ಬೆಲೆ ಏರಿಕೆ ವಿರುದ್ಧ ಸೈಕಲ್‌ ಮೂಲಕ ವಿಧಾನಸೌಧಕ್ಕೆ ಆಗಮಿಸಿದ ಸಿದ್ದರಾಮಯ್ಯ-ಡಿಕೆಶಿ

ಬೆಂಗಳೂರು: ಬಿಜೆಪಿ ಸರ್ಕಾರದ ನೀತಿಗಳಿಂದಾಗಿ ಜನತೆ ಸಮಸ್ಯೆಗಳು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇದರಿಂದಾಗಿ ಬೆಲೆಗಳು ಗಗನಕ್ಕೇರುತ್ತಿವೆ. ಬಿಜೆಪಿಯ ಜನವಿರೋಧಿ ನೀತಿಗಳಿಂದಾಗಿ ದಿನೇ ದಿನೆ ಇಂಧನ ಹಾಗೂ ದಿನಬಳಕೆ ವಸ್ತುಗಳ ಬೆಲೆಗಳು ಸತತವಾಗಿ ಏರಿಕೆಯಾಗುತ್ತಿರುವುದರ ವಿರುದ್ಧ ಕಾಂಗ್ರೆಸ್‌ ಪಕ್ಷವು ಸೈಕಲ್ ಜಾಥಾ ಹಮ್ಮಿಕೊಂಡಿತ್ತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ನೇತೃತ್ವದಲ್ಲಿ ಶಾಸಕರು ಕಾಂಗ್ರೆಸ್ ಪಕ್ಷದ ಕಚೇರಿಯಿಂದ ವಿಧಾನಸೌಧದವರೆಗೆ ಸೈಕಲ್ ಮೂಲಕ ಆಗಮಿಸಿ ಪ್ರತಿಭಟನೆ ಹಮ್ಮಿಕೊಂಡರು.

ಇದನ್ನು ಓದಿ: ಎತ್ತಿನಗಾಡಿಯ ಮೂಲಕ ಅಧಿವೇಶನಕ್ಕೆ ಬಂದ ಸಿದ್ದರಾಮಯ್ಯ & ಡಿ.ಕೆ. ಶಿವಕುಮಾರ್

ಸತತವಾಗಿ ಏರುತ್ತಿರುವ ಬೆಲೆಗಳ ವಿರುದ್ಧ ಈ ಹಿಂದೆ ರಾಜ್ಯಾದ್ಯಂತ ಸೈಕಲ್ ಜಾಥಾ, 100 ನಾಟೌಟ್‌ನಂತಹ ಕಾರ್ಯಕ್ರಮಗಳ ಮೂಲಕ ಬೀದಿಗಿಳಿದು ಹೋರಾಟ ಮಾಡಿದ್ದ ಕಾಂಗ್ರೆಸ್, ಕಳೆದ ವಾರ ವಿಧಾನ ಮಂಡಲ ಅಧಿವೇಶನದ ಮೊದಲ ದಿನ ಎತ್ತಿನಗಾಡಿ ಯಾತ್ರೆಯನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.

ಹೋರಾಟದ ಮುಂದುವರಿದ ಭಾಗವಾಗಿ ಇಂದು ಸೈಕಲ್ ಜಾಥಾ ನಡೆಸಿ ಸರ್ಕಾರಕ್ಕೆ ಕಾಂಗ್ರೆಸ್ ಮತ್ತೆ ಬಿಸಿ ಮುಟ್ಟಿಸಿದೆ. ಇಂತಹ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ಬಂಡ ಬಿಜೆಪಿ ಸರ್ಕಾರ ಬೆಲೆ ಇಳಿಸಿ ಜನರ ಹೊರೆ ಕಡಿಮೆ ಮಾಡುವವರೆಗೂ ಮುಂದುವರಿಯಲಿದೆ ಎಂಬ ಸಂದೇಶವನ್ನು ಕಾಂಗ್ರೆಸ್‌ ಪಕ್ಷವು ರವಾನಿಸಿತು.

ವಿಧಾನಸೌಧಕ್ಕೆ ಆಗಮಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ‘ಬಿಜೆಪಿ ಸರ್ಕಾರ ದಿನನಿತ್ಯ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಜನರ ಬದುಕು ದುಸ್ಥಿತಿಗೆ ತಲುಪಿದೆ. ಯಾರಿಗೂ ಸಂಬಳ ಹೆಚ್ಚಾಗಿಲ್ಲ. ಪಿಂಚಣಿ ಹೆಚ್ಚಾಗಿಲ್ಲ. ಕೋವಿಡ್ ಸಂದರ್ಭದಲ್ಲಿ ಯಾರಿಗೂ ಪರಿಹಾರ ಸಿಕ್ಕಿಲ್ಲʼ ಎಂದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇರುವಾಗ ಅದರ ಲಾಭ ಮಾತ್ರ ಜನಸಾಮಾನ್ಯರಿಗೆ ಸಿಗುವಂತೆ ಮಾಡಿಲ್ಲ. ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ, ಡೀಸೆಲ್ 94 ಆಗಿದೆ, ಅಡುಗೆ ಅನಿಲ 880 ರೂ. ಆಗಿದೆ. ಇದರಿಂದ ಇತರೆ ದಿನಬಳಕೆ ವಸ್ತುಗಳ ಬೆಲೆಯೂ ಹೆಚ್ಚಾಗಿದೆ.

ಇದನ್ನು ಓದಿ: ದೇಶದಲ್ಲಿ ನಿರುದ್ಯೋಗ ಶೇ.11.8 ಮತ್ತು ಸಾಲದ ಪ್ರಮಾಣ 135.8 ಲಕ್ಷ ಕೋಟಿಯಾಗಿರುವುದೇ ಬಿಜೆಪಿ ಸಾಧನೆ: ಸಿದ್ದರಾಮಯ್ಯ

ಪೆಟ್ರೋಲ್ ಬೆಲೆಯಲ್ಲಿ 25 ರೂ. ಡೀಸೆಲ್ ಬೆಲೆಯಲ್ಲಿ 20 ರೂ. ಹಾಗೂ ಅಡುಗೆ ಅನಿಲದ ಬೆಲೆ 150 ರೂ. ಕಡಿಮೆ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ  ತಮ್ಮ ತಾಳಿ, ಒಡವೆ ಮಾರಿಕೊಂಡು ಜೀವನ ಮಾಡುವ ಸ್ಥಿತಿಗೆ ತಲುಪಿದ್ದಾರೆ.

ಕೋವಿಡ್ ಸಮಯದಲ್ಲಿ ಜನರ ಆಸ್ಪತ್ರೆ ಬಿಲ್ ನೀಡಲಿಲ್ಲ, ಸತ್ತವರ ಕುಟುಂಬಕ್ಕೆ ಪರಿಹಾರ ನೀಡಲಿಲ್ಲ. ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ, ಅವರಿಗೆ ಧೈರ್ಯ ತುಂಬಲಿಲ್ಲ.

ಸರ್ಕಾರದ ಈ ಜನವಿರೋಧಿ ನೀತಿ ವಿರೋಧಿಸಿ ನಾವಿಂದು ಈ ಪ್ರತಿಭಟನೆ ಮಾಡಿದ್ದೇವೆ. ಜನರ ಪರ ಧ್ವನಿ ಎತ್ತಲು ನಾವು ಮೊನ್ನೆ ಎತ್ತಿನ ಗಾಡಿಯಲ್ಲಿ ಸದನಕ್ಕೆ ಆಗಮಿಸಿದ್ದೆವು. ಇಂದು ಸೈಕಲ್ ಮೂಲಕ ಆಗಮಿಸಿದ್ದೇವೆ. ಸರ್ಕಾರ ಬೆಲೆ ಇಳಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯಲಿದೆ. ಜನರು ಕೂಡ ಈ ಕೆಟ್ಟ ಸರ್ಕಾರ ಕಿತ್ತೊಗೆಯಲು ಸಜ್ಜಾಗಬೇಕು ಎಂದು ಕರೆ ನೀಡುತ್ತೇನೆ ಎಂದಿದ್ದಾರೆ.

ಸೈಕಲ್‌ ಜಾಥಾದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಹ್ಯಾರಿಸ್, ಡಾ. ರಂಗನಾಥ್, ಎಂಎಲ್ಸಿಗಳಾದ ಎಸ್. ರವಿ, ಯು.ಬಿ. ವೆಂಕಟೇಶ್, ಗೋವಿಂದರಾಜು ಮತ್ತಿತರರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *