ತೋರಣಗಲ್ : ಗ್ರಾಮದಲ್ಲಿ ಶೌಚಾಲಯ ವ್ಯವಸ್ಥೆ ಮಾಡಿಕೊಡದ್ದಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯನ್ನು ಸ್ಥಳೀಯರು ಕೂಡಿ ಹಾಕಿದ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ನಡೆದಿದೆ.
ಗ್ರಾ.ಪಂ. ಕಾರ್ಯಾಲಯದಲ್ಲಿ ಅಧ್ಯಕ್ಷೆ ಮಂಗಳಮ್ಮ ಮತ್ತು ಗ್ರಾ.ಪಂ ಸದಸ್ಯ ಮಹಾಂತೇಶರನ್ನ ಒಳಗೆ ಕೂಡಿ ಹಾಕಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಸಂಡೂರು ತಾಲೂಕಿನ ತೋರಣಗಲ್ ಹೋಬಳಿ ವಿಠಲಾಪುರ ಗ್ರಾಮದ 2ನೇ ವಾರ್ಡಿನಲ್ಲಿ ಶೌಚಾಲಯ ಇಲ್ಲದೇ ವೃದ್ಧರು ಹಾಗೂ ಮಹಿಳೆಯರು ಪರದಾಡುತ್ತಿದ್ದರೂ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸರ್ಕಾರದಿಂದ ಮನೆಗೊಂದು ಶೌಚಾಲಯ ವ್ಯವಸ್ಥೆ ಗೆ ಅನುದಾನ ಕೊಡಲಾಗ್ತಿದೆ. ಎಷ್ಟೇ ಮನವಿ ಮಾಡಿದರೂ ಶೌಚಾಲಯ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಗ್ರಾ.ಪಂ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನಮ್ಮ ಮನವಿಯನ್ನು ಅವರು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂಬುದು ಜನರ ಆರೋಪವಾಗಿದೆ. ವಿಠಲಾಪುರ ಗ್ರಾಮದಲ್ಲಿ ಕಲ್ಲಿನ ಸಮಸ್ಯೆಯಿಂದಾಗಿ ಗುಂಡಿಗಳನ್ನ ತೆಗೆಯಲು ಸರ್ಕಾರ ನೀಡುವ ಪ್ರೋತ್ಸಾಹ ಧನ ಸಾಕಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶೌಚಾಲಯ ನಿರ್ಮಿಸುವ ಯೋಜನೆ ಈ ಗ್ರಾಮದಲ್ಲಿ ವಿಫಲವಾಗಿದೆ. ಶೌಚಾಲಯಕ್ಕೆ ಹೆಚ್ಚಿನ ಪ್ರೋತ್ಸಾಹಧನ ನೀಡಬೇಕು ಹಾಗೂ ಡ್ರೈನೇಜ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.