ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ಅಡುಗೆ ಅನಿಲ ದರವನ್ನು ಮತ್ತೆ ರೂ.25 ಏರಿಕೆ ಮಾಡಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸಿದೆ.
ಕೋವಿಡ್-19 ಸಾಂಕ್ರಾಮಿಕತೆಯಿಂದಾಗಿ ದೇಶದಲ್ಲಿ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅವರ ಜೀವನ ನಿರ್ವಹಣೆಯೇ ಕಷ್ಟಕರವಾಗಿದ್ದು, ಇದರ ಜೊತೆಯಲ್ಲಿ ಮೇಲಿಂದ ಮೇಲೆ ಅಡುಗೆ ಅನಿಲದ ದರ 25 ರೂಪಾಯಿವರೆಗೆ ಏರಿಕೆ ಮಾಡಿರುವುದು ಸಾಮಾನ್ಯ ಜನರಿಗೆ ಇನ್ನಷ್ಟು ಹೊರೆಯಾಗುವುದಲ್ಲದೆ, ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸಂಘಟನೆಯು ಆರೋಪಿಸಿದೆ.
ಇದನ್ನು ಓದಿ: ಮತ್ತೆ ಏರಿಕೆ ಕಂಡ ಎಲ್ಪಿಜಿ ದರ: ರೂ.25 ಹೆಚ್ಚಳ
ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಅವರ ಸಮಸ್ಯೆಗೆ ಸ್ಪಂದನೆ ಮಾಡಬೇಕಾದ ಸರ್ಕಾರಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆಯೊಂದು ಕಡೆಯಾದರೆ, ಇನ್ನೊಂದು ಕಡೆ ಅಡುಗೆ ಅನಿಲ ಏರಿಸುತ್ತಾ ಇನ್ನಷ್ಟು ಹೊರೆ ಹಾಕುತ್ತಿದೆ. ಕಳೆದ ಜುಲೈ 1ರಿಂದ ಇಲ್ಲಿಯವರೆ ಮೂರು ಬಾರಿ ಎಲ್ಪಿಜಿ ಬೆಲೆ ಹೆಚ್ಚಳವಾಗಿದೆ. ಜನವರಿಯಿಂದ-ಸೆಪ್ಟೆಂಬರ್ ವರೆಗೆ 190 ರೂ ಏರಿಕೆ ಮಾಡಿರುವುದು ಜನರ ಮೇಲೆ ಹೆಚ್ಚಿನ ಹೊರೆಯಾಗಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ) ಸಂಘಟನೆಯು ತಿಳಿಸಿದೆ.
ಕೇಂದ್ರ ಸರ್ಕಾರ ಗ್ರಾಮೀಣ ಜನರಿಗೆ ಉಚಿತ ಗ್ಯಾಸ್ ನೀಡುವುದಾಗಿ ಹೇಳಿ ಉಜ್ವಲಾ ಪಲಾನುಭವಿಗಳನ್ನು ಒಳಗೊಂಡು ಎಲ್ಲ ಅಡುಗೆ ಅನಿಲ ಬಳಕೆದಾರರ ಸಬ್ಸಿಡಿಗಳನ್ನು ಕಳೆದ ಸೆಪ್ಟೆಂಬರ್ನಿಂದಲೇ ಹಿಂಪಡೆದಿದೆ. ಈಗ ಪದೇಪದೇ ಅನಿಲ ದರ ಏರಿಕೆ ಮಾಡುವ ಮೂಲಕ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತದೆ. ಮುಂದೊಂದು ದಿನ ಕಟ್ಟಿಗೆ ಒಲೆಗೆ ದೂಡಲ್ಪಡುತ್ತದೆ. ಬೆಲೆ ಏರಿಕೆಯು ನೇರ ಬಡವರು ಮತ್ತು ಮಹಿಳೆಯರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ಏರಿಸಿರುವ ಗ್ಯಾಸ್ ದರವನ್ನು ಹಿಂಪಡೆಯಬೇಕೆಂದು ಸಂಘಟನೆ ರಾಜ್ಯ ಅಧ್ಯಕ್ಷರಾದ ದೇವಿ ಹಾಗೂ ಪ್ರಧಾನ ಕಾರ್ಯದರ್ಶಿ ಗೌರಮ್ಮ ಅವರು ಒತ್ತಾಯಿಸಿದ್ದಾರೆ.