ಬೆಂಗಳೂರು: ಒಂದರಿಂದ ಐದನೇ ತರಗತಿಗೆ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಸಧ್ಯ 6 ರಿಂದ 8ನೇ ತರಗತಿಗಳನ್ನು ಆರಂಭ ಮಾಡಲಾಗುತ್ತಿದೆ. ಅದರ ಫಲಿತಾಂಶಗಳನ್ನು ನೋಡಿಕೊಂಡು 1 ರಿಂದ 5ನೇ ತರಗತಿಗಳನ್ನು ಆರಂಭ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರಾಥಮಿಕ ಶಾಲಾ ತರಗತಿಗಳನ್ನು ಆರಂಭಿಸುವ ಬಗ್ಗೆ ಚರ್ಚೆ ಮಾಡಿಲ್ಲ. ಸೋಮವಾರದಿಂದ ಅಂದರೆ ಸೆಪ್ಟೆಂಬರ್ 6 ರಿಂದ ಆರಂಭವಾಗುವ ತರಗತಿಗಳನ್ನು ಗಮನಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ಜೊತೆಗೆ ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಗೆ ಎನ್.ಡಿ.ಆರ್.ಎಫ್ ಅಡಿಯಲ್ಲಿ ರಾಜ್ಯಕ್ಕೆ ಅಗತ್ಯ ನೆರವು ದೊರಕಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಹಾಸ್ಟೆಲ್ ವಿದ್ಯಾರ್ಥಿಗಳ ಸೌಲಭ್ಯದ ಹೆಸರಲ್ಲಿ ಕೋಟಿ ಕೋಟಿ ಹಣ ಗುಳಂ ಮಾಡಿದ ಅಧಿಕಾರಿಗಳು
ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದು ಸಚಿವ ಸಂಪುಟದ ಸಭೆ ನಡೆಯಲಿದ್ದು, ಕೇಂದ್ರ ಅಧ್ಯಯನ ತಂಡ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಆಗಮಿಸಲಿದ್ದಾರೆ. ಅವರೊಂದಿಗೆ ಸಂಬಂಧಿತ ವಿಚಾರಗಳ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಸಲಾಗುವುದು. ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಯ ನಂತರ ಮತ್ತೊಮ್ಮೆ ಅಂತಿಮ ಸಭೆ ನಡೆಸಲಾಗುವುದು. ವರದಿಗಳನ್ನು ನೀಡಿ, ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಕೇಂದ್ರ ತಂಡವು ಪ್ರವಾಸ ಕೈಗೊಳ್ಳಲಿದ್ದು, ಅಧಿಕಾರಿಗಳು ಸಹ ಜೊತೆಯಾಗಲಿದ್ದಾರೆ. ಎಲ್ಲಿ ಅತಿ ಹೆಚ್ಚು ಹಾನಿಯಾಗಿದೆ ಅಲ್ಲಿ ಭೇಟಿ ನೀಡಿ ವರದಿ ನೀಡಲಿದ್ದಾರೆ. ಎನ್ಡಿಆರ್ಎಫ್ ನಿಧಿಯಡಿ ನಮಗೆ ಸಿಗಬೇಕಾದ ಅನುದಾನ ಸಿಗುತ್ತೆʼʼ ಎಂದು ಭರವಸೆ ನೀಡಿದರು.
ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜನರ ಸೇರುತ್ತಿರುವುದು, ಕೇಂದ್ರ ಸಚಿವರು ರ‍್ಯಾಲಿಗಳ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಲಾದ ಪ್ರಶ್ನೆ “ಎಲ್ಲವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿದೆ. ರ್ಯಾಲಿ, ಚುನಾವಣೆ, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರುವ ಸಂಬಂಧ ಮಾರ್ಗಸೂಚಿಗಳನ್ನು ಪುನಃ ಹೊರಡಿಸುತ್ತೇವೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇದೇ ವೇಳೆ ಚಾಮರಾಜನಗರದಲ್ಲಿನಿರ್ಮಾಣವಾಗಿರುವ ಹೆರಿಗೆ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲು ಹೋಗುವುದಿಲ್ಲ ಎಂದು ಹೇಳಿದ ಮುಖ್ಯಮಂತ್ರಿಗಳು ಈ ಕೂಡಲೇ ಆಸ್ಪತ್ರೆ ಕಾರ್ಯಾಂಭಕ್ಕೆ ಸೂಚನೆ ಕೊಡುತ್ತೇನೆ. ಸದ್ಯ ಅಧಿವೇಶನ ನಡೆಯುತ್ತಿರುವುದರಿಂದ ನಾನು ಹೋಗುತ್ತಿಲ್ಲ ಎಂದರು. ಚಾಮರಾಜನಗರಕ್ಕೆ ತೆರಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಹಿಂದೇಟು ಹಾಕಿದರು.