ಹಿಂದಿ ದಿವಸ ವಿರೋಧಿಸಿ ರಾಜ್ಯಾದ್ಯಂತ ಕರವೇ ಪ್ರತಿಭಟನೆ

ಹಿಂದಿ ದಿವಸ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಾಜ್ಯದಾದ್ಯಂತ ವಿವಿದೆಡೆಗಳಲ್ಲಿ ಪ್ರತಿಭಟನೆಗಳು ನಡೆಸಿವೆ. ಮಧ್ಯಾಹ್ನ ನಾಲ್ಕು ಸುಮಾರಿಗೆ ರಾಷ್ಟ್ರೀಕೃತ, ಗ್ರಾಮೀಣ ಮತ್ತು ಖಾಸಗಿ ಬ್ಯಾಂಕ್‌ಗಳ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಹಿಂದಿ ಹೇರಿಕೆ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲೂ ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಹಿಂದಿ ದಿವಸ ಆಚರಣೆ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಕರ್ನಾಟಕದ ಎಲ್ಲ ಬಗೆಯ ಬ್ಯಾಂಕುಗಳು, ಕನ್ನಡದಲ್ಲೇ ವ್ಯವಹರಿಸಬೇಕು. ಬ್ಯಾಂಕಿನಲ್ಲಿ ಬಳಕೆಯಾಗುವ ಚಲನ್, ಚೆಕ್ ಪುಸ್ತಕ, ಪಾಸ್‌ಬುಕ್‌ಗಳಲ್ಲಿ ಕನ್ನಡ ಬಳಕೆಯಾಗಬೇಕು. ಎಟಿಎಂಗಳಲ್ಲಿ ಕನ್ನಡದ ಆಯ್ಕೆ ಇರಬೇಕು. ಗ್ರಾಹಕರೊಂದಿಗೆ ಕನ್ನಡದಲ್ಲೇ ಮಾತನಾಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು. ಕನ್ನಡೇತರ ಬ್ಯಾಂಕ್ ಸಿಬ್ಬಂದಿ ಕನ್ನಡ ಕಲಿತು ಕನ್ನಡದಲ್ಲಿ ವ್ಯವಹರಿಸಬೇಕು, ಇಲ್ಲದಿದ್ದರೆ ಅವರನ್ನು ತವರು ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಲಾಯಿತು.

ಇಂದು‌ ಬೆಳಿಗ್ಗೆ ಹತ್ತು ಗಂಟೆಯಿಂದಲೇ ಲಕ್ಷಾಂತರ ಕರವೇ ಕಾರ್ಯಕರ್ತರು ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲೂ ಬೀದಿಗಿಳಿದು ಪ್ರತಿಭಟಿಸಿದರು. ಹಲವೆಡೆ ಪಾದಯಾತ್ರೆ, ಬೈಕ್ ರ‍್ಯಾಲಿ ಮೂಲಕ ಬ್ಯಾಂಕ್‌ಗಳ ಬಳಿ ತೆರಳಿದರು. ‘ಹಿಂದಿ ಹೇರಿಕೆಗೆ ಧಿಕ್ಕಾರ’ ‘ಒಕ್ಕೂಟ ಸರ್ಕಾರದ ಮಲತಾಯಿ ಧೋರಣೆಗೆ ಧಿಕ್ಕಾರ’ ಎಂದು ಘೋಷಣೆಗಳನ್ನು ಕೂಗಲಾಯಿತು.

ರಾಜ್ಯದ ಎಲ್ಲ ಭಾಗಗಳಲ್ಲೂ ಇಂದು ಕರವೇ ಕಾರ್ಯಕರ್ತರು ಸಂಸದರು ಮತ್ತು ಶಾಸಕರ ಕಚೇರಿಗಳಿಗೆ ತೆರಳಿ ಆಗ್ರಹಪತ್ರಗಳನ್ನು ಸಲ್ಲಿಸಿದರು. ಒಕ್ಕೂಟ ಸರ್ಕಾರ ಸಂವಿಧಾನದ 343, 351ನೇ ಪರಿಚ್ಛೇದಗಳಿಗೆ ತಿದ್ದುಪಡಿ ತಂದು, ಹಿಂದಿ ಭಾಷೆಗೆ ನೀಡಲಾಗಿರುವ ವಿಶೇಷ ಆದ್ಯತೆಗಳನ್ನು ತೆಗೆದುಹಾಕಬೇಕು. ಎಲ್ಲ ಭಾರತೀಯ ಭಾಷೆಗಳೂ ಸಮಾನ ಎಂದು ಸಂವಿಧಾನದಲ್ಲಿ ಘೋಷಿಸಬೇಕು. ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳನ್ನೂ ಒಕ್ಕೂಟ ಸರ್ಕಾರದ ಆಡಳಿತ ಭಾಷೆಯನ್ನಾಗಿ ಮಾಡಬೇಕು ಎಂದು ಆಗ್ರಹಪತ್ರದಲ್ಲಿ ಒತ್ತಾಯಿಸಲಾಗಿದೆ. ಜನಪ್ರತಿನಿಧಿಗಳು ಶಾಸನ ಸಭೆಗಳಲ್ಲಿ ಈ ವಿಷಯವನ್ನು ಮಾತನಾಡಿ, ಕನ್ನಡಿಗರ ಪರವಾಗಿ ಧ್ವನಿ ಎತ್ತಬೇಕು ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ ಅವರು ಹಿಂದಿ ದಿವಸ ಎಂಬ ಆಚರಣೆ ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ ಅನೈತಿಕ. ದೇಶದ ಪ್ರಜೆಗಳೆಲ್ಲರೂ ಸಮಾನರು ಎಂಬ ಸಂವಿಧಾನದ ಆಶಯಕ್ಕೆ ವಿರುದ್ಧ. ಕನ್ನಡಿಗರು ಮಾತ್ರವಲ್ಲದೆ ಎಲ್ಲ ಹಿಂದಿಯೇತರ ಭಾಷಾ ಸಮುದಾಯಗಳು ಮತ್ತು ಸಮಾನತೆಯಲ್ಲಿ ನಂಬಿಕೆ ಇಟ್ಟ ಹಿಂದಿ ಭಾಷಿಕರು ಇದನ್ನು ವಿರೋಧಿಸಬೇಕು ಎಂದು ಕರೆ ನೀಡಲಾಗಿದೆ. ಭಾರತ ಒಕ್ಕೂಟದಲ್ಲಿ ನಾವು ಯಾರ ಅಡಿಯಾಳೂ ಅಲ್ಲ. ಭಾರತ ಒಕ್ಕೂಟದಲ್ಲಿ ಪ್ರಥಮ ದರ್ಜೆ ಪ್ರಜೆಗಳು, ಎರಡನೇ ದರ್ಜೆ ಪ್ರಜೆಗಳು ಎಂಬ ಎರಡು ವಿಭಾಗ ಇರಲು ಸಾಧ್ಯವೇ ಇಲ್ಲ ಎಂದರು.

ಅಭಿಯಾನ

ಇಂದು ಬೆಳಿಗ್ಗೆಯಿಂದಲೇ ಹಿಂದಿಹೇರಿಕೆನಿಲ್ಲಿಸಿ ಎಂದು ಅಭಿಯಾನವನ್ನು ಕೈಗೊಂಡಿರುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ರಾತ್ರಿ ಹತ್ತು ಗಂಟೆಯವರೆಗೆ ಟ್ವಿಟರ್ ಆಂದೋಲನಕ್ಕೆ ಕರೆ ನೀಡಿದ್ದರು. ಎರಡೂ ಹ್ಯಾಶ್ ಟ್ಯಾಗ್ ಗಳು ಇಂದು ರಾಷ್ಟ್ರಮಟ್ಟದಲ್ಲಿ ಟ್ರೆಂಡ್ ಆದವು. ಲಕ್ಷಾಂತರ ಟ್ವೀಟ್ ಗಳ ಮೂಲಕ ಒಕ್ಕೂಟ ಸರ್ಕಾರದ ಹಿಂದಿ ಹೇರಿಕೆ ನೀತಿಯನ್ನು ಖಂಡಿಸಲಾಯಿತು.

Donate Janashakthi Media

Leave a Reply

Your email address will not be published. Required fields are marked *