ಪಶ್ಚಿಮ ಬಂಗಾಳ ಉಪಚುನಾವಣೆ: ಭಬನಿಪುರದಲ್ಲಿ ನೀರಸ ಮತದಾನ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ಭಬನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಇಂದು ನಡೆದಿದ್ದು, ಸಂಜೆ 5 ರವರೆಗೆ 53.32%ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ತೀವ್ರ ಬಿಗಿ ಭದ್ರತೆಯೊಂದಿಗೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಯಿತು. ಮಧ್ಯಾಹ್ನ 1ರ ಸಮಯದಲ್ಲಿ ಶೇ.36ರಷ್ಟು ಮಾತ್ರ ಮತದಾನವಾಗಿತ್ತು. ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಇಂದು ಬೆಳಿಗ್ಗೆ ಮತದಾನ ಆರಂಭವಾದಾಗಿನಿಂದಲೂ ಮಂದಗತಿಯಲ್ಲಿ ಸಾಗಿತ್ತು.

ದಕ್ಷಿಣ ಕೋಲ್ಕತ್ತಾದ ಭಬನಿಪುರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಪ್ರಿಯಾಂಕಾ ತಿಬ್ರೇವಾಲ್ ಸ್ಪರ್ಧೆಯಲ್ಲಿದ್ದು, ಎರಡೂ ಪಕ್ಷಗಳ ನಡುವೆ ಪೈಪೋಟಿನ ಕ್ಷೇತ್ರ ಇದಾಗಿದೆ. ಅಲ್ಲದೆ, ಸಿಪಿಐ(ಎಂ)ನಿಂದ ಶ್ರೀಜಿಬ್ ಬಿಸ್ವಾಸ್ ಸ್ಪರ್ಧೆಯಲ್ಲಿದ್ದಾರೆ.

ಈ ಕ್ಷೇತ್ರವು ಎರಡು ಬಾರಿ ಮಮತಾ ಬ್ಯಾನರ್ಜಿ ಅವರನ್ನು ಆಯ್ಕೆ ಮಾಡಿತ್ತು ಆದಾಗ್ಯೂ, ಈ ಬಾರಿಯ ಮತದಾನವು ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ, ಏಕೆಂದರೆ ಮಮತಾ ಬ್ಯಾನರ್ಜಿ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲೇ ಬೇಕಾಗಿದೆ.

ಇದೇ ವೇಳೆ ಮುರ್ಷಿದಾಬಾದ್ ಜಿಲ್ಲೆಯ ಸಂಶೇರ್‌ಗಂಜ್‌ ಮತ್ತು ಜಂಗಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನವು ನಡೆದಿದೆ. ಆ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ 78.60 ಮತ್ತು ಶೇ 76.12ರಷ್ಟು ಮತದಾನವಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಉಪಚುನಾವಣೆಯ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದವು. ಶಾಂತಿಯುತ ಮತದಾನಕ್ಕಾಗಿ ಎರಡು ಸಾವಿರ ಮಂದಿ ಭದ್ರತಾ ಸಿಬಂದಿಯನ್ನು ನೇಮಿಸಲಾಗಿದ್ದವು.

ಒಡಿಶಾ ರಾಜ್ಯದ ಪುರಿ ಜಿಲ್ಲೆಯ ಪಿಪ್ಲಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆಯು ಬೆಳಿಗ್ಗೆ 7 ಗಂಟೆ ಮತದಾನ ಆರಂಭವಾದವು. ಈ ಕ್ಷೇತ್ರದಲ್ಲಿ ಮಧ್ಯಾಹ್ನ 3ರ ಸಮಯದ ಹೊತ್ತಿಗೆ ಶೇ.59.72ರಷ್ಟು ಮತದಾನವಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಮತದಾರರು ಮತಗಟ್ಟೆಗಳ ಎದುರು ಗುರುತು ಹಾಕಿರುವ ಸ್ಥಳಗಳಲ್ಲಿ ವ್ಯಕ್ತಿಗತ ಅಂತರಗಳೊಂದಿಗೆ ಸಾಲಾಗಿ ನಿಂತು ಮತ ಚಲಾಯಿಸಿದರು.

ಅಕ್ಟೋಬರ್ 3ರಂದು ಮತಗಳ ಎಣಿಕೆ ಮಾಡಲಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *