ಸಂಡೂರು: ತೋರಣಗಲ್ಲು ಗ್ರಾಮದ ಬಸ್ ನಿಲ್ದಾಣದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ), ಗ್ರಾಮ ಘಟಕ ನೇತೃತ್ವದಲ್ಲಿ ಆಂಧ್ರಪ್ರದೇಶದ ಆರು ವರ್ಷದ ಬಾಲಕಿ ಮತ್ತು ದೆಹಲಿಯ ಮಹಿಳಾ ಪೋಲಿಸ್ ಪೇದೆ ಹಾಗೂ ಮೈಸೂರು, ಮುಂಬೈ ಹಲವಾರು ಕಡೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸರಣಿ ಅತ್ಯಚಾರ ಕೊಲೆ ಪ್ರಕರಣಗಳನ್ನು ಖಂಡಿಸಿ ಹಾಗೂ ಕಾಮುಕರಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಒತ್ತಾಯಿಸಿ ಮೊಂಬತ್ತಿ ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಪ್ರತಿಭಟಿಸಲಾಯಿತು.
ತಾಲೂಕು ಕಾರ್ಯದರ್ಶಿ ಹೆಚ್.ಸ್ವಾಮಿ ಮಾತನಾಡಿ ʻʻದೇಶ ಮತ್ತು ರಾಜ್ಯದ ಉದ್ದಗಲಕ್ಕೂ ಇತ್ತೀಚಿನ ದಿನಗಳಲ್ಲಿ ಸರಣಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಆಂಧ್ರಪ್ರದೇಶದ ಹೈದ್ರಾಬಾದ ಮೂಲದಲ್ಲಿ ಆರು ವರ್ಷದ ಬಾಲಕಿ ಮತ್ತು ದೆಹಲಿಯ ಮಹಿಳಾ ಪೊಲೀಸ್ ಪೇದೆ ಮೇಲೆ ಅತ್ಯಾಚಾರ ಘಟನೆಗಳಿಗೆ ಕಾರಣಕರ್ತರಾದ ಕಾಮುಕ ಪುಂಡರುಗಳಿಗೆ ಕಠಿಣ ಶಿಕ್ಷೆ ಮಾತ್ರವಲ್ಲದೆ, ಗಲ್ಲುಶಿಕ್ಷೆ ಕೊಡುವ ಕಾನೂನು ಜಾರಿಯಾಗಬೇಕು ಹಾಗಾದರೆ ಮಾತ್ರ ಇಂತಹ ಭೀಕರವಾದ ಪ್ರಕರಣಗಳು ನಿಲ್ಲಲು ಸಾಧ್ಯʼʼ ಎಂದು ಕರೆ ನೀಡಿದರು.
ಇದನ್ನು ಓದಿ: ರಾಜ್ಯ ಮಹಿಳಾ ಆಯೋಗ ಅಧ್ಯಕ್ಷರ ಭೇಟಿಗೆ ಅವಕಾಶ ನೀಡದ ಪೊಲೀಸರು: ಪ್ರತಿಭಟನಾಕಾರರ ಆಕ್ರೋಶ
ತಾಲ್ಲೂಕು ಸಹಾ ಕಾರ್ಯದರ್ಶಿ ಸೈಯದ್ ಶರೀಪ್ ಮಾತನಾಡಿ ʻʻಹೆಣ್ಣನ್ನು ಮಹಾಲಕ್ಷ್ಮೀ ಎಂದು ಗೌರವದಿಂದ ಕಾಣುವ ಪರಂಪರೆ ನಮ್ಮ ಭಾರತ ದೇಶ ಪುರಾತನ ಕಾಲದಿಂದಲೂ ಹೊಂದಿದೆ.ಅಂತಹ ದೇಶದಲ್ಲಿ ಹಾಡುಹಗಲೇ ಒಬ್ಬ ಹೆಣ್ಣು ಮಗಳನ್ನು ಅಮಾನುಷವಾಗಿ ಅತ್ಯಾಚಾರ ಮಾಡುವುದಲ್ಲದೇ ಅವಳನ್ನು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡುವ ಹಂತಕ್ಕೆ ನಮ್ಮ ಯುವಜನತೆ ತಲುಪಿದೆ. ಇಂತಹ ಸಂದಿಗ್ದ ಪರಿಸ್ಧಿತಿಗಳಿಗೆ ಕೇಂದ್ರದ ಬಿಜೆಪಿ ಸರ್ಕಾರ ನೇರ ಹೊಣೆ. ಯುವಕರಿಗೆ ಉತ್ತಮ ಶಿಕ್ಷಣ ಸಿಗದೇ ಸರಿಯಾದ ಉದ್ಶೋಗ ಸಿಗದೇ ಈ ರೀತಿಯ ಕೌರ್ಯಕ್ಕೆ ಮುಂದಾಗುತ್ತಿದ್ದಾರೆʼʼ ಎಂದರು.
ಡಿ.ಎಚ್.ಎಸ್. ಸಂಡೂರು ವಿಭಾಗದ ಎ.ಸ್ವಾಮಿ ಮಾತನಾಡಿ ನಮ್ಮ ದೇಶದ ಅಕ್ಕ, ತಂಗಿ, ತಾಯಂದಿರು ನಿರ್ಭಯವಾಗಿ ಓಡಾಡುವವರು ಪ್ರಸಕ್ತ ಸಂದರ್ಭದಲ್ಲಿ ಭಯದ ವಾತಾವರಣದಲ್ಲಿ ಇದ್ದಾರೆ. ಇಂತಹ ಪರಿಸ್ಥಿತಿ ತಂದಿರುವ ನಮ್ಮನ್ನು ಆಳುವಂತಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ಬಡಜನರ ಮದ್ಯ ಇಂತಹ ಕ್ರೂರ ಕೃತ್ಯಗಳನ್ನು ನಡೆಸುತ್ತಿರುವ ಮೂಲ ಪಾತ್ರಧಾರಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಜರುಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ತೋರಣಗಲ್ಲು ಗ್ರಾಮ ಘಟಕದ ಅಧ್ಯಕ್ಷರಾದ ಶಿವು ನಿರೂಪಿಸಿದರು. ಕಾರ್ಯದರ್ಶಿ ಹುಲಿ ವಂದಿಸಿದರು. ವೇಬಾಕುಮಾರಿ , ಷಣ್ಮುಖ , ರವಿ, ಗಣೇಶ್, ಚಂದ್ರ, ಅಮರ, ವಂಶಿ, ರೂಪ, ಅಶೋಕ, ಶಿವುಕುಮಾರ್ ಇತರರು ಭಾಗವಹಿಸಿದ್ದರು.