ದೆಹಲಿ: ಸಿಪಿಐ ಪಕ್ಷದ ಮುಖಂಡ ಕನ್ಹಯ್ಯಾ ಕುಮಾರ್ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಇವರನ್ನು ಪಕ್ಷದ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ಗೆ ಸ್ವಾಗತಿಸಿದರು.
ಇಂದು ದೆಹಲಿಯಲ್ಲಿರುವ ರಾಹುಲ್ ಗಾಂಧಿ ಅವರ ಕಚೇರಿಗೆ ತೆರಳಿದ ಉಭಯ ನಾಯಕರ ಪೈಕಿ ಕನ್ಹಯ್ಯ ಕುಮಾರ್ ಅಧಿಕೃತವಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಸ್ವೀಕರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಸಂಸತ್ ಭವನದ ಮೇಲಿನ ದಾಳಿಯ ರೂವಾರಿ ಅಫ್ಜಲ್ ಗುರು ಸಾವಿನ ದಿನದಂದು ಮಾಡಿದ ಭಾಷಣದ ಕಾರಣಕ್ಕೆ 2016ರಲ್ಲಿ ಕನ್ಹಯ್ಯ ಅವರನ್ನು ಜೈಲಿಗೆ ಹಾಕಲಾಗಿತ್ತು. ಆಗ ಕನ್ಹಯ್ಯ ದೆಹಲಿಯ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕರಾಗಿದ್ದರು.
CPI leader Kanhaiya Kumar and Gujarat MLA Jignesh Mewani joins Congress in the presence of Rahul Gandhi in New Delhi pic.twitter.com/7t0tf8lqmp
— ANI (@ANI) September 28, 2021
ಇದೇ ವೇಳೆ ಮಾತನಾಡಿದ ಕನ್ನಯ್ಯ ಕುಮಾರ್ ಅವರು, ಕಾಂಗ್ರೆಸ್ ಪಕ್ಷವು ದೊಡ್ಡ ಹಡಗಿನಂತಿದೆ, ಅದನ್ನು ಉಳಿಸಿದರೆ, ನಾನು ಅನೇಕ ಜನರ ಆಕಾಂಕ್ಷೆಗಳನ್ನು, ಮಹಾತ್ಮ ಗಾಂಧಿಯವರ ಏಕತೆ, ಭಗತ್ ಸಿಂಗ್ ಅವರ ಧೈರ್ಯ ಮತ್ತು ಬಿಆರ್ ಅಂಬೇಡ್ಕರ್ ಅವರ ಸಮಾನತೆಯ ಕಲ್ಪನೆಯನ್ನು ಸಹ ರಕ್ಷಿಸಿದಂತಾಗುತ್ತದೆ. ಅದಕ್ಕಾಗಿಯೇ ನಾನು ಆ ಪಕ್ಷಕ್ಕೆ ಸೇರಿಕೊಂಡೆ ಎಂದು ಹೇಳಿದ್ದಾರೆ
ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕನ್ನಯ್ಯ ಕುಮಾರ್ ರವರ ಪ್ರೋಫೈಲ್ ಫೋಟೊಗೆ ಕೆಲಸವರು ಕಮೆಂಟ್ ಮಾಡಿದ್ದು ಕಾಂಗ್ರೆಸ್ ಸೇರಬೇಡಿ ಎಂದು ಮನವಿ ಮಾಡಿದ್ದರು. ಕನ್ಹಯ್ಯ ಕುಮಾರ್ ಬೆಳದ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಅವರೊಬ್ಬ ವಂಚಕ, ಇದು ಅವಕಾಶವಾದಿತನ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ಹಯ ಪಕ್ಷ ತೊರೆದಿದ್ದಕ್ಕೆ ಕನ್ಹಯ ಮಾತ್ರ ಕಾರಣವಲ್ಲ ಎಂದು ಪ್ರಗತಿಪರ ವೈದ್ಯ ಶ್ರೀನಿವಾಸ ಕಕ್ಕಿಲಾಯ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ :ಕನ್ನಯ್ಯ ಕಾಂಗ್ರೆಸ್ ಹೋದರೆ ಸರಿಯೆ?!
ತಾಂತ್ರಿಕ ಕಾರಣದಿಂದಾಗಿ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಸೇರ್ಪಡೆ ಇಲ್ಲ : ಇನ್ನು ತಾಂತ್ರಿಕ ಕಾರಣದಿಂದಾಗಿ ಶಾಸಕ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಜಿಗ್ನೇಶ್ ಮೇವಾನಿ ಮಾಹಿತಿ ನೀಡಿದ್ದು, ನಾನು ಓರ್ವ ಪಕ್ಷೇತರ ಶಾಸಕನಾಗಿದ್ದು ಈ ಹೊತ್ತಿನಲ್ಲಿ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾದರೆ ಬಹುಶಃ ನನ್ನ ಶಾಸಕತ್ವಕ್ಕೆ ಕುತ್ತಾಗಬಹುದು. ಆದರೆ ನಾನು ಈಗಲೂ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಭಾಗವಾಗಿದ್ದು, ಮುಂದಿನ ಗುಜರಾತ್ ಚುನಾವಣೆಯನ್ನು ಕಾಂಗ್ರೆಸ್ ನೊಂದಿಗೆ ಇದ್ದು ಹೋರಾಡುತ್ತೇನೆ ಎಂದು ಹೇಳಿದರು.