ವಿಮಲಾ .ಕೆ.ಎಸ್
ಸೆಪ್ಟೆಂಬರ್ 1ರಂದು ಕರ್ನಾಟಕ ನೂತನ ಶಿಕ್ಷಣ ನೀತಿ 2020 ಜಾರಿ ಮಾಡಿದ ಮೊದಲ ರಾಜ್ಯವಾಗಿದೆ. ರಾಜ್ಯದ ಉನ್ನತ ಶಿಕ್ಷಣ ಸಚಿವರೇ ರಾಜ್ಯದಾದ್ಯಂತ ಇರುವ ವಿಶ್ವವಿದ್ಯಾಲಯಗಳಲ್ಲಿ ಈ ನೀತಿಯ ಪ್ರಚಾರ ಕಾರ್ಯ ನಡೆಸಿ ಅಲ್ಲಿ ತಮಗೆ ಬೇಕಾದವರಿಂದ ಈ ನೀತಿಯ ಪರವಾಗಿ ಮಾತುಗಳನ್ನಾಡಿಸುತ್ತಿದ್ದಾರೆ. ಇದು ನಿಜವಾಗಿಯೂ ಉತ್ತಮ ನೀತಿಯೇ ಆಗಿದ್ದರೆ ಇಂಥಹ ಮುಚ್ಚುಮರೆಯ ಕಣ್ಣುಮುಚ್ಚಾಲೆಯಾಟದ ಅಗತ್ಯವಿತ್ತೇ? ಸರಕಾರ ನಿರ್ಭಿಡೆಯಿಂದ ವಿಧಾನಸಭೆಯಲ್ಲಿ ಮಂಡಿಸಿ ಚರ್ಚೆಗೆ ಬಿಟ್ಟು, ರಾಜ್ಯದ ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ಮಾಡಿ ಪ್ರಾಥಮಿಕ ಹಂತದಿಂದ ಪ್ರಾರಂಭಿಸಿ ಹಂತ ಹಂತವಾಗಿ ಶುರು ಮಾಡಬಹುದಿತ್ತಲ್ಲ. ಅದಿಲ್ಲದೇ ಈಗಿನ ಕಾರ್ಯವೈಖರಿ ನೋಡಿದರೆ… ಅಲ್ಲೊಂದು ಸಂಚು ಕಾಣಿಸುತ್ತದೆ.
ಸುಸ್ಥಿರ ಅಭಿವೃದ್ದಿಯ ಕಾರ್ಯಸೂಚಿ 2030ರ ಕಾರ್ಯಸೂಚಿಯ ಜಾರಿಯ ಬಗ್ಗೆ ಬಹಳ ಮಾತುಗಳು ಕೇಳಿ ಬರುತ್ತಿವೆ. 2030ರ ವೇಳೆಗೆ ದೇಶ ಸಮೃದ್ಧವಾದ, ಸಮಗ್ರವಾದ ಅಭಿವೃದ್ದಿಯನ್ನು ಸಾಧಿಸಿಬಿಡುತ್ತದೆ. ಆಹಾ ಮೂಗಿನ ತುದಿಯ ತುಪ್ಪ, ಘಮ ಘಮ. ಏನ್ಮಾಡೋದು? ನೆಕ್ಕಲು ಸಿಗದು, ಒರೆಸಿ ಹಾಕಲು ಮನಸ್ಸು ಒಗ್ಗದು. ಹೀಗೆ ಹಿಂದೊಮ್ಮೆ ಹೇಳಲಾಗಿತ್ತು. ಅದರ ಪ್ರಕಾರ 2000ದ ವೇಳೆಗೆ ಎಲ್ಲ ದೇಶಗಳಲ್ಲಿಯೂ ಆರೋಗ್ಯ ತುಂಬಿ ತುಳುಕಾಡುತ್ತದೆ. ಆಸ್ಪತ್ರೆ ವೈದ್ಯರು ಇತ್ಯಾದಿಗಳೆಲ್ಲ ಯಕಃಶ್ಚಿತ್ ಅಗತ್ಯಗಳಾಗುತ್ತವೆ ಎಂದು. ಮತ್ತು ನಂತರವೂ ರಾಷ್ಟ್ರೀಯ ಮಹಿಳಾ ಅಭಿವೃದ್ದಿಯ ಕಣ್ಣೊಟ ಎಂಬೊಂದು ಬಂತು. ಅದೂ ಕೂಡ ಮಹಿಳೆಯರು ಸಾಧಿಸಿಯೇ ಬಿಡುತ್ತಾರೆ ಎಲ್ಲ ಸಮಾನತೆಗಳನ್ನು ಎಂದು ಸಾರಿತು.
ಈಗ ಈ ಸುಸ್ಥಿರ ಅಭಿವೃದ್ದಿಯ ಕಾರ್ಯಸೂಚಿಯ ಭಾಗವಾಗಿ ನೂತನ ಶಿಕ್ಷಣ ನೀತಿಯನ್ನು ತೋರಿಸಲಾಗುತ್ತಿದೆ. ನೂತನ ಶಿಕ್ಷಣ ನೀತಿಯ ಪರಿಚಯದಲ್ಲಿ 2030ರ ವೇಳೆಗೆ ‘ಪ್ರತಿಯೊಬ್ಬರಿಗೂ ಸಮಾವಿಷ್ಟವಾದ ಮತ್ತು ಸಮಾನವಾದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಹಾಗೂ ಜೀವನಪರ್ಯಂತ ಕಲಿಕೆಯ ಅವಕಾಶಗಳನ್ನು ಖಾತರಿಯಾಗಿ ಒದಗಿಸಿಕೊಡುವ ಉದ್ದೇಶವನ್ನು ಹೊಂದಿದೆ.’ ’ಇಂಥ ಉನ್ನತವಾದ ಗುರಿ ಸಾಧನೆ ಮಾಡಬೇಕಾದರೆ 2030ರ ಸುಸ್ಥಿರ ಬೆಳವಣಿಗೆ ಕಾರ್ಯಸೂಚಿಯ ಎಲ್ಲ ಮಹತ್ವ ಪೂರ್ಣವಾದ ಉದ್ದೇಶಗಳನ್ನು ಮತ್ತು ಗುರಿಗಳನ್ನು ಸಾಧಿಸಲು ಸಾಧ್ಯವಾಗುವಂತೆ ಕಲಿಕೆಯನ್ನು ಪೋಷಿಸಿ ಅದಕ್ಕೆ ಬೆಂಬಲ ನೀಡಲು ಸಮರ್ಥವಾಗುವಂತೆ ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯನ್ನು ಮರುವಿನ್ಯಾಸ ಮಾಡಬೇಕಿದೆ’ ಎಂದು ಹೇಳಿಕೊಂಡಿದೆ.
ಮರುವಿನ್ಯಾಸ: 10+2 -> 5+3+3+4
ಹಾಗಾದರೆ ಏನೀ ಮರುವಿನ್ಯಾಸ ಎಂಬುದನ್ನು ಗಮನಿಸಿದರೆ 34 ವರ್ಷಗಳ ನಂತರ ರೂಪಿಸಿರುವ ಈ ರಾಷ್ಟ್ರೀಯ ನೀತಿಯಂತೆ ಈಗಿರುವ 10+2 ವ್ಯವಸ್ಥೆಯ ಬದಲಿಗೆ ಹೊಸ ವ್ಯವಸ್ಥೆಯು 5+3+3+4 ಮಾದರಿಯನ್ನಾಗಿ ಬದಲಾಯಿಸುತ್ತದೆ. ಮೇಲ್ನೋಟಕ್ಕೆ ಪಠ್ಯ ಮತ್ತು ನೀತಿಯ ಪಠ್ಯದಲ್ಲಿರುವ ಶಬ್ದಾಡಂಬರಗಳು ಯಾರನ್ನಾದರೂ ಮರುಳುಗೊಳಿಸುವ ರೀತಿಯಲ್ಲಿದೆ. ಇದರ ಅನುಷ್ಠಾನದ ಹಂತದಲ್ಲಿ ಎರಗಬಹುದಾದ ಅಪಾಯ ಮತ್ತು ಅದು ಸುಸ್ಥಿರ ಅಭಿವೃದ್ದಿಯ ಕಲ್ಪನೆಯನ್ನು ಎಲ್ಲರಿಗೂ ಸಾಕಾರಗೊಳಿಸಲು ಸಂಪೂರ್ಣ ವಿಫಲವಾಗುತ್ತದೆ ಎಂಬುದಕ್ಕೆ ಹಲವು ದೃಷ್ಟಾಂತಗಳು ಸೂಕ್ಷ್ಮವಾಗಿ ನೋಡಿದರೆ ಆ ಪಠ್ಯದೊಳಗಿನಿಂದಲೇ ಸಿಗುತ್ತವೆ.
ಇದನ್ನು ಓದಿ: ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬೇಡ – ಎಸ್.ಎಫ್.ಐ ಆಗ್ರಹ
ಪ್ರಾಥಮಿಕದ ಮೊದಲು ಬರಲಿರುವ ಪೂರ್ವ ಪ್ರಾಥಮಿಕವನ್ನು ಶಾಲಾ ವ್ಯವಸ್ಥೆಗೆ ಜೋಡಣೆ ಮಾಡುವ ಮೂಲಕ ಈಗ ಸುವ್ಯವಸ್ಥಿತವಾಗಿ ನಡೆಯುತ್ತಿರುವ ಅಂಗನವಾಡಿ ಬಿಸಿಯೂಟದಂಥಹ ವ್ಯವಸ್ಥೆಗಳನ್ನು ಬುಡಮೇಲು ಮಾಡುವ ಇರಾದೆ ಗೋಚರಿಸುತ್ತಿದೆ. ಅಂಗನವಾಡಿ ಮತ್ತು ಬಿಸಿಯೂಟಗಳ ಮೂಲಕ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ ಎಂಬುದು ನಮಗೆಲ್ಲ ತಿಳಿದ ಸಂಗತಿ. ಈ ದೇಶದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮತ್ತು ಬೆಳವಣಿಗೆ ಕುಸಿತ ಕಂಡಿರುವ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಅದರ ನಿವಾರಣೆಯ ಭಾಗವಾಗಿಯೂ ಅಂಗನವಾಡಿ ಬಿಸಿಯೂಟದ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. ಈಗ ಪೂರ್ವ ಪ್ರಾಥಮಿಕವನ್ನು ಶಾಲೆಗಳ ಜೊತೆ ಜೋಡಿಸುವ ಕ್ರಮ ಆ ಪೌಷ್ಟಿಕಾಂಶ ಪೂರೈಕೆಗೆ ಏನು ವ್ಯವಸ್ಥೆ ಎಂಬುದನ್ನು ಸ್ಪಷ್ಟಪಡಿಸಿಲ್ಲ ಎನ್ನುವುದೊಂದು ಸಂಗತಿ ಇದೆ. ಸುಸ್ಥಿರ ಅಭಿವೃದ್ದಿಯ ಭಾಗ ಜನರ ಅಪೌಷ್ಟಿಕತೆಯನ್ನು ನೀಗುವುದೂ ಒಂದು ಎಂಬುದು ಹೃದಯವಂತರ ಮತ್ತು ವಿವೇಕಿಗಳ ಅಭಿಪ್ರಾಯ. ಮತ್ತು ಕಳೆದ ಹಲವಾರು ವರ್ಷಗಳಿಂದ ಯೋಜನಾ ಕಾರ್ಮಿಕರಾಗಿ ದುಡಿಯುತ್ತಿರುವ ಸಾವಿರಾರು ಅಂಗನವಾಡಿ ಮತ್ತು ಬಿಸಿಯೂಟದ ನೌಕರರನ್ನು (ಸರಕಾರ ಅವರನ್ನು ಕಾರ್ಯಕರ್ತರೆಂದು ಮತ್ತು ಸಂಭಾವನೆ/ಗೌರವ ಧನ ಪಡೆಯುವವರೆಂದು ಪರಿಗಣಿಸಿದರೂ) ಬೀದಿಗೆ ತಳ್ಳಿ ಸಾಧಿಸುವುದು ಸುಸ್ಥಿರ ಅಭಿವೃದ್ದಿಯಾಗಲಾರದು.
ಮೂರನೇ ಮಾಳಿಗೆಯಿಂದ ಮನೆ ಕಟ್ಟಲು ಪ್ರಾರಂಭ
ಇದೊಂದು ಪ್ರಾಥಮಿಕ ಸಂಗತಿ. ಇದರ ಜೊತೆಗೇ ಇಡೀ ಸಮಾಜದಲ್ಲಿ ಕ್ರಾಂತಿಕಾರಕ ಸುಧಾರಣೆಯನ್ನು ತರ ಹೊರಟಿರುವ ನಮ್ಮ ಘನ ಸರಕಾರವು ಬದಲಾವಣೆಯನ್ನು ಮಾಡಲು ಬೇಕಾದ ತಯಾರಿಯನ್ನೇ ಮಾಡದೇ ಜಾರಿಗೊಳಿಸ ಹೊರಟಿದೆ. ಅಲ್ಪಸ್ವಲ್ಪ ಆಲೋಚನಾ ಸಾಮರ್ಥ್ಯವನ್ನು ಹೊಂದಿದವರೂ ಕೂಡ ಮನೆಯನ್ನು ಕಟ್ಟಬೇಕಾದರೆ ಭದ್ರ ಬುನಾದಿಯೊಂದಿಗೆ ಕಟ್ಟುತ್ತಾರೆ. ಯಾರೂ ಮಾಳಿಗೆಯಿಂದ ಪ್ರಾರಂಭಿಸಿ ಮನೆ ಕಟ್ಟಲು ಸಾಧ್ಯವಾಗದು. ನಮ್ಮ ಕರ್ನಾಟಕ ಸರಕಾರ ತಮ್ಮ ದೊರೆಗಳನ್ನು ಮೆಚ್ಚಿಸಲು ಮೂರನೇ ಮಾಳಿಗೆಯಿಂದ ಮನೆ ಕಟ್ಟಲು ಪ್ರಾರಂಭಿಸಿದೆ. ಇಲ್ಲಿಯೇ ಇದೆ ನಮ್ಮ ಪ್ರಶ್ನೆಗೆ ಉತ್ತರ ಸುಸ್ಥಿರ ಅಭಿವೃದ್ದಿ ಆಗಲಿದೆ ಯಾರದ್ದು ಎಂದು. ಯಾರದ್ದೆಂದರೆ ಖಾಸಗೀ ಶಿಕ್ಷಣ ಸಂಸ್ಥೆಗಳದ್ದು. ಅದು ಹೇಗೆ?
ಕರ್ನಾಟಕ ಸರಕಾರವು ಸಮವರ್ತಿ ಪಟ್ಟಿಯಲ್ಲಿ ಬರುವ ಶಿಕ್ಷಣವನ್ನು ರಾಜ್ಯದ ವಿಧಾನಸಭೆಯಲ್ಲಿಯೂ ಚರ್ಚೆ ಮಾಡದೇ, ನಾಡಿನ ಹಲವು ಶಿಕ್ಷಣ ತಜ್ಞರು ಪ್ರಾರಂಭದಿಂದಲೇ ಈ ಶಿಕ್ಷಣ ನೀತಿಯ ಸ್ವರೂಪದ ಕುರಿತು ಆಕ್ಷೇಪ ಎತ್ತಿದರೂ ಕಡೆಗಣಿಸಿ ಇದನ್ನು ಜಾರಿ ಮಾಡುತ್ತಿದೆ. ಹಾಗೆ ಮಾಡುವ ಮೂಲಕ ರಾಜ್ಯದ ಸಾಂವಿಧಾನಿಕ ಹಕ್ಕನ್ನು ಕಿತ್ತುಕೊಳ್ಳಲು ತೆರೆದ ಬಟ್ಟಲಲ್ಲಿಟ್ಟು ಕೇಂದ್ರ ಸರಕಾರಕ್ಕೆ ಅವಕಾಶ ಕಲ್ಪಿಸಿದೆ. ನಮ್ಮದು ಒಕ್ಕೂಟ ವ್ಯವಸ್ಥೆ ಮತ್ತು ಕೇಂದ್ರದಲ್ಲಿರುವುದು ಒಕ್ಕೂಟ ಸರಕಾರ ಎಂಬುದನ್ನು ಮರೆತ ಸರ್ವಾಧಿಕಾರೀ ಧೋರಣೆಯ ಮುಂದೆ ಶರಣಾಗತವಾಗಿದೆ. ಆ ಮೂಲಕ ರಾಜ್ಯದ ಹಿತವನ್ನು ಕಡೆಗಣಿಸಿದೆ ಮತ್ತು ಇಲ್ಲಿನ ಶಾಸಕರ ಹಕ್ಕುಗಳನ್ನು ಪ್ರಜಾಪ್ರತಿನಿಧಿಗಳ ಚರ್ಚೆಯ ಹಕ್ಕನ್ನು ಮೊಟಕುಗೊಳಿಸಿದೆ. ಇದು ಅಂಗೀಕಾರಾರ್ಹವಲ್ಲ.
ಯಾವುದೇ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವುದು ಎಂದರೆ ಸಾಕಷ್ಟು ಪೂರ್ವ ಸಿದ್ಧತೆಗಳ ಅಗತ್ಯವಿರುತ್ತದೆ. ಅದರಲ್ಲಿಯೂ ದೇಶದ ಭವಿಷ್ಯಗಳಾದ ಮಕ್ಕಳ, ಯುವ ಸಮೂಹದ ಭವಿಷ್ಯವನ್ನು ಸಿದ್ಧಪಡಿಸುವ ಶಿಕ್ಷಣ ವ್ಯವಸ್ಥೆಯನ್ನು ಅಮೂಲಾಗ್ರ ಬದಲಾವಣೆಗೆ ತೆರೆಯುವಾಗ ಮಾಡಬೇಕಾದ ಯಾವ ಸಿದ್ಧತೆಗಳೂ ಇಲ್ಲದೆಯೇ ತರಾತುರಿಯಲ್ಲಿ ಶುರು ಮಾಡಿದ್ದು ಉನ್ನತ ಶಿಕ್ಷಣದಲ್ಲಿ ನೂತನ ಪದ್ಧತಿಯನ್ನು. ಇದಲ್ಲವೇ ಮಾಳಿಗೆಯಿಂದ ಮನೆ ಕಟ್ಟಲು ಪ್ರಾರಂಭಿಸುವ ಹುಸಿ ಪ್ರಯತ್ನ!!
ನೂತನ ಶಿಕ್ಷಣ ನೀತಿಯು ದೇಶದಲ್ಲಿ ಅಭಿವೃದ್ದಿಯ ಹೊಸ ಶಕೆಯನ್ನೇ ತೆರೆಯಲಿದೆ ಎಂದ ಈ ನೀತಿಯನ್ನು ತಳ ಹಂತದಿಂದ ಪ್ರಾರಂಭಿಸುವ ಬದಲು ಮೇಲ್ಮಾಳಿಗೆಯಿಂದ ಮನೆ ಕಟ್ಟುವ ಹಾಗೆ ಉನ್ನತ ಶಿಕ್ಷಣದಿಂದ ಪ್ರಾರಂಭಿಸಲಾಗಿದೆ.
ಇದನ್ನು ಓದಿ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಾಲಾ ಶಿಕ್ಷಣ; ಹೇಳಿದ್ದೇನು
ಈ ಶಿಕ್ಷಣ ನೀತಿಯಲ್ಲಿ ಬಹುಶಿಸ್ತೀಯ ಶಿಕ್ಷಣ ಪದ್ಧತಿಯ ಕುರಿತು ಹೇಳಲಾಗಿದೆ. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದ ಆಗುವ ಬದಲಾವಣೆಗೆ ಒಗ್ಗಿಸಿ ಪ್ರೌಢ ಮತ್ತು ಉನ್ನತ ಹಂತಕ್ಕೆ ತರುವುದು ಸರಿಯಾದ ಕ್ರಮ. ಆದರಿಲ್ಲಿ ಕಳೆದ ವರ್ಷದ ವರೆಗೆ ಇದ್ದ ಶಿಕ್ಷಣ ಕ್ರಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಇದ್ದಕ್ಕಿದ್ದ ಹಾಗೇ ಈ ಅವಧಿಗೆ ಹೊಸತೊಂದು ಬೋಧನಾಕ್ರಮಕ್ಕೆ ಒಗ್ಗಿಕೊಳ್ಳಿರೆಂದು ಶಿಕ್ಷಕರಿಗೂ ಮತ್ತು ವಿದ್ಯಾರ್ಥಿಗಳಿಗೂ ಹೇಳುತ್ತಿರುವುದರ ಹಿಂದೆ ಯಾವ ತರ್ಕವೂ ಕಾಣುತ್ತಿಲ್ಲ.
ನಾಲ್ಕು ವರ್ಷಗಳ ಪದವಿ = ಶಿಕ್ಷಣ ಮೊಟಕು
ಕೊವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ದಿನಚರಿಗಳು ಚಲ್ಲಾಪಿಲ್ಲಿಯಾಗಿರುವ ಹೊತ್ತಿಗೆ, ವಿದ್ಯಾರ್ಥಿಗಳು ಪಾಠ ಪ್ರವಚನಗಳಿಲ್ಲದೇ ಘೋಷಿತ ಪಾಸ್ ಮಾರ್ಕ್ಸ್ ಗಳಿಕೆಗೆ ಒಳಪಡಬೇಕಾದ ಸ್ಥಿತಿ ಇರುವಾಗ, ಪರಿಸ್ಥಿತಿ ಸುಧಾರಿಸುವವರೆಗೆ ತಾಳಲಾರದ ಒತ್ತಡ ಎಲ್ಲಿಂದ ಇತ್ತು ಕರ್ನಾಟಕ ಸರಕಾರಕ್ಕೆ ಎಂದು ಕೇಳಬೇಕಾದ ಶಿಕ್ಷಕ ಸಮೂಹ ಎಲ್ಲಿ ಹೋಗಿದೆ?
ಈ ಪದ್ಧತಿಯಲ್ಲಿ ಈ ಮೊದಲಿನ ಮೂರು ವರ್ಷಗಳ ಬದಲು ನಾಲ್ಕು ವರ್ಷಗಳ ಪದವಿಯನ್ನು ಸೂಚಿಸಿದೆ. ಯಾಕೆ ಎಂಬುದು ದೊಡ್ಡ ಪ್ರಶ್ನೆ. ಅದನ್ನು ಜನರು ಒಪ್ಪಿಕೊಂಡು ಬಿಡುವಂತೆ ಮಾಡುವ ಚಾಣಾಕ್ಷತೆ ಅದರ ಮಾದರಿಯಲ್ಲಿದೆ. ಆ ಮಾದರಿ ಏನೆಂದರೆ ಒಂದೇ ವರ್ಷದ ಪದವಿ ತರಗತಿಗಳನ್ನು ಮುಗಿಸಿ ಶಿಕ್ಷಣವನ್ನು ಮೊಟಕುಗೊಳಿಸಲು ವಿದ್ಯಾರ್ಥಿಯೊಬ್ಬರು ಬಯಸಿದರೆ ಅವರಿಗೆ ಒಂದು ಸರ್ಟಿಫಿಕೇಟ್ ನೀಡಲಾಗುತ್ತದೆ. ಮತ್ತು ನಂತರವೂ ಕೂಡಾ ಆ ಸರ್ಟಿಫಿಕೇಟಿನ ಆಧಾರದಲ್ಲಿ ಅವರು ಯಾವಾಗ ಬೇಕಾದರೂ ಮತ್ತೆ ವಿದ್ಯಾಭ್ಯಾಸವನ್ನು ಮುಂದುವರೆಸಬಹುದಂತೆ!. ಹಾಗೆಯೇ ಎರಡು ವರ್ಷ ಪೂರೈಸಿದರೆ ಡಿಪ್ಲೊಮಾ ಸರ್ಟಿಫಿಕೇಟ್ ದೊರೆಯುವುದಂತೆ. ಅದರ ಮೂಲಕವೂ ಉದ್ಯೋಗ ಪಡೆಯಬಹುದಂತೆ. ಎಂದರೆ ಯಾರು ಅಥವಾ ಯಾವ ವಿಭಾಗ ಹೀಗೆ ಶಿಕ್ಷಣವನ್ನು ಮೊಟಕುಗೊಳಿಸಿ ಉದ್ಯೋಗಕ್ಕೆ ಹೋಗುವ ವಿಭಾಗ ಮತ್ತು ಒಂದು ವರ್ಷದ ಪದವಿ ಅಥವಾ ಎರಡು ವರ್ಷದ ಡಿಪ್ಲೊಮಾ ಸರ್ಟಿಫಿಕೇಟ್ ಪಡೆದವರಿಗೆ ದೊರೆಯಬಹುದಾದ ಉದ್ಯೋಗ ಎಂಥಹುದು. ಇಲ್ಲಿಯೇ ಅರ್ಥ ಮಾಡಿಕೊಳ್ಳಬಹುದು. ಪಿರಮಿಡ್ ಮಾದರಿಯ ಶ್ರೇಣೀಕೃತ ಸಮಾಜವಾದ ಭಾರತದಲ್ಲಿ ಅಂಚಿಗೆ ತಳ್ಳಲ್ಪಟ್ಟ, ಆರ್ಥಿಕವಾಗಿ ತಲ್ಲಣಿಸುತ್ತಿರುವ ಬಹುಸಂಖ್ಯಾತ ಜನ ಸಮೂಹದ ಭವಿಷ್ಯಗಳು ಮಧ್ಯದಲ್ಲಿಯೇ ಶಿಕ್ಷಣ ತೊರೆದು ಕ್ವಚಿತ್ ಸಂಬಳಗಳಿಗೆ ದುಡಿಮೆಯ ಕ್ಷೇತ್ರಕ್ಕೆ ತಳ್ಳಲ್ಪಡುತ್ತಾರೆ. ಎಂದರೆ ಪದವಿ ಅಥವಾ ಪೂರ್ಣ ಶಿಕ್ಷಣ, ಉಳ್ಳವರಿಗೆ ಮಾತ್ರ ಎಂದಾಯಿತು. ಎಂದರೆ ಹೊಸ ನೀತಿ ಮುಂದಿನ ತಲೆಮಾರಿನ ತಳ ಹಂತದ ವಿಭಾಗಗಳ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸುವ ನೀತಿಯೇ ಆಗಿದೆ. ಸ್ವಾತಂತ್ರ್ಯದ 75ನೇ ಅಮೃತಮಹೋತ್ಸವದಲ್ಲಿ ಸ್ವತಂತ್ರ ಭಾರತದ ಈವರೆಗಿನ ಅಷ್ಟೋ ಇಷ್ಟೋ ಮಾಡಿದ ಸಾಧನೆಯನ್ನು ಹುಡಿಗೈಯುವ ಪ್ರಯತ್ನವಲ್ಲವೇ?
ಇನ್ನು ನಾಲ್ಕು ವರ್ಷಗಳ ಪದವಿ ಎನ್ನುವುದು ಬಹುತೇಕ ವಿದೇಶಗಳಲ್ಲಿ ಉನ್ನತೋನ್ನತ ವ್ಯಾಸಂಗ ಮಾಡುವವರಿಗೆ ನೆರವಾಗಲಿದೆ. ಯಾಕೆಂದರೆ ಅಮೆರಿಕಾದಂಥಹ ದೇಶಗಳಲ್ಲಿ ನಾಲ್ಕು ವರ್ಷಗಳ ಪದವಿ ಪದ್ಧತಿ ಜಾರಿಯಲ್ಲಿರುವುದರಿಂದ ಅಲ್ಲಿಗೆ ಹೋಗಿ ವ್ಯಾಸಂಗ ಮಾಡುವವರಿಗಾಗಿ ಈ ನೀತಿಯಾಗಿದೆ ಎಂಬುದು ಮುಚ್ಚಿಟ್ಟ ಸತ್ಯ. ದುಡಿಯುವ ಜನರು ಮತ್ತು ದಲಿತ ದಮನಿತ ವಿಭಾಗಗಳು ಈ ಸಂಚನ್ನು ಅರ್ಥಮಾಡಿಕೊಳ್ಳಬೇಕು.
ಇದನ್ನು ಓದಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 20 – ಹೊಸದು ಏನಿದೆ? NEP ಹೇಳಿದ್ದೇನು? ಬಚ್ಚಿಟ್ಟಿದ್ದೇನು?
ಇನ್ನು ಈ ಶಿಕ್ಷಣ ನೀತಿ ಭಾರತದ ಪರಂಪರಾಗತ ಶಿಕ್ಷಣ ಕ್ರಮವನ್ನು ಮರಳಿ ತರುವ ಮಾತುಗಳನ್ನಾಡುತ್ತಿದೆ. ಎಂದರೆ ಭಾರತದಲ್ಲಿ ಇದುವರೆಗೆ ಇದ್ದ ಶಿಕ್ಷಣ ದೋಷ ಪೂರಿತವಿತ್ತೇ? ಈಗ ಈ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಲು ಹೊರಟಿರುವವರೂ ಈ ಹಿಂದಿನ ಪದ್ಧತಿಯಲ್ಲಿಯೇ ಕಲಿತು ಬಂದಿರುವವರಲ್ಲವೇ? ಹಾಗಾದರೆ ಅಲ್ಲಿ ಗುರುತಿಸಿದ ಕೊರತೆಗಳೇನು ಎಂಬುದನ್ನು ತಿಳಿಸಿ ಜನರಿಗೆ ಮನವರಿಕೆ ಮಾಡಲೇ ಬೇಕಲ್ಲವೇ. ಇದರ ಜೊತೆಗೆ ಎಲ್ಲ ಹಂತಗಳಲ್ಲಿ ಖಾಸಗೀ ಕ್ಷೇತ್ರಕ್ಕೆ ಆದ್ಯತೆ ಕೊಡುವ ಸೂಚನೆಗಳಿದ್ದು ಈಗಾಗಲೇ ಮುಚ್ಚಿರುವ ಸಾವಿರಾರು ಸರಕಾರಿ ಶಾಲೆ ಕಾಲೇಜುಗಳ ಜೊತೆ ಇನ್ನಷ್ಟು ಸೇರಲಿದೆ.
40% ಆನ್ಲೈನ್ = ಶಿಕ್ಷಣ ವಂಚನೆ
ಅಲ್ಲದೆಯೇ ನೂತನ ಶಿಕ್ಷಣ ಪದ್ಧತಿಯ ಪ್ರಕಾರ 40% ಆನ್ಲೈನ್ ಮೂಲಕ ಪಡೆಯಬಹುದೆಂದಿದೆ. ಆ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಅಧಿಕೃತ ಆದೇಶವೂ ಹೊರಬಿದ್ದಿದೆ. ಇದು ಕಾಲಕ್ರಮೇಣ ಪಡೆಯಬಹುದು ಎಂಬುದರಿಂದ ಪಡೆಯಬೇಕು ಎಂದಾದರೆ ಒಂದೇ ಏಟಿಗೆ ಭಾರತದ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣದ ಬದಲು ಕೃಷಿ ಕೂಲಿಕಾರರಾಗಿ ತಳ್ಳಲ್ಪಡುತ್ತಾರೆ ಮತ್ತು ಅದರಲ್ಲಿ ಮೊದಲ ಸಾಲಿನಲ್ಲಿ ಹೆಣ್ಣು ಮಕ್ಕಳಿರುತ್ತಾರೆ. ಯಾಕೆಂದರೆ ನಗರಗಳಲ್ಲಿಯೇ ಇಂದಿಗೂ ಸಮರ್ಪಕ ವಿದ್ಯುತ್ ಪೂರೈಕೆ ಮತ್ತು ಮೊಬೈಲ್ ನೆಟ್ವರ್ಕ್ಗಳು ಸಿಗದ ಪರಿಸ್ಥಿತಿ ಇರುವಾಗ ಇನ್ನು ಗ್ರಾಮೀಣ ಪ್ರದೇಶದಲ್ಲಿ ಎಲ್ಲಿ ಸಿಕ್ಕೀತು. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಕಾರಣದಿಂದ ಪ್ರಾರಂಭವಾದ ಆನ್ಲೈನ್ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಯಾವುದೋ ಬೆಟ್ಟ ಗುಡ್ಡಗಳ ಮೇಲೆ ಹೋಗಿ ಕುಳಿತುಕೊಂಡು ನೆಟ್ವರ್ಕಿಗಾಗಿ ಪರದಾಡುವ ಸ್ಥಿತಿ ಇದೆ. ಇನ್ನು ಕೋವಿಡ್ ಲಾಕ್ ಡೌನ್ ತಂದಿತ್ತ ಆರ್ಥಿಕ ದಾರುಣತೆಯಿಂದಾಗಿ ಆದಾಯ ಕಳೆದುಕೊಂಡ ಜನರಿಗೆ ಮಕ್ಕಳಿಗೆ ಬೇಕಾದ ಆಂಡ್ರಾಯ್ಡ್ ಫೋನುಗಳನ್ನು ಎಲ್ಲಿಂದ ಒದಗಿಸಿಯಾರು. ಇಲ್ಲಿ ಕೂಡಾ ಮನೆಯಲ್ಲಿ ಮಗ ಮತ್ತು ಮಗಳು ಇದ್ದರೆ ಒಪ್ಪಿತ ಮೌಲ್ಯವೇ ಆಗಿ ಮಗನಿಗೆ ಪ್ರಾಶಸ್ತ್ಯ ಸಿಗುತ್ತದೆ. ಇಂಥಹ ಒಂದು ಕಾರಣವೇ ಸಾಕು ಸಾವಿರಾರು ಹೆಣ್ಣು ಮಕ್ಕಳು ಶಿಕ್ಷಣದ ಕಕ್ಷೆಯಿಂದ ಹೊರದಬ್ಬಲ್ಪಡುತ್ತಾರೆ. ಈಗಾಗಲೇ ಗ್ರಾಮೀಣ ಕ್ಷೇತ್ರದಲ್ಲಿ ಮಕ್ಕಳ ಆನ್ಲೈನ್ ತರಗತಿಗಳಿಗೆ ಅನುಕೂಲ ಕಲ್ಪಿಸಲು ತಾಳಿ ಮಾರಿ ಮೊಬೈಲ್ ಕೊಡಿಸಿದ ಸಂಗತಿಗಳು ನಮ್ಮ ರಾಜ್ಯದಲ್ಲಿಯೇ ನಡೆದ ಬೆಳಕಿಗೆ ಬಾರದ ಕಟು ಸತ್ಯವಾಗಿದೆ.
ಭಾರತದಂಥಹ ದೇಶದ ಕಟು ವಾಸ್ತವ ಸಂಗತಿಗಳನ್ನು ಪಕ್ಕಕ್ಕೆ ಸರಿಸಲಾಗಿದೆ. ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆಯ ಮತ್ತು ಅಸಮಾನ ಸಾಮಾಜಿಕ ಸ್ಥಿತಿಯನ್ನು ಕಡೆಗಣಿಸಿ ಪ್ರತಿ ಪದದಲ್ಲಿಯೂ ಅರ್ಹತೆ, ಯೋಗ್ಯತೆ ಎಂಬ ಪದ ಗುಚ್ಛಗಳೇ ಕಾಣಿಸಿಕೊಳ್ಳುತ್ತವೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಭಾಗ ಎರಡು ಉನ್ನತ ಶಿಕ್ಷಣದ 9.3 ಇ ಯಲ್ಲಿ “ಭೋದನೆ, ಸಂಶೋಧನೆ ಮತ್ತು ಸೇವೆಗಳ ಆಧಾರದಲ್ಲಿ ಅರ್ಹತಾನುಸಾರ ನೇಮಕಾತಿಗಳು ಮತ್ತು ಉದ್ಯೋಗ ಪ್ರಗತಿಯ ಮೂಲಕ ಬೋಧನೆ ಮತ್ತು ಸಾಂಸ್ಥಿಕ ನಾಯಕತ್ವದ ಸ್ಥಾನಗಳ ಸಮಗ್ರತೆಯನ್ನು ಮರುದೃಢೀಕರಿಸುವುದು.” ಎನ್ನುತ್ತದೆ. ಎಂದರೆ ಸಂವಿಧಾನ ನಿಗದಿಪಡಿಸಿದ ಮೀಸಲಾತಿಯಂಥಹ ಪರಿಕಲ್ಪನೆಗಳು ಮೌನವಾಗಿ ನೇಪಥ್ಯಕ್ಕೆ ತಳ್ಳಲ್ಪಡುತ್ತವೆ.
ಹಾಗೆಯೇ 10.8 ರಲ್ಲಿ ಖಾಸಗೀ ಮತ್ತು ಸರಕಾರೀ ಎರಡೂ ಕ್ಷೇತ್ರಗಳಲ್ಲಿ ಉನ್ನತ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ದಿ ಪಡಿಸಲು ಕ್ರಮಕೈಗೊಳ್ಳಬೇಕು ಎನ್ನುತ್ತದೆ. ಹಾಗೆಯೇ 10.9 ರಲ್ಲಿ ಬೃಹತ್ ಸಂಖ್ಯೆಯಲ್ಲಿ ಶ್ರೇಷ್ಟವಾದ ಸಾರ್ವಜನಿಕ ಸಂಸ್ಥೆಗಳನ್ನು ಅಭಿವೃದ್ದಿಪಡಿಸುವ ಬಲವಾದ ಆಕಾಂಕ್ಷೆಯೊಂದಿಗೆ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳೆರಡರಲ್ಲಿಯೂ ಪ್ರಗತಿ ಕಾಣುವಂತಾಗಬೇಕು. 10.10 ರಲ್ಲಿ ಮುಕ್ತ ದೂರ ಶಿಕ್ಷಣ ಮತ್ತು ಆನ್ಲೈನ್ ಕಾರ್ಯಕ್ರಮಗಳನ್ನು ನಡೆಸಲು ಸಂಸ್ಥೆಗಳಿಗೆ ಆಯ್ಕೆ ಇರುತ್ತದೆ. ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ಶಿಕ್ಷಣ ಏನಾಗಬಹುದೆಂದು ಮುನ್ಸೂಚನೆ ನೀಡಲಾಗಿದೆ.
ರಾಜ್ಯದ ಉನ್ನತ ಶಿಕ್ಷಣ ಸಚಿವರೇ ರಾಜ್ಯದಾದ್ಯಂತ ಇರುವ ವಿಶ್ವವಿದ್ಯಾಲಯಗಳಲ್ಲಿ ಈ ನೀತಿಯ ಪ್ರಚಾರ ಕಾರ್ಯ ನಡೆಸಿ ಅಲ್ಲಿ ತಮಗೆ ಬೇಕಾದವರಿಂದ ಈ ನೀತಿಯ ಪರವಾಗಿ ಮಾತುಗಳನ್ನಾಡಿಸುತ್ತಿದ್ದಾರೆ. ಪಟ್ಟ ಪದವಿ ಸ್ಥಾನ ಭದ್ರತೆಗಳ ಮೇಲೆ ಕಣ್ಣಿಟ್ಟವರು ಮುಕ್ತ ಕಂಠದಿಂದ ಈ ನೀತಿಯನ್ನು ಹಾಡಿ ಹೊಗಳುತ್ತಿದ್ದಾರೆ. ಇದು ನಿಜವಾಗಿಯೂ ಉತ್ತಮ ನೀತಿಯೇ ಆಗಿದ್ದರೆ ಇಂಥಹ ಮುಚ್ಚು ಮರೆಯ ಕಣ್ಣುಮುಚ್ಚಾಲೆಯಾಟದ ಅಗತ್ಯವಿತ್ತೇ? ಸರಕಾರ ನಿರ್ಭಿಡೆಯಿಂದ ವಿಧಾನಸಭೆಯಲ್ಲಿ ಮಂಡಿಸಿ ಚರ್ಚೆಗೆ ಬಿಟ್ಟು, ರಾಜ್ಯದ ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ಮಾಡಿ ಪ್ರಾಥಮಿಕ ಹಂತದಿಂದ ಪ್ರಾರಂಭಿಸಿ ಹಂತ ಹಂತವಾಗಿ ಶುರು ಮಾಡಬಹುದಿತ್ತಲ್ಲ. ಅದಿಲ್ಲದೇ ಈಗಿನ ಕಾರ್ಯವೈಖರಿ ನೋಡಿದರೆ… ಅಲ್ಲೊಂದು ಸಂಚು ಕಾಣಿಸುತ್ತದೆ.
ಹೀಗೆ ಪಟ್ಟಿ ಮಾಡುತ್ತ ಹೋದರೆ ತರಾತುರಿಯಲ್ಲಿ ಈ ಮಾದರಿಯನ್ನು ಅನ್ವಯಿಸುವ ಮೂಲಕ 34 ವರ್ಷಗಳ ನಂತರ ತಂದ ಶಿಕ್ಷಣ ನೀತಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಬದಲು ಸಂಪೂರ್ಣವಾಗಿ ಹದಗೆಡಿಸಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.