಅದು ಈ ನಿವೇಶನಕ್ಕೆ ಸಂಬಂಧಪಟ್ಟಿಲ್ಲ” ಎಂದು ಪೀಠ ಆದೇಶದಲ್ಲಿ ಹೇಳಿದೆ.
”ಕೆಎಚ್ಬಿಯ ಮನಸ್ಥಿತಿ ಆಶ್ಚರ್ಯ ಹುಟ್ಟಿಸುವಂತಿದ್ದು, ಆಕ್ಷೇಪಾರ್ಹವಾದ ನಿವೇಶನ ಹಂಚಿಕೆ ಮಾಡುವಾಗ ಯಾವುದೇ ನಿಯಮಗಳನ್ನು ಪಾಲಿಸಲಾಗಿಲ್ಲ. ಇದೇ ಪ್ರಕರಣದ ಕುರಿತು ಹಿಂದೆ ವಿಭಾಗೀಯ ಪೀಠದ ಮುಂದೆ ವಿಸ್ತೃತವಾಗಿ ವಾದಿಸಲಾಗಿದೆ. ಆ ಸಂದರ್ಭದಲ್ಲಿ ಗಾಯತ್ರಿ ಅವರು ನಿವೇಶನವನ್ನು ಕೆಎಚ್ಬಿಗೆ ಮರಳಿಸಲು ಸಿದ್ಧವಾಗಿರುವುದಾಗಿ ತಮ್ಮ ವಕೀಲರ ಮೂಲಕ ತಿಳಿಸಿದ್ದರು” ಎಂದು ಪೀಠ ಆದೇಶದಲ್ಲಿ ದಾಖಲಿಸಿದೆ.
ಸಾರ್ವಜನಿಕ ಒಳಿತಾಗಿ ಇರುವ ಸಿ ಎ ನಿವೇಶನವನ್ನು ಟ್ರಸ್ಟ್ಗೆ ಹಂಚಿಕೆ ಮಾಡಿರುವ ಕೆಎಚ್ಬಿ ಆದೇಶವನ್ನು ಬದಿಗೆ ಸರಿಸಲಾಗಿದೆ. ಈ ನಿವೇಶನವನ್ನು ಕೆಎಚ್ಬಿಯು ಒಂದು ತಿಂಗಳ ಒಳಗೆ ತನ್ನ ವಶಕ್ಕೆ ಪಡೆಯಬೇಕು ಎಂದು ಕೋರ್ಟ್ ಹೇಳಿದೆ.